ಉ.ಕ ಸುದ್ದಿಜಾಲ ಅಥಣಿ :
ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುತ್ತೇನೆ ಎಂದು ಎಲ್ಲಿಯೂ ಕೂಡಾ ಹೇಳಿಲ್ಲ, ನಾನು ಅಪೇಕ್ಷಿತನಲ್ಲ, ಸಹಕಾರಿ ರಂಗದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಅಪೆಕ್ಸ್ ಬ್ಯಾಂಕಿನ ಉಪಾಧ್ಯಕ್ಷನಾಗಿದ್ದೇನೆ.
ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸಿದ್ದೇನೆ. ಜೊತೆಗೆ ಸಹಕಾರಿ ಸಚಿವನಾಗಿ ಕೆಲಸವನ್ನು ಮಾಡಿದ್ದೇನೆ, ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದೇನೆ. ಹೋಗಿ ಮತ್ತೆ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಅಧ್ಯಕ್ಷನಾಗುವ ಭ್ರಮೆ ನನಗೆ ಇಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ 50 ಕೋಟಿ ರೂ. ಸವಾಲಿಗೆ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ತಿರುಗೇಟು ನೀಡಿದ್ದಾರೆ.
ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡುತ್ತಾ, ಕ್ಷೇತ್ರದ ಜನತೆ ನನ್ನನ್ನು ತುಂಬಾ ಎತ್ತರಕ್ಕೆ ಬೆಳೆಸಿದ್ದಾರೆ. ನಾನು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುತ್ತೇನೆಂದು ಎಲ್ಲೂ ಹೇಳಿಲ್ಲ, ಚುನಾವಣೆ ನಿನ್ನೆ ಮುಗಿದಿದೆ, ಇನ್ನೂ ನಾಲ್ಕು ಕ್ಷೇತ್ರಗಳ ಫಲಿತಾಂಶ ಬಾಕಿಯಿದೆ. ಅದು ನ್ಯಾಯಾಲಯದಲ್ಲಿ ಇರುವುದರಿಂದ ಕೋರ್ಟ್ನಿಂದ ತೀರ್ಪು ಬಂದ ನಂತರ ಘೋಷಣೆಯಾಗುತ್ತದೆ.
ನಂತರ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಆ ಸಂದರ್ಭಕ್ಕೆ ಅನುಗುಣವಾಗಿ ಅವತ್ತು ನಾವು ಮಾತನಾಡಬೇಕಾಗುತ್ತದೆ. ರಾಜಕಾರಣ ಯಾವತ್ತೂ ನಿಂತ ನೀರಲ್ಲ, ಹರಿಯುತ್ತಿರುತ್ತದೆ. ರಾಜಕಾರಣದಲ್ಲಿ ಯಾರೂ ಶತ್ರುಗಳೂ ಇರಲ್ಲ, ಮಿತ್ರರೂ ಇರಲ್ಲ. ವೈರಿಗಳು ಮಿತ್ರರಾಗುತ್ತಾರೆ, ಕಾಲಾನುಸಾರ ಸಂದರ್ಭ ಬಂದಾಗ ಚರ್ಚೆ ಮಾಡುತ್ತೇನೆ ಎಂದಿದ್ದಾರೆ.
ಚುನಾವಣೆಯ ನಾಲ್ಕೈದು ದಿನಗಳ ಮುಂಚೆ ಅಷ್ಟೇ ಕತ್ತಿ ನೀವು ಜೊತೆಯಾಗಿ ವೇದಿಕೆ ಹಂಚಿಕೊಂಡಿರಿ. ಇದಕ್ಕೂ ಮುಂಚಿತವಾಗಿ ಗುರ್ತಿಸಿಕೊಂಡಿದ್ದರೆ ಏನಾದರೂ ಫಲಿತಾಂಶ ಬದಲಾವಣೆ ಸಾಧ್ಯತೆ ಇತ್ತೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಇವತ್ತು ದೀಪಾವಳಿ, ಹಬ್ಬ ಇರುವುದರಿಂದ ಏನೂ ಮಾತನಾಡುವುದಿಲ್ಲ. ದೀಪಾವಳಿ ಎಲ್ಲರಿಗೂ ಒಳ್ಳೆದು ಮಾಡಲಿ ಎಂದು ಬಯಸುತ್ತೇನೆ ಎಂದಿದ್ದಾರೆ.
ಡಿಸೆಂಬರ್ನಲ್ಲಿ ಶುಕ್ರದೆಸೆ ಪ್ರಾರಂಭವಾಗುತ್ತದೆ ಎಂಬ ಪ್ರಿಡಿಕ್ಷನ್ ವಿಚಾರವಾಗಿ ಮಾತನಾಡಿ, ಡಿಸೆಂಬರ್ನಲ್ಲಿ ನನಗೆ ಶುಕ್ರದೆಸೆ ಪ್ರಾರಂಭವಾಗುತ್ತದೆ, ಯಾವ ರೀತಿ ಅಂತ ಹೇಳುವುದಿಲ್ಲ, ಆ ಗೊಂದಲ ಎಲ್ಲರಿಗೂ ಹಾಗೆ ಇರಬೇಕು, ಅದು ಉದಯ ಆದ ಮೇಲೆ ಎಲ್ಲರಿಗೂ ಗೊತ್ತಾಗುತ್ತದೆ. ಸಚಿವ ಸ್ಥಾನ ಅಥವಾ ಡಿಸಿಎಂ ಎಂಬುವುದು ಹೇಳುವುದಕ್ಕೆ ಬರುವುದಿಲ್ಲ. ಅದಕ್ಕೆ ಯಾವುದು ಅರ್ಥವೂ ಕೂಡ ಉಳಿಯಲ್ಲ, ಸಂದರ್ಭ ಬಂದಾಗ ನಿಮಗೆ ಎಲ್ಲ ಗೊತ್ತಾಗುತ್ತದೆ.
ಡಿಸೆಂಬರ್ ತಿಂಗಳು ಕಳೆದ ಬಳಿಕ 2026 ಬರುತ್ತದೆ, ಎಲ್ಲರಿಗೂ ಒಳ್ಳೆಯದಾಗುತ್ತದೆ. ರಾಜ್ಯಕ್ಕೆ ದೇಶಕ್ಕೆ ಶುಕ್ರದೆಸೆ ಪ್ರಾರಂಭವಾಗುತ್ತದೆ. ಮುಂದೆ ಒಳ್ಳೆಯದಾಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಬೆಳಗಾವಿ ಮಧ್ಯವರ್ತಿ ಚುನಾವಣೆಯಲ್ಲಿ ನನ್ನ ಕ್ಷೇತ್ರದ ಜನರು ಅಭೂತಪೂರ್ವವಾಗಿ ಆಯ್ಕೆ ಮಾಡಿಕೊಟ್ಟಿದ್ದಾರೆ. ಆ ಗೆಲುವಿಗೆ ಶ್ರಮಿಸಿದ ಎಲ್ಲಾ ಗುರು ಹಿರಿಯರಿಗೆ ಮತ್ತು ಮತದಾರರಿಗೆ, ಎಲ್ಲಾ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಗಳಿಗೆ , ಹಿತೈಷಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ಬಾಲಚಂದ್ರ ಜಾರಕಿಹೋಳಿಗೆ ತಿರುಗೇಟು ನೀಡಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ
