ಉ.ಕ ಸುದ್ದಿಜಾಲ ಕಾಗವಾಡ :
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಕಾಗವಾಡ ಶಾಸಕ ರಾಜು ಕಾಗೆ, ಕ್ಷೇತ್ರದಲ್ಲಿ ಅನುದಾನ ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯ ಕುರಿತು ನಾನು ಮಾತನಾಡಿದ್ದೇನೆ ಹೊರತು ಸರ್ಕಾರದ ವಿರೋಧಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿದೆ ಎನ್ನಲಾಗುತ್ತಿದ್ದು, ಆ ವಿಚಾರ ನನಗೆ ಗೊತ್ತಿಲ್ಲ ಎಂದು ಹೇಳಿದರು. ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡದೇ ಇರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, “ಯತೀಂದ್ರ ಸಿದ್ದರಾಮಯ್ಯ ಅವರಿಗೆ ವೈಯಕ್ತಿಕ ಸ್ವಾತಂತ್ರ್ಯ ಇದೆ. ಅವರ ಅನಿಸಿಕೆಗಳನ್ನು ಅವರು ಹೇಳಿದ್ದಾರೆ” ಎಂದರು.
ಈ ವೇಳೆ ಯತೀಂದ್ರ ಸಿದ್ದರಾಮಯ್ಯಗೆ ಟಾಂಗ್ ನೀಡಿದ ರಾಜು ಕಾಗೆ, “ನಾನು ಮುಂದಿನ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದರೆ ಅದು ಸಾಧ್ಯವೇ?” ಎಂದು ಪ್ರಶ್ನಿಸಿದರು.
ಅನುದಾನ ಹಂಚಿಕೆಯಲ್ಲಿ ಅಸಮಾನತೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, “ಬೆಳಗಾವಿ ಜಿಲ್ಲೆಯ ಒಂದೊಂದು ತಾಲೂಕಿಗೆ ಒಂದೊಂದು ರೀತಿಯ ಪರಿಹಾರ ನೀಡಲಾಗುತ್ತಿದೆ.
ರಾಯಬಾಗ ತಾಲೂಕಿನ ಹಳ್ಳಿಗಳಿಗೆ 52 ಲಕ್ಷ ರೂ. ಪರಿಹಾರ ನೀಡಿದರೆ, ನಮ್ಮ ತಾಲೂಕಿನಿಗೆ ಕೇವಲ 27 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇದು ಮಲತಾಯಿ ಧೋರಣೆ ಅಲ್ಲವೇ?” ಎಂದು ಪ್ರಶ್ನಿಸಿದರು.
“ನೆರೆಯವರಿಗೆ ಹೋಳಿಗೆ ತುಪ್ಪ, ನಮಗೆ ಕಟಕರೊಟ್ಟಿ, ಕಾರ ಮತ್ತು ನೀರು ಎಂಬಂತಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
VIDIO – ನೆರೆಯವರಿಗೆ ಹೋಳಿಗೆ ತುಪ್ಪ, ನಮಗೆ ಕಟಕರೊಟ್ಟಿ, ಖಾರ – ನೀರು – ಶಾಸಕ ಕಾಗೆ ಅಸಮಾಧಾನ


