ಉ.ಕ ಸುದ್ದಿಜಾಲ ಕಾಗವಾಡ :

ದಸರಾ ಅಂದಾಗ ನಮಗೆಲ್ಲ ನೆನಪಾಗುವುದು ಆಣೆಯ ಮೇಲೆ ಅಂಬಾರಿ ಚಾಮುಂಡಿ ದೇವಿ ವಿಗ್ರಹ ಪೂಜೆ ಸಕಲ ಸಾಂಸ್ಕೃತಿಕ ಕಲಾ ಮೇಳಗಳೊಳಗೊಂಡ ಅತ್ಯಂತ ವಿಜೃಂಭಣೆಯಿಂದ ಆಚರಿಸುವ ದಸರಾ ವೈಭವ, ಅದರಂತೆ ನಮ್ಮ ಬೆಳಗಾವಿಯ ಗಡಿ ಭಾಗದಲ್ಲಿ ಅಂದರೆ ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದಲ್ಲಿ ನವರಾತ್ರಿಯಂದು ದಸರಾ ಹಬ್ಬವನ್ನು ಆಚರಿಸಲಾಗುತ್ತದೆ.

ಉಗಾರ ಪದ್ಮಾವತಿ ದೇವಿಗೆ ಅಷ್ಟ ದ್ರವ್ಯಗಳಿಂದ ಅಭಿಷೇಕ

ಮೈಸೂರು ಚಾಮುಂಡಿ ದೇವತೆಗೆ ಯಾವ ರೀತಿಯಾಗಿ ನವರಾತ್ರಿ ಹಬ್ಬವನ್ನ ಆಚರಿಸುತ್ತಾರೋ ಅದೇ ರೀತಿಯಾಗಿ ಕಾಗವಾಡ ತಾಲೂಕಿನ ಉಗಾರ ಗ್ರಾಮದ ಶ್ರೀ ಪದ್ಮಾವತಿ ಅಮ್ಮನವರಿಗೆ ನವರಾತ್ರಿ ಹಬ್ಬವನ್ನ ಆಚರಿಸುತ್ತಾರೆ.

ಇದು 300 ಕ್ಕೂ ಅಧಿಕ ವರ್ಷಗಳಿಂದ ರೂಢಿಯಲ್ಲಿರುವ ಆಚರಣೆ. ಮೈಸೂರಿಗೆ ಚಾಮುಂಡಿ ನಾಡ ದೇವತೆಯಾದರೆ ಶ್ರೀ ಪದ್ಮಾವತಿ ದೇವಿ ಉಗಾರ ಗ್ರಾಮ ದೇವತೆ, ಒಂದೇ ಆಚರಣೆಯಾದರೂ ಪೂಜೆ ಪುನಸ್ಕಾರ ಮಾತ್ರ ಬೇರೆ ಬೇರೆ ಆಗಿದೆ ಅಷ್ಟೇ.

ಶ್ರಾವಣಮಾಸ ಹಾಗೂ ದಸರಾ ಹಬ್ಬ ಬಂತೆಂದರೆ ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಕಾಗವಾಡ ತಾಲ್ಲೂಕಿನ ಕೃಷ್ಣಾ ನದಿ ತೀರದ ಉಗಾರ ಗ್ರಾಮದ ಪದ್ಮಾವತಿ ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ತಾಯಿ ಪದ್ಮಾವತಿ ದೇವಿ ನೆಲೆಸಿರುವದರಿಂದ ಈ ಗ್ರಾಮಕ್ಕೆ ಪದ್ಮಾವತಿ ಉಗಾರ ಎಂದೇ ಪ್ರಖ್ಯಾತಗೊಂಡಿದೆ. 

ವಿಜಯದಶಮಿಯ ಹಬ್ಬದ 9 ದಿನಗಳ ಕಾಲ ಗ್ರಾಮದಲ್ಲಿ ಜಾತ್ರೆಯ ಸ್ವರೂಪವೇ ಬಂದಿರುತ್ತದೆ. ಎಲ್ಲಿ ನೋಡಿದ್ದಲ್ಲಿ ಭಕ್ತಜನರ ದಂಡೇ ದಂಡು. ಎಲ್ಲರಲ್ಲೂ ಪದ್ಮಾವತಿ ದೇವಿಯ ದರ್ಶನ ಪಡೆಯುವ ತವಕ ಶ್ರದ್ಧಾಭಕ್ತಿಯಿಂದ ದೇವಿಗೆ ನಮಸ್ಕರಿಸಿ ಅವಳ ಕೃಪಾಶೀರ್ವಾದಕ್ಕೆ ಹಾತೊರೆಯುತ್ತಾರೆ.

ಶೃದ್ಧಾಭಕ್ತಿಯಿಂದ ದೇವಿಯ ಆರಾಧನೆ ಮಾಡಿದರೆ ದೇವಿ ಒಲೆಯುವುದು ನಿಶ್ಚಿತ ಎಂಬುದು ಪ್ರತೀತಿ. ಪದ್ಮಾವತಿ ದೇವಿ ಉಗಾರ ಗ್ರಾಮದ ಗೌಡರ ಮನೆಯಲ್ಲಿ ವಾಸವಾಗಿರುವದಕ್ಕೆ ನೂರಾರು ವರ್ಷಗಳ ಇತಿಹಾಸವುಂಟು.

ಗೌಡರ ಸೊಸೆ ಪದ್ಮಾವತಿ ದೇವಿಯ ಆರಾಧಕಳಾಗಿದ್ದಳು ಅವಳ  ಭಕ್ತಿಗೆ ಮೆಚ್ಚಿ ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರ ಜಿಲ್ಲೆಯ ಹಾತಕನಗಲಾ ತಾಲ್ಲೂಕಿನ ಕುಂಭೋಜ ಗ್ರಾಮದಿಂದ ಪದ್ಮಾವತಿ ದೇವಿ ಉಗಾರ ಗ್ರಾಮಕ್ಕೆ ಬಂದು ನೆಲೆಸಿದ್ದಾಳೆ ಎಂದು ಪ್ರಚಲಿತ ಕಥೆಯಾಗಿದೆ.

ಅಂದಿನಿಂದ ಗೌಡರ ವಾಡೆಯ ಪಕ್ಕದಲ್ಲಿ ಸುಂದರವಾದ ಮಂದಿರ ನಿರ್ಮಿಸಿ ಪದ್ಮಾವತಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದೆ. ಗೌಡರ ಮನೆಯಲ್ಲಿ ದೇವಿ ವಾಸವಾಗಿರುವುದರಿಂದ ದೇವಿಯ ಆರಾಧನೆಯ ಪ್ರಥಮ ಪ್ರಾಸಸ್ತ್ಯ ಗೌಡರಿಗೆ ಸಲ್ಲುತ್ತದೆ. ಗೌಡರ ಮನೆತನದವರು ದೇವಿಯ ದರ್ಶನ ಪಡೆದುಕೊಂಡ ನಂತರವೇ ತಮ್ಮ ದಿನಚರಿಯನ್ನು ಪ್ರಾರಂಭಿಸುತ್ತಾರೆ.

ಪದ್ಮಾವತಿ ಅಮ್ಮನವರಿಗೆ ಪ್ರತಿದಿನ ಮೂರು ಬಾರಿ ಅಭೀಷೇಕವಾಗುತ್ತದೆ. ಬೆಳಿಗ್ಗೆ ಜಲಾಭಿಷೇಕ. ಮಧ್ಯಾಹ್ನ ಪಂಚಾಭೃತಾಭಿಷೇಕ. ಸಂಜೆ ಕ್ಷೀರಾಭೀಷೇಕ.

ಪದ್ಮಾವತಿ ಅಮ್ಮನವರನ್ನು ಬೆಳ್ಳಿಯ ಪಲ್ಲಕ್ಕಿ ಮೆರವಣಿಗೆಯಲ್ಲಿ ಕೃಷ್ಣೆಯ ನದಿಯ ಬಳಿ ತೆಗೆದುಕೊಂಡು ಹೋಗಿ ನದಿದಡದಲ್ಲಿ ಲೋಕಕಲ್ಯಾಣಾರ್ಥವಾಗಿ ಪಂಚಾಭೃತ ಅಭಿಷೇಕವನ್ನ ಮಾಡಲಾಗುತ್ತದೆ. ಈ ಅಭಿಷೇಕಕ್ಕೆ ಭಕ್ತರಿಂದ ಹರಿದು ಬರುವ ಪದಾರ್ಥಗಳು ಲೆಕ್ಕ ಸಿಗದಷ್ಟು ಸಂಗ್ರಹವಾಗುತ್ತವೆ.

ಸಂಗ್ರಹಗೊಂಡ ಪೂಜಾ ಪದಾರ್ಥಗಳನೆಲ್ಲ ದೇವರಿಗೆ ಅಭಿಷೇಕದ ಮೂಲಕ ಅರ್ಪಿಸಿ ಕೃಷ್ಣ ನದಿಗೆ ಸಮರ್ಪಿಸಲಾಗುತ್ತದೆ. ಈ ಸಂಧರ್ಭದಲ್ಲಿ ಸುಮಾರು 40 ರಿಂದ 50 ಸಾವಿರ ಭಕ್ತಾದಿಗಳು ಪಾಲ್ಗೊಂಡು ಪುನೀತರಾಗುತ್ತಾರೆ.

ಇಂದಿಗೂ ಕೂಡ ಬಾಪುಗೌಡ ಅಪ್ಪುಗೌಡ ಪಾಟೀಲ, ಶೀತಲ್‍ಗೌಡ ಪಾಟೀಲ, ವೃಷಭಗೌಡ ಪಾಟೀಲ ಹಾಗೂ ಅವರ ಕುಟುಂಬ ವರ್ಗದವರು ಚಾಚು ತಪ್ಪದೇ ಪಾಲಿಸಿಕೊಂಡು ಬಂದಿದ್ದಾರೆ.

ಪಂಡಿತರಾದ  ಅಶೋಕ ಉಪಾಧ್ಯೆ,  ಸುರೇಂದ್ರ ಉಪಾಧ್ಯೆ, ಭರತ ಉಪಾಧ್ಯೆ, ಉದಯ ಉಪಾಧ್ಯೆ, ಬಾಹುಬಲಿ ಉಪಾಧ್ಯೆ, ದಿಲೀಪ ಉಪಾಧ್ಯೆ, ದೇವಿಯ ಪೂಜೆಯ ಉತ್ಸವಾರಿಯನ್ನು  ವಹಿಸಿಕೊಂಡಿದ್ದಾರೆ. 

ನವರಾತ್ರಿಯ 9 ದಿನಗಳ ಕಾಲ ದೇವಿಯ ಮಂದಿರಕ್ಕೆ ವಿದ್ಯುತ್ ದೀಪಾಲಂಕಾರ, ಮಾಡಿ 40 ಅಖಂಡ ತುಪ್ಪದ ಜ್ಯೋತಿಗಳನ್ನು ಬೆಳಗಲಾಗುತ್ತದೆ. ಮುಂಜಾನೆ ಪಂಚಾಮೃತ ಅಭಿಷೇಕ, ಮಹಾಶಾಂತಿ ಮಂತ್ರ, ದೇವಿಯ ಅಲಂಕಾರ, ಅಷ್ಟಕ ಸ್ತೋತ್ರ, ಕುಂಕುಮ ಅರ್ಚನೆ ಸಾಯಂಕಾಲ ಅಭಿಷೇಕ ಹಾಗೂ ರಾತ್ರಿ 7 ಗಂಟೆಗೆ ಆದರ್ಶ ಮಹಿಳಾ ಮಂಡಳದ ವತಿಯಿಂದ ದಾಂಡಿಯಾ ಹಾಗೂ ಗರ್ಭಾ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. 

ಈ ಸಮಯದಲ್ಲಿ 100 ಲೀ. ಹಾಲು, ಮೊಸರು, ತುಪ್ಪಗಳಿಂದ ಅಭಿಷೇಕ ಮಾಡಲಾಗುತ್ತದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಿಂದ ಸಾವಿರಾರು ಭಕ್ತರು ಈ ಪೂಜೆಯನ್ನು ವೀಕ್ಷಿಸಲು ಆಗಮಿಸುತ್ತಾರೆ.

ಕೃಷ್ಣಾ ನದಿಯಲ್ಲಿ ದೇವಿಯ ಪೂಜೆ ಶೃದ್ಧಾ ಭಕ್ತಿಯಿಂದ ಜರುಗುತ್ತಿರುವಾಗಲೇ ಮೇಘರಾಜ 5 ಮಳೆಯ ಹನಿಗಳನ್ನಾದರೂ ಸುರಿಸಿ ಭಕ್ತರ ಭಕ್ತಿಯನ್ನು ಸಾಕ್ಷಿಕರಿಸುತ್ತಾನೆ. ಆ ಮಳೆ ಹನಿಗೆ ಮುತ್ತಿನ ಮಳೆಯಂದೇ ಕರೆಯಲ್ಪಡುತ್ತಾರೆ. ಸಾವಿರಾರು ವರ್ಷಗಳಿಂದ ಇದು ನಡೆದುಕೊಂಡು ಬಂದ ಸಾಂಪ್ರದಾಯ ಹಾಗೂ ದೇವಿಯ ಮಹಾತ್ಮೆಯಾಗಿದೆ.

ಶ್ರೀ ಪದ್ಮಾವತಿ ದೇವಿಯ ಮಹಾತ್ಮೆ. ಪವಾಡಗಳು. ಸಿಲ್ಲಂಗಡಿ. ಹರಕೆ ಕೋರುವುದು. ಶ್ರಾವಣದ ಪ್ರತಿ ಶುಕ್ರವಾರದಂದು ಭಕ್ತಾದಿಗಳು ಪಾದಯಾತ್ರೆ ಮೂಲಕ ಕ್ಷೇತ್ರಕ್ಕೆ ಬರುವುದು. ಆರಾಧನೆ ಮುಂತಾದ ಸೇವೆಗಳು ವರ್ಷದುದ್ದಕ್ಕೂ ನಡೆಯುತ್ತವೆ,