ಉ.ಕ ಸುದ್ದಿಜಾಲ ಹುಕ್ಕೇರಿ :
ಧರ್ಮಗಳ ನಡುವಿನ ಗೋಡೆಗಳಿಗಿಂತ ಮಾನವೀಯತೆ ದೊಡ್ಡದು ಎಂಬುದನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ತವಾಡ ಗ್ರಾಮದ ದಂಪತಿ ಸಾಬೀತುಪಡಿಸಿದ್ದಾರೆ. ತಾವೊಬ್ಬರು ಮುಸ್ಲಿಂ ಸಮುದಾಯದವರಾಗಿದ್ದರೂ ಅನಾಥರಾದ ಇಬ್ಬರು ಹಿಂದೂ ಬಾಲಕರನ್ನು ಸಾಕಿ ಸಲಹಿ, ಈಗ ಹಿರಿಯ ಮಗನಿಗೆ ಹಿಂದೂ ಸಂಪ್ರದಾಯದಂತೆಯೇ ಮದುವೆ ಮಾಡಿಸುವ ಮೂಲಕ ಕೋಮು ಸೌಹಾರ್ದತೆಗೆ ಹೊಸ ಭಾಷ್ಯ ಬರೆದಿದ್ದಾರೆ.
ಘಟನೆಯ ಹಿನ್ನೆಲೆ :
ಬಸ್ತವಾಡ ಗ್ರಾಮದ ಮೆಹಬೂಬ್ ಹಸನ್ ನಾಯಿಕವಾಡಿ ಮತ್ತು ನೂರ್ಜಹಾನ್ ದಂಪತಿಯೇ ಈ ಮಹತ್ಕಾರ್ಯ ಮಾಡಿದವರು. ಸುಮಾರು ವರ್ಷಗಳ ಹಿಂದೆ ಪೂಜಾರಿ ಕುಟುಂಬವೊಂದರ ಪೋಷಕರು ಮೃತಪಟ್ಟಾಗ ೪ ವರ್ಷದ ಸೋಮಶೇಖರ್ ಮತ್ತು ೨ ವರ್ಷದ ವಸಂತ ಅನಾಥರಾಗಿದ್ದರು. ಆಗ ಈ ಮಕ್ಕಳ ಜವಾಬ್ದಾರಿ ಹೊತ್ತ ನಾಯಿಕವಾಡಿ ದಂಪತಿ, ಅವರನ್ನು ತಮ್ಮ ಸ್ವಂತ ಮಕ್ಕಳಂತೆ ಪ್ರೀತಿಯಿಂದ ಸಾಕಿದರು. ಅವರಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ, ಅವರ ಮೂಲ ಧರ್ಮದ ಆಚರಣೆಗಳಿಗೆ ಯಾವುದೇ ಅಡ್ಡಿಪಡಿಸದೆ ಬೆಳೆಸಿದರು.
ಸಂಭ್ರಮದ ಮದುವೆ :
ಈಗ ದೊಡ್ಡ ಮಗ ಸೋಮಶೇಖರ್ ವಿವಾಹ ವಯಸ್ಸಿಗೆ ಬಂದಿದ್ದು, ದಂಪತಿಗಳು ಸ್ವತಃ ಮುಂದೆ ನಿಂತು ಹಿಂದೂ ಧರ್ಮದ ವಿಧಿವಿಧಾನಗಳ ಪ್ರಕಾರವೇ ಕನ್ಯೆಯನ್ನು ಹುಡುಕಿ ಮದುವೆ ನೆರವೇರಿಸಿದ್ದಾರೆ. ಮದುವೆಯ ಆಮಂತ್ರಣ ಪತ್ರದಲ್ಲಿಯೂ ತಮ್ಮ ಹೆಸರಿನೊಂದಿಗೆ ಮಕ್ಕಳ ಮೂಲ ಧರ್ಮದ ಗುರುತನ್ನು ಉಳಿಸಿ ಗೌರವಿಸಿದ್ದಾರೆ.
ಮಾನವೀಯತೆ ಮೆರೆದ ಮುಸ್ಲಿಂ ದಂಪತಿ : ಅನಾಥ ಹಿಂದೂ ಯುವಕನಿಗೆ ಶಾಸ್ತ್ರೋಕ್ತ ವಿವಾಹ


