ಉ.ಕ ಸುದ್ದಿಜಾಲ ಬೆಳಗಾವಿ :
ಬೆಳಗಾವಿ ಜಿಲ್ಲಾಧಿಕಾರಿ ವಿರುದ್ಧ ಲೋಕಸಭೆಯಲ್ಲಿ ಹಕ್ಕುಚ್ಯುತಿ ಮಂಡನೆಗೆ ಮುಂದಾಗಿರುವ ಮಹಾರಾಷ್ಟ್ರ ಸಂಸದ ದೈರ್ಯಶೀಲ ಮಾನೆ ನಡೆ ಖಂಡಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಭೇಟಿಯಾಗಿ ಸಮಗ್ರ ಮಾಹಿತಿ ನೀಡಿದರು.
ಬೆಳಗಾವಿ ನಗರದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ಹಾಗೂ ಚಳಿಗಾಲ ಅಧಿವೇಶನ ವೇಳೆ ಎಂಇಎಸ್ ನಾಯಕರು ಕರಾಳ ದಿನ ಆಚರಿಸುವ ಮೂಲಕ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಮಾಡುತ್ತಾರೆ. ಈ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ಬರುವ ರಾಜಕಾರಣಿಗಳು ಪ್ರಚೋದನಾತ್ಮಕ ಭಾಷಣದ ಮೂಲಕ ಭಾಷಾ ವೈಷಮ್ಯ ಮೂಡಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ.
ಗಡಿ ಭಾಗದಲ್ಲಿ ಕನ್ನಡ ಹಾಗೂ ಮರಾಠಿ ಭಾಷಿಕ ಜನ ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಆದರೆ ಮಹಾರಾಷ್ಟ್ರದ ನಾಯಕರು ಗಡಿ ಜಿಲ್ಲೆ ಬೆಳಗಾವಿಗೆ ಆಗಮಿಸಿ ಪ್ರಚೋದನಾತ್ಮಕ ಹೇಳಿಕೆ ನೀಡುವುದರಿಂದ ಅನಗತ್ಯ ಗೊಂದಲ ಸೃಷ್ಟಿಯಾಗುತ್ತದೆ.
ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸಂಸದ ದೈರ್ಯಶೀಲ ಮಾನೆ ಅವರಿಗೆ ನಿರ್ಬಂಧ ವಿಧಿಸಿ ಕ್ರಮ ಕೈಗೊಂಡಿದ್ದು, ಇದರಿಂದ ಸಂಸದರಿಗೆ ಯಾವುದೇ ರೀತಿಯ ಹಕ್ಕುಚ್ಯುತಿ ಆಗಿಲ್ಲ. ಈ ಹಿನ್ನಲೆಯಲ್ಲಿ ತಾವು ಯಾವುದೇ ಕಾರಣಕ್ಕೂ ಕ್ರಮಕ್ಕೆ ಮುಂದಾಗದಂತೆ ಸ್ಪೀಕರ್ ಅವರಿಗೆ ಸಂಸದ ಕಡಾಡಿ ಮನವಿ ಮಾಡಿದ್ದಾರೆ.
ಈರಣ್ಣ ಕಡಾಡಿ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಲೋಕಸಭಾ ಸ್ಪೀಕರ್ ಓಂ ಬಿರ್ಲ್ಲಾ. ಸಂಸದ ಧೈರ್ಯಶೀಲ ಮಾನೆಯವರು ಮನವಿ ಸಲ್ಲಿಸಿದರು ನಾನು ಯಾವುದೇ ಏಕಪಕ್ಷೀಯ ನಿರ್ಣಯ ಕೈಗೊಳ್ಳುವುದಿಲ್ಲ.
ಯಾವ ಹಿನ್ನಲೆಯಲ್ಲಿ ಈ ಘಟನೆ ನಡೆದಿವೆ ಎನ್ನುವುದರ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಕರ್ನಾಟಕ ರಾಜ್ಯದ ಜನ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಸಂಸದ ಈರಣ್ಣ ಕಡಾಡಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಬೆಳಗಾವಿ ಡಿಸಿ ಬೆನ್ನಿಗೆ ನಿಂತ ಸಂಸದ ಕಡಾಡಿ


