ಉ.ಕ ಸುದ್ದಿಜಾಲ ಅಥಣಿ :
ಗ್ರಾಮೀಣ ಕೃಷಿಯಲ್ಲಿ ಮಹಿಳೆಯರು ಸಹಾಯಕ ಪಾತ್ರದಲ್ಲೇ ಸೀಮಿತ ಎಂಬ ಕಲ್ಪನೆಗೆ ಸಂಬರಗಿ ಗ್ರಾಮದ ಇಬ್ಬರು ಮಹಿಳಾ ರೈತರು ಸ್ಪಷ್ಟ ಸವಾಲು ಹಾಕಿದ್ದಾರೆ. ಕೇವಲ ತಮ್ಮ ಶ್ರಮ, ಯೋಜನೆ ಮತ್ತು ಆತ್ಮವಿಶ್ವಾಸದ ಮೂಲಕ ನಾಲ್ಕು ತಿಂಗಳ ಅವಧಿಯಲ್ಲಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಿ, 100 ಗ್ರಾಂ ಚಿನ್ನ ಖರೀದಿಸುವ ಮೂಲಕ “ನಾವು ಯಾರಿಗೂ ಕಮ್ಮಿ ಇಲ್ಲ” ಎಂಬ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಬರಗಿ ಗ್ರಾಮದ ದೀಪಾಲಿ ಮಾಣಿಕ ಅವಳೆಕರ ಮತ್ತು ವಿಶ್ರಾಂತಿ ಬಂಡು ಅವಳೆಕರ ಅವರು 12 ಎಕರೆ ಕೃಷಿ ಭೂಮಿಯಲ್ಲಿ ವಿಭಿನ್ನ ತರಕಾರಿ ಬೆಳೆಗಳನ್ನು ಬೆಳೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಈ ಭೂಮಿಯಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ಚವಳೆಕಾಯಿ, ಒಂದು ಎಕರೆ ಮೆಣಸು, ಒಂದು ಎಕರೆ ಅವರೆಕಾಯಿ ಹಾಗೂ ಉಳಿದ ಭಾಗದಲ್ಲಿ ಮುಸುಕಿನ ಜೋಳ ಬೆಳೆದಿದ್ದಾರೆ. 13 ಟನ್ ಚವಳೆಕಾಯಿ – ಲಕ್ಷಾಂತರ ಆದಾಯ ಚವಳೆಕಾಯಿ ಬೆಳೆ ಉತ್ತಮ ಬೆಳವಣಿಗೆಯಾಗಿ ಸುಮಾರು 13 ಟನ್ ಉತ್ಪಾದನೆ ಲಭ್ಯವಾಗಿದೆ.
ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗೆ ರೂ.120 ರಿಂದ 130 ದರವರೆಗೆ ಮಾರಾಟವಾಗಿದ್ದು, ಇದರಿಂದಲೇ ಮಹಿಳೆಯರಿಗೆ ಉತ್ತಮ ಆದಾಯ ಲಭಿಸಿದೆ. ಇತರೆ ತರಕಾರಿ ಬೆಳೆಗಳಿಂದ ಕೂಡ ಸೇರಿಸಿ, ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು ರೂ.10 ಲಕ್ಷ ಆದಾಯ ಗಳಿಸಿದ್ದಾರೆ.
ಶ್ರಮಕ್ಕೆ ಸಿಕ್ಕ ಪ್ರತಿಫಲ – 100 ಗ್ರಾಂ ಚಿನ್ನ
ತಮ್ಮ ದುಡಿಮೆಯ ಹಣದಿಂದ ಅಕ್ಕ–ತಂಗಿಯರು 100 ಗ್ರಾಂ ಚಿನ್ನದ ಒಡವೆ ಖರೀದಿಸಿದ್ದು, ಇದು ಕೇವಲ ಆಭರಣವಲ್ಲ, ಮಹಿಳಾ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯದ ಸಂಕೇತವಾಗಿದೆ. “ಕೃಷಿಯಲ್ಲಿ ಗಂಡಂದಿರಿಗಿಂತ ನಾವು ಕಡಿಮೆ ಇಲ್ಲ” ಎಂಬುದನ್ನು ಅವರು ಕಾರ್ಯರೂಪದಲ್ಲಿ ತೋರಿಸಿದ್ದಾರೆ.
ಕುಟುಂಬದೊಳಗಿನ ಸಮಾನತೆಗೂ ಮಾದರಿ
ಮೂರು ಎಕರೆ ಕೃಷಿ ಭೂಮಿಯಲ್ಲಿ ಕುಟುಂಬದ ಪುರುಷರು ರೂ.32 ಲಕ್ಷ ಆದಾಯ ಗಳಿಸಿದ್ದರೆ, ಅದಕ್ಕೆ ಸೈ ಎನ್ನುವಂತೆ ಈ ಇಬ್ಬರು ಮಹಿಳೆಯರು ತಮ್ಮದೇ ಶ್ರಮದಿಂದ ಲಕ್ಷಾಂತರ ಆದಾಯ ಗಳಿಸಿ ಕುಟುಂಬದ ಆರ್ಥಿಕತೆಗೆ ಸಮಾನ ಕೊಡುಗೆ ನೀಡಿದ್ದಾರೆ.
ಮಹಿಳಾ ರೈತರಿಗೆ ಪ್ರೇರಣೆ ಸಂಬರಗಿ ಗ್ರಾಮದ ಈ ಸಾಧನೆ, ಕೃಷಿಯಲ್ಲಿ ಮಹಿಳೆಯರ ಪಾತ್ರ ಕೇವಲ ಸಹಾಯಕವಲ್ಲ, ಮುಖ್ಯವೂ ಹೌದು ಎಂಬುದನ್ನು ತೋರಿಸಿದೆ. ಶ್ರಮ, ಯೋಜನೆ ಮತ್ತು ಧೈರ್ಯವಿದ್ದರೆ ಮಹಿಳೆಯರೂ ಮಣ್ಣಲ್ಲೇ ಚಿನ್ನ ಕಂಡುಕೊಳ್ಳಬಹುದು ಎಂಬುದಕ್ಕೆ ಈ ಅಕ್ಕ–ತಂಗಿಯರ ಸಾಧನೆ ಜೀವಂತ ಉದಾಹರಣೆ.


