ಉ.ಕ ಸುದ್ದಿಜಾಲ‌ ಬೆಳಗಾವಿ :

ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಸಂಭವಿಸಿದದ್ದ ದುರ್ಘಟನೆಯಲ್ಲಿ ಮೃತಪಟ್ಟ ಅಥಣಿ ಪಟ್ಟಣದ ಕಾರ್ಮಿಕ ಮಂಜುನಾಥ ತೇರದಾಳ ಪತ್ನಿ ತುಂಬು ಗರ್ಭಿಣಿಯಾಗಿದ್ದು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.

ಮೂರು ವರ್ಷಗಳ ಹಿಂದೆ ಮೃತ ಮಂಜುನಾಥ ಶೃತಿ ಅವರನ್ನು ಮದುವೆಯಾಗಿದ್ದರು. ತುಂಬು ಗರ್ಭಿಣಿಯಾಗಿರುವ ಶೃತಿ ಅವರಿಗೆ ಬರುವ ಜನವರಿ 16 ಕ್ಕೆ ಹೆರಿಗೆ ದಿನಾಂಕವನ್ನು ವೈದ್ಯರು ನೀಡಿದ್ದಾರೆ.

ಮಂಜುನಾಥ ಬದುಕಲ್ಲಿ ವಿಧಿ ಆಟವಾಡಿದ್ದು ಇನ್ನೇನು ಒಂದು ವಾರದಲ್ಲಿ ಮುದ್ದು ಮಗುವಿನ ಮುಖ ನೋಡಬೇಕಾಗಿದ್ದ ತಂದೆ ಭೀಕರ ದುರಂತದಲ್ಲಿ ಮೃತಪಟ್ಟಿದ್ದು ವಿಪರ್ಯಾಸವೇ ಸರಿ.

ದುರಂತದಲ್ಲಿ ಎಂಟು ಕಾರ್ಮಿಕರ ಸಾವು :

ಬೈಲಹೊಂಗಲ ಸಕ್ಕರೆ ಕಾರ್ಖಾನೆ ಬಾಟ್ಲರ್ ಸ್ಪೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಗಂಭೀರವಾಗಿ ಗಾಯಗೊಂಡು ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರು ಮೃತಪಟ್ಟಿದ್ದಾರೆ.

ಮೃತರು ಬೈಲಹೊಂಗಲ ತಾಲೂಕಿನ ಅರವಳ್ಳಿ ಗ್ರಾಮದ ಮಂಜುನಾಥ ಕಾಜಗಾರ (28), ಗೋಕಾಕ್ ತಾಲೂಕಿನ ಗೊಡಚಿಮಲ್ಕಿ ಗ್ರಾಮದ ಭರತೇಶ ಸಾರವಾಡ (27), ಜಮಖಂಡಿ ತಾಲೂಕಿನ ಮರೆಗುದ್ದಿ ಗ್ರಾಮದ ಗುರುಪಾದಪ್ಪ ತಮ್ಮಣ್ಣವರ (38) ಹಾಗೂ ಅಥಣಿ ಪಟ್ಟಣದ ಮಂಜುನಾಥ ತೇರದಾಳ (31) ಹಾಗೂ ಗೋಕಾಕ್ ತಾಲೂಕಿನ ಗಿಳಿಹೊಸುರ ಗ್ರಾಮದ ರಾಘವೇಂದ್ರ ಗಿರಿಯಾಳ (32) ಗುರುವಾರ ಬೆಳಗಾವಿ ಕೆಎಲ್‌ಇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಬುಧವಾರ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದ ಇನಾಮದಾರ ಸಕ್ಕರೆ ಕಾರ್ಖಾನೆಯಲ್ಲಿ ಮೊದಲನೆ ಕಂಪಾರ್ಟಂಟಿನ ಬಾಯರ್ ವಾಲ್ ಏಕಾಏಕಿ ಸಿಡಿದ ವೇಳೆ ಬಿಸಿ ಮಳ್ಳಿ ಸ್ಥಳದಲ್ಲೇ ಕೆಲಸ ಮಾಡುತ್ತಿದ್ದ 8 ಜನ ಕಾರ್ಮಿಕರ ಮೇಲೆ ಬಿದ್ದಿತ್ತು. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಎಲ್ಲಾ ಕಾರ್ಮಿಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಘಟನೆ ನಡೆದ ಬುಧವಾರ ರಬಕವಿಯ ಅಕ್ಷಯ್ ಚೋಪಡೆ (48), ಖಾನಾಪುರ ತಾಲೂಕಿನ ಚಿಕ್ಕಮನವಳ್ಳಿ ಗ್ರಾಮದ ಸುದರ್ಶನ ಬನೋಶಿ (25) ಹಾಗೂ ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದ ದೀಪಕ್ ಮನವಳ್ಳಿ (32) ಮೂವರು ಕಾರ್ಮಿಕರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿಗ ಐವರು ಮೃತಪಟ್ಟಿದ್ದು ಸಾವಿನ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.