ಉ.ಕ ಸುದ್ದಿಜಾಲ ಹುಕ್ಕೇರಿ :
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಅಕ್ಷರಶಃ ರಣಾಂಗಣವಾಗಿ ಬದಲಾಗಿದೆ. ಇಷ್ಟು ದಿನ ಬರೀ ಮಾತಿನ ಚಕಮಕಿಯಲ್ಲಿಯೇ ಮುಗಿಯುತ್ತಿದ್ದಂತೆ ಜಾರಕಿಹೊಳಿ ಹಾಗೂ ಕತ್ತಿ ಮಧ್ಯದ ರಾಜಕೀಯ ಸಂಘರ್ಷ ಈಗ ಬೀದಿಯಲ್ಲಿ ಕೈಗೆ ಬಡಿಗೆ ಹಿಡಿದುಕೊಳ್ಳುವ ಮಟ್ಟಕ್ಕೆ ಬಂದು ತಲುಪಿದೆ. ಹುಕ್ಕೇರಿಯ ಅಂಕಲಗುಡಿಕೇತ್ರ ನಿಜಕ್ಕೂ ರಣಾಂಗಣವಾಗಿ ಬದಲಾಗಿದ್ದು ಪೊಲೀಸರು ಮೂಕಪ್ರೇಕ್ಷಕರಂತೆ ಕೈ ಕಟ್ಟಿ ಕುಳಿತ ಪ್ರಸಂಗ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಂಕಲಗುಡಿಕೇತ್ರದಲ್ಲಿ. ಅಂಕಲಗುಡಿಕೇತ್ರದ ಪಿಕೆಪಿಎಸ್ ಠರಾವು ಪಾಸ್ ವಿಚಾರಕ್ಕೆ ಎರಡು ಬಣಗಳ ನಡುವೆ ಗಲಾಟೆ ನಡೆದಿದೆ. ಸ್ಥಳದಲ್ಲಿದ್ದ ಎರಡೂ ಬಣದವರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕೆಲವರು ಗಲಾಟೆಯಲ್ಲಿ ಗಾಯಗೊಂಡರೂ ಸಹ ಕೆಳಗೆ ಬಿದ್ದರೂ ಸಹ ಪರಸ್ಪರ ಕೂಗಾಟ ಚೀರಾಟ ತಮ್ಮ ತಮ್ಮ ನಾಯಕರ ಪರವಾಗಿ ಕೂಗಾಟ ಕೇಳಿ ಬರುತ್ತಲೇ ಇತ್ತು.
ಎರಡೂ ಕಡೆಯ ಬೆಂಬಲಿಗರು ಹೊಡೆದಾಡಿಕೊಳ್ತಿದ್ದರೂ ಸಹ ಸ್ಥಳದಲ್ಲಿದ್ದ ಪೊಲಿಸರು ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಕೈ ಕಟ್ಟಿ ಕುಳಿತ ಪ್ರಸಂಗ ಎದುರಾಯ್ತು. ತಮ್ಮ ಬೆಂಬಲಿಗರನ್ನು ಕರೆದುಕೊಂಡು ಹೋಗಿ ಕತ್ತಿ ತಮ್ಮ ಒಡೆತನದ ವಿ ಎಸ್ ಎಲ್ ಶುಗರ್ಸ್ ನಲ್ಲಿ ಇಟ್ಟುಕೊಂಡಿದ್ದಾರೆ ಎಂದು ಸತೀಶ್ ಬೆಂಬಲಿಗರು ಆರೋಪಿಸಿದರೆ ಇತ್ತ ಇಷ್ಟು ಗಲಾಟೆ ನಡೆದರೂ ಸಹ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದರ ವಿರುದ್ಧ ಹರಿಹಾಯ್ದ ಶಾಸಕ ನಿಖಿಲ್ ಕತ್ತಿ ಪೊಲೀಸರು ಹಾಗೂ ಜಿಲ್ಲಾಡಳಿತದ ವಿರುದ್ಧ ಅಲ್ಲದೇ ಸತೀಶ್ ಜಾರಕಿಹೊಳಿ ವಿರುದ್ಧ ಹರಿಹಾಯ್ದರು..
ಅಂಕಲಗುಡಿಕೇತ್ರದ ಪಿಕೆಪಿಎಸ್ ನಲ್ಲಿ ಇಂದು ಠರಾವು ಪಾಸ್ ಮಾಡುವುದಕ್ಕೆ ದಿನಾಂಕ ನಿಗಧಿಯಾಗಿತ್ತು. ಆದರೆ ಕತ್ತಿ ಬೆಂಬಲಿಗರು ಸತೀಶ್ ರನ್ನು ಬೆಂಬಲಿಸಿದ್ದ ಮೂವರು ಸದಸ್ಯರನ್ನು ಕರೆದುಕೊಂಡು ಹೋಗಿ ಬಚ್ಚಿಟ್ಟಿದ್ದಾರೆ ಇದನ್ನು ಪ್ರಶ್ನೆ ಮಾಡಬಾರದಾ ಎಂದು ಸತೀಶ್ ಬೆಂಬಲಿಗರು ಆಕ್ರೋಶ ಹೊರ ಹಾಕಿದರು.
ಇನ್ನು ನಡು ದಾರಿಯಲ್ಲಿಯೇ ಪೊಲೀಸರನ್ನು ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ತರಾಟೆಗೆ ತೆಗೆದುಕೊಂಡರು. ಇಷ್ಟು ಗಲಾಟೆಯಾದರೂ ಸಹ ನೀವು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದರು. ನಿಖಿಲ್ ಕತ್ತಿ ಮಾತಿಗೆ ಒಂದೂ ಮಾತನಾಡಿದೆ ಪೊಲೀಸರು ಸುಮ್ಮನೆ ಕುಳಿತ ಪ್ರಸಂಗವೂ ಸಹ ನಡೆಯಿತು. ರಮೇಶ ಕತ್ತಿಯವರೇ ಇದನ್ನ ಮಾಡಿಸುತ್ತಿದ್ದಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಆರೋಪ ಮಾಡಿದ್ದಾರೆ…
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಹಾಗೂ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಮತದಾರರ ಓಲೈಕೆ ಮಾಡಿ ಮತ ಪಡೆಯುವುದನ್ನೂ ಮೀರಿ ಈಗ ಮತದಾರನ್ನು ಕಿಡ್ನಾಪ್ ಮಾಡಿ ಮತ ಹಾಕಿಸಿಕೊಳ್ಳು ಮಟ್ಟಕ್ಕೆ ಬಂದು ತಲುಪಿದ್ದು ಇದೆಲ್ಲವೂ ಸಹ ಎಲ್ಲಿಗೆ ಹೋಗಿ ತಲುಪುತ್ತೆ ಎನ್ನುವುದನ್ನು ಕಾದು ನೀಡಬೇಕಿದೆ…
ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ್ ಚುನಾವಣೆ ದಿನೇ ದಿನೇ ಶಾಂತಿದಾಯಕ ಪ್ರಕ್ರಿಯೆಯಿಂದ ದೂರ ಸರಿದು ಗಲಾಟೆ ಮತ್ತು ಹಿಂಸಾಚಾರದ ವೇದಿಕೆ ಆಗುತ್ತಿದೆ. ಕಳೆದ ಒಂದು ವಾರದಿಂದ ಚುನಾವಣೆ ಪೂರ್ವ ಸಭೆಗಳು ಜಗಳ, ಬಡಿದಾಟ, ಜೈಕಾರ ಕೂಗಾಟಗಳಿಂದ ಅಶಾಂತ ವಾತಾವರಣಕ್ಕೆ ತಿರುಗಿವೆ.
ಹೆಂಡತಿ ಗಂಡನ ಕೊರಳಪಟ್ಟಿ ಹಿಡಿದು ಹೊಡೆದಾಡಿದ ಘಟನೆ ಜನರ ಗಮನ ಸೆಳೆದಿದೆ. ರಾತ್ರಿ ಪೂರ್ತಿ ಪರ-ವಿರೋಧದ ಜೈಕಾರ ಕೂಗಾಟ, ಸದಸ್ಯರ ಹೈಜಾಕ್ ಘಟನೆಗಳು ಕಾನೂನು ಸುವ್ಯವಸ್ಥೆಯ ಮೇಲೆ ಪ್ರಶ್ನೆ ಎತ್ತಿವೆ. ಕಟ್ಟಿಗೆ, ಕಲ್ಲು ಹಿಡಿದು ದಾಳಿ ಮಾಡುವ ಘಟನೆಗಳು ಸಾಮಾನ್ಯವಾಗಿವೆ.
ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸಕ್ರೀಯತೆ ತೋರದೆ ‘ಕಣ್ಣಿದ್ದು ಕುರುಡ’ರಾಗಿರುವಂತೆ ವರ್ತಿಸುತ್ತಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ. “ಚುನಾವಣೆ ಅಂದ್ರೆ ವಿಚಾರ ಮಂಡನೆ, ಪ್ರಚಾರ ನಡೆಯಬೇಕು. ಆದರೆ ಇಲ್ಲಿ ಗುಂಡಾಗಿರಿ ಬೆದರಿಕೆ, ಹೈಜಾಕ್ ಮಾತ್ರ ಕಾಣಿಸುತ್ತಿದೆ” ಎಂದು ನಾಗರಿಕರು ಕಟುವಾಗಿ ಟೀಕಿಸುತ್ತಿದ್ದಾರೆ.
ಸಚಿವ ಸತೀಶ ಜಾರಕಿಹೊಳಿ ಮತ್ತು ಮಾಜಿ ಸಂಸದ ರಮೇಶ ಕತ್ತಿ ನಡುವಣ ಪ್ರತಿಷ್ಠೆಯ ಕಾಳಗ ತೀವ್ರಗೊಂಡಿದೆ. ಇವರ ಬೆಂಬಲಿಗರ ನಡುವಿನ ಘರ್ಷಣೆಗಳಿಂದ ಗ್ರಾಮಾಂತರದಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ.ಯುವಕರ ಮಧ್ಯೆ ಒಳದ್ವೇಷ ಹುಟ್ಟಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಜನತೆ ಈಗ ಗೃಹಮಂತ್ರಿಗಳ ತಕ್ಷಣದ ಹಸ್ತಕ್ಷೇಪವನ್ನ ಆಗ್ರಹಿಸಿದ್ದಾರೆ.