ಉ.ಕ ಸುದ್ದಿಜಾಲ ಅಥಣಿ :

ಜಾರಕಿಹೊಳಿ ಕುಟುಂಬ ಯಾವತ್ತೂ ಲಿಂಗಾಯತ ವಿರೋಧಿಯಲ್ಲ. ಡಿಸಿಸಿ ಬ್ಯಾಂಕ್​ಗೆ ಲಿಂಗಾಯತ ಧರ್ಮದವರು ಅಧ್ಯಕ್ಷರಾಗುತ್ತಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿಂದು ಬಿಜೆಪಿ ಕಾರ್ಯಕರ್ತರ ಸಭೆಯ ನಂತರ ಮಾತನಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಲಕ್ಷಣ್ ಸವದಿ ಓರ್ವ ನಾಟಕಗಾರ. ಕಳೆದ 2018ರಲ್ಲಿ ಅಥಣಿ ಜನರು ಅವನನ್ನು ಸೋಲಿಸಿದ್ದರು.

ಅವನನ್ನು ಯಾರು ಡಿಸಿಎಂ ಮಾಡಿದರೋ ಗೊತ್ತಿಲ್ಲ. ಅವನು ಪಂಚಾಯಿತಿ ಚುನಾವಣೆಗೆ ಆಯ್ಕೆ ಆಗುವುದಕ್ಕೂ ಲಾಯಕ್ಕಿಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ವಿರುದ್ಧ ಏಕವಚನದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ನಾನು ಅಥಣಿಗೆ ಬಂದಿದ್ದೇನೆ. ಈ ಬಾರಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಕಡೆಯಿಂದ ಅಥಣಿ ಅಭ್ಯರ್ಥಿಯಾಗಿ ಮಹೇಶ್ ಕುಮಠಳ್ಳಿ ಹಾಗೂ ಕಾಗವಾಡ ಕ್ಷೇತ್ರದಿಂದ ಶ್ರೀಮಂತ ಪಾಟೀಲ್ ಸ್ಪರ್ಧಿಸುತ್ತಾರೆ ಎಂದು ಘೋಷಿಸಿ ಸವದಿ ವಿರುದ್ಧ ತೊಡೆ ತಟ್ಟಿದರು.

ಅವನನ್ನು ಮಾಜಿ ಸಿಎಂ ಯಡಿಯೂರಪ್ಪ ಅವರು ಡಿಸಿಎಂ ಮಾಡಿಲ್ಲ. ನಾನು ಯಡಿಯೂರಪ್ಪ ಅವರ ಬಳಿ, ಯಾಕೆ ಸವದಿಯನ್ನು ಡಿಸಿಎಂ ಮಾಡಿದ್ರಿ ಎಂದು ಪ್ರಶ್ನೆ ಮಾಡಿದೆ. ಆದರೆ, ಯಡಿಯೂರಪ್ಪ ಅವರು ನನಗೆ ಗೊತಿಲ್ಲ, ಹೈಕಮಾಂಡ್ ನಿರ್ಧಾರ ಎಂದರು. ಆದರೆ ಲಕ್ಷ್ಮಣ್ ಸವದಿ ಸೊಕ್ಕಿನ ಮನುಷ್ಯ ಎಂದು ಕಿಡಿಕಾರಿದರು.

ಡಿಸಿಸಿ ಬ್ಯಾಂಕ್​ಗೆ ಲಿಂಗಾಯತ ಧರ್ಮದವರು ಅಧ್ಯಕ್ಷರಾಗುತ್ತಾರೆ, ಅಥಣಿ ಡಿಸಿಸಿ ಬ್ಯಾಂಕ್​ನಲ್ಲಿ ಮಹೇಶ್ ಕುಮಠಳ್ಳಿ, ಕಾಗವಾಡ ಶ್ರೀಮಂತ ಪಾಟೀಲ್ ಸ್ಪರ್ಧೆ ಮಾಡುತ್ತಾರೆ. ಕಣ್ಣೀರೆ ಮಠದಲ್ಲಿ ಲಿಂಗಾಯತ ಶಾಸಕರನ್ನು ಒಗ್ಗೂಡಿಸಿ ಸವದಿ ಸಭೆ ಮಾಡುತ್ತಾರೆ.

ನಾವು ಜಾರಕಿಹೊಳಿ ಕುಟುಂಬ ಯಾವತ್ತೂ ಲಿಂಗಾಯತರ ವಿರುದ್ಧ ಅಲ್ಲ. ಡಿಸಿಸಿ ಬ್ಯಾಂಕ್​ಗೆ ಲಿಂಗಾಯತ ಧರ್ಮದವರು ಅಧ್ಯಕ್ಷರಾಗುತ್ತಾರೆ. ನಾವು ಲಿಂಗಾಯತರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇವೆ ಎಂದರು.

ನನಗೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬರುವಂತೆ ದೆಹಲಿಯಿಂದ ಕರೆ ಬಂದಿತ್ತು. ನಾನು ಅವತ್ತು ನಿರಾಕರಿಸಿದೆ. ಒಂದು ವೇಳೆ ನಾನು ಕಾಂಗ್ರೆಸ್ ಸೇರಿದ್ದಿದ್ದರೆ, ಇವತ್ತು ಮಂತ್ರಿ ಆಗುತ್ತಿದ್ದೆ. ಆದರೆ ಸವದಿ ಪಕ್ಷಕ್ಕೆ ಅನ್ಯಾಯ ಮಾಡಿದ. ಕಾಂಗ್ರೆಸ್ ಪಕ್ಷಕ್ಕೆ ಓಡಿದ ಲಕ್ಷ್ಮಣ್ ಸವದಿ ಇರುವ ವೇದಿಕೆಯನ್ನು ನಾನು ಹಂಚಿಕೊಳ್ಳುವುದಿಲ್ಲ ಎಂದು ಶಪಥ ಮಾಡಿದರು.