ಬಲರಾಂಪುರ (ಉತ್ತರ ಪ್ರದೇಶ) :
ಉತ್ತರಪ್ರದೇಶದಲ್ಲಿ ಮತ್ತೊಂದು ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಎದೆನೋವಿಗೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯ ಮೇಲೆ ಆಸ್ಪತ್ರೆಯ ಕಾಂಪೌಂಡರ್ ಅತ್ಯಾಚಾರ ಎಸಗಿದ ಆಘಾತಕಾರಿ ಘಟನೆ ಇತ್ತೀಚೆಗೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯೋಗೇಶ್ ಪಾಂಡೆ ಎಂಬಾತನನ್ನು ಬಂಧಿಸಲಾಗಿದೆ. ಯುವತಿಯ ಮೇಲೆ ಆರೋಪಿ ಪೈಶಾಚಿಕ ಕೃತ್ಯ ಎಸಗಿದ್ದು, ಆಸ್ಪತ್ರೆಯಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಪ್ರಕರಣದ ವಿವರ :
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಸಂತ್ರಸ್ತೆ ಯುವತಿಯು ಎದೆನೋವಿಗೆ ತುತ್ತಾಗಿದ್ದಾರೆ. ಅವರು ಜಿಲ್ಲೆಯ ಪಚ್‌ಪೇಡ್ವಾ ಪ್ರದೇಶದಲ್ಲಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ತಕ್ಷಣವೇ ಆಕೆಯನ್ನು ಐಸಿಯುಗೆ ದಾಖಲಿಸಲು ಸೂಚಿಸಿದ್ದಾರೆ.
ರಾತ್ರಿಯ ವೇಳೆ ಆರೋಪಿ ಯೋಗೇಶ್ ಐಸಿಯುಗೆ ಆಗಮಿಸಿ ಚಿಕಿತ್ಸೆ ನೀಡುವ ನೆಪದಲ್ಲಿ ಯುವತಿಯ ಕುಟುಂಬಸ್ಥರನ್ನು ಅಲ್ಲಿಂದ ಹೊರಹೋಗಲು ತಿಳಿಸಿದ್ದಾನೆ. ಅವರು ಹೋದ ಕೂಡಲೇ, ಸಂತ್ರಸ್ತೆಗೆ ಮತ್ತು ಬರುವ ಇಂಜೆಕ್ಷನ್ ಮಾಡಿ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿಯಲ್ಲಿ ಕೃತ್ಯ ಸೆರೆ :
ಬೆಳಗ್ಗೆ 4 ಗಂಟೆ ಸುಮಾರಿಗೆ ಯುವತಿಗೆ ಪ್ರಜ್ಞೆ ಬಂದಾಗ, ಆಕೆಯ ಮೈಮೇಲಿನ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ಕಂಡು ಅನುಮಾನಿಸಿದ್ದಾಳೆ. ತಕ್ಷಣವೇ ಕುಟುಂಬಸ್ಥರನ್ನು ಕೂಗಿ ಕರೆದಿದ್ದಾಳೆ. ತನ್ನ ಮೇಲೆ ಬಲವಂತದ ಕೃತ್ಯ ನಡೆದ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಿದ್ದಾಳೆ.
ಆಘಾತಗೊಂಡ ಕುಟುಂಬಸ್ಥರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು, ಆಸ್ಪತ್ರೆಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆರೋಪಿ ಯುವತಿಯ ಮೇಲೆ ಎರಗಿದ್ದು ಪತ್ತೆಯಾಗಿದೆ. ಬಳಿಕ, ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರು ಹೇಳಿದ್ದೇನು?
ಈ ಬಗ್ಗೆ ಹೇಳಿಕೆ ನೀಡಿರುವ ಬಲರಾಂಪುರ ಪೊಲೀಸ್ ಠಾಣೆ ಅಧಿಕಾರಿ ವಿಕಾಸ್ ಕುಮಾರ್, ಆಸ್ಪತ್ರೆಯ ಐಸಿಯು ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯ ಮೇಲೆ ಅಲ್ಲಿನ ಸಿಬ್ಬಂದಿಯೇ ಅತ್ಯಾಚಾರ ಮಾಡಿದ್ದು ದೃಢಪಟ್ಟಿದೆ.
ಆಕೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಕೃತ್ಯ ಎಸಗಿದ್ದಾನೆ. ಯುವತಿ ನೀಡಿದ ದೂರಿನ ಮೇಲೆ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಗಳಿಂದ ಘಟನೆ ದೃಢಪಟ್ಟಿದೆ. ಘಟನೆ ನಡೆದ ರಾತ್ರಿ ಆಸ್ಪತ್ರೆಯಲ್ಲಿದ್ದ ಮಹಿಳಾ ಸಿಬ್ಬಂದಿಯ ಹೇಳಿಕೆಗಳನ್ನು ದಾಖಲಿಸಲಾಗಿದೆ. ನ್ಯಾಯಾಲಯದ ಮೂಲಕ ಆರೋಪಿಗೆ ಕಠಿಣ ಶಿಕ್ಷೆ ಸಿಗುವಂತೆ ಪ್ರಯತ್ನಿಸಲಾಗುವುದು” ಎಂದು ಅವರು ಹೇಳಿದ್ದಾರೆ.
ಎದೆನೋವಿಗೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವತಿಯ ಮೇಲೆ ಆಸ್ಪತ್ರೆಯ ಕಾಂಪೌಂಡರ್ ಅತ್ಯಾಚಾರ
