ಅಂಕಣ – ವಿನಾಯಕ ವಶಿಷ್ಟ, ಜಿಲ್ಲಾ ವರದಿಗಾರ

ಅಷ್ಟಕ್ಕು ಸುಲಭವಾಗಿ ರಾಷ್ಟ್ರೀಯ ಹೆದ್ದಾರಿ, ರೈಲು ನಿಲ್ದಾಣ, ವಿಮಾನ ನಿಲ್ದಾಣ, ಮಿಲಿಟರಿ ಸೇವಾ ಸೌಲಭ್ಯಗಳು ಸ್ಥಗಿತಗೊಳ್ಳುವುದಿಲ್ಲ. ಇಲ್ಲಿ ಪ್ರತಿ ಕ್ಷಣವೂ ಓಡಾಟ, ಸರಕು, ಸೇವೆಗಳು ನಡೆಯುತ್ತಲೇ ಇರುತ್ತವೆ. ಇಂತಹ ಸಂದರ್ಭಗಳಲ್ಲಿ ಅದು ಹೇಗೆ ಸುಮಾರು 30 ಗಂಟೆಯವರೆಗೆ ಹೆದ್ದಾರಿಗಳು ಸಾರ್ವಜನಿಕ ಸೇವೆಯಿಂದ ಬಂದ್ ಆಗುತ್ತವೆ. ಇದು ಯಾರ ವೈಫಲ್ಯ..?

ಇಂತಹುದೇ ಘಟನೆಯೊಂದು ಕಳೆದ ಹದಿನೈದು ದಿನಗಳ ಹಿಂದೆ ಬೆಳಗಾವಿಯಲ್ಲಿ ನಡೆಯಿತು. ಕಬ್ಬು ಬೆಳೆಗಾರರು ವಿವಿಧ ಭೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ನಡುವೆ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್, ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು 30 ಗಂಟೆಗಳ ಕಾಲ ಬಂದ್ ಮಾಡಲಾಯಿತು. ಹಾಗಾದರೆ ಇಷ್ಟು ಸುದೀರ್ಘ ಸಮಯ ಹೆದ್ದಾರಿ ಬಂದ್ ಮಾಡಿದ್ದರ ಹಿಂದೆ ರಾಜಕಾರಣ ಇರಲಿಲ್ಲವಾ ಎಂಬ ಪ್ರಶ್ನೆ ಮೂಡುವುದು ಸಹಜ.

ಕೇಂದ್ರ ಸರ್ಕಾರದ ವಿರುದ್ಧ ರೈತರು ಹೆದ್ದಾರಿ ತಡೆದು ಪ್ರತಿಭಟನೆ ಮಾಡಲು ಸಜ್ಜಾಗಿದ್ದೇ ತಡ, ಬೆಳಗಾವಿ ಜಿಲ್ಲಾಡಳಿತ ರಾಷ್ಟ್ರೀಯ ಹೆದ್ದಾರಿಯ ಬದಲಾಗಿ ಮಹಾರಾಷ್ಟ್ರ, ಕರ್ನಾಟಕ ಹಾಗೂ ಹುಬ್ಬಳ್ಳಿ ಸಂಪರ್ಕಿಸುವ ರಸ್ತೆಗಳ ಬದಲಿ ಮಾರ್ಗವನ್ನು ವಾಹನ ಸವಾರರಿಗೆ ನೀಡಿದರು. ಪುಣೆಯಿಂದ ಬರುವ ವಾಹನಗಳು ಗೋವಾ ರಸ್ತೆ ಮಾರ್ಗವಾಗಿ ಬೆಳಗಾವಿ ತಲುಪಿದವು. ಜೊತೆಗೆ ಹುಬ್ಬಳ್ಳಿಯಿಂದ ಬೆಳಗಾವಿ ಬರುವ ವಾಹನಗಳು ಸವದತ್ತಿ, ಬೈಲಹೊಂಗಲ ಮಾರ್ಗವಾಗಿ ಬೆಳಗಾವಿಗೆ ಬಂದವು.

ಹೆದ್ದಾರಿ ಬಂದ್ ಮಾಡಲು ರೈತರು ನಿರ್ಧರಿಸಿದ ಮರುಕ್ಷಣವೇ ಬೆಳಗಾವಿ ಜಿಲ್ಲಾಡಳಿತ ಹೊಸ ಮಾರ್ಗಸೂಚಿ ಪ್ರಕಟಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿದರು. ಆದರೆ ಪೊಲೀಸ್ ಇಲಾಖೆ ಮಾತ್ರ ಹೆದ್ದಾರಿ ತಡೆಯಲು ಯತ್ನಿಸಿದ ರೈತರ ಜೊತೆ ಮಾತುಕತೆಗೆ ತಕ್ಷಣಕ್ಕೇ ಬರಲಿಲ.

ನಿಮಗೆ ಗೊತ್ತಿರಲಿ ಕಳೆದ ಬೆಳಗಾವಿ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಚನ್ನಮ್ಮನ ಕಿತ್ತೂರು ತಾಲೂಕಿನ ರೈತರು ಜಮೀನು ಉಳಿವಿಗಾಗಿ ಹೋರಾಟ ನಡೆಸಿದ್ದ ಸಂದರ್ಭದಲ್ಲಿ ಹೆದ್ದಾರಿಗೆ ಬಂದಿದ್ದೇ ತಡ ಅಂದಿನ ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ್ ತೊಡೆ ತಟ್ಟಿ ರೈತರನ್ನು ಹೆದ್ದಾರಿಗೆ ಬರದಂತೆ ತಡೆದಿದ್ದರು. ಆದರೆ ಈಗ ಹೆದ್ದಾರಿ ಬಂದ್ ಆಗುವ ವೇಳೆ ರೈತರನ್ನು ತಡೆಯುವ ಕೆಲಸಕ್ಕೆ ಬೆಳಗಾವಿಯ ಇಂದಿನ ಎಸ್ಪಿ ಪ್ರಯತ್ನವನ್ನೇ ಮಾಡಲಿಲ್ಲ.

ಇದಾದ ನಂತರ ರೈತರು ಹೆದ್ದಾರಿ ಬಿಟ್ಟು ಹುಬ್ಬಳ್ಳಿಯತ್ತ ಹೊರಟರು. ಈ ಮಧ್ಯೆ ಕಿತ್ತೂರು ತಲುಪುವ ವೇಳೆಗೆ ಸಿಎಂ ಡಿಕೆಶಿ ಓಡೋಡಿ ಬಂದು ರೈತರನ್ನು ಮಾತನಾಡಿಸಿದರು‌. ಇದಾದ ನಂತರ ಸರಣಿ ಸಭೆಗಳನ್ನು ಮಾಡಿದ್ದರು ಯಾವುದೇ ಪ್ರಯೋಜನ ಸಾಧ್ಯವಾಗಲಿಲ್ಲ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬೇಟಿಯ ನಂತರ ರೈತರು ಪ್ರತಿಭಟನೆ ಕೈಬಿಟ್ಟು ಮರಳಿದರು‌. ಮತ್ತದೇ ಹಳೆಯ ಜಾಗದಲ್ಲಿ ರೈತರ ಪ್ರತಿಭಟನೆ ಮುಂದುವರಿಯಿತು.

ಈಗಲೇ ನೋಡಿ ಪ್ರಮುಖ ವಿಷಯದ ಪ್ರಸ್ತಾಪ. ನಿಧಾನಕ್ಕೆ ರೈತರ ಸಿಟ್ಟು ರಾಜ್ಯದತ್ತ ತಿರುಗಿತ್ತು. ಮತ್ತೊಮ್ಮೆ ರೈತರು ಜೈಲ್ ಭರೋ ಆಂದೋಲನಕ್ಕೆ ಕರೆ ಕೊಟ್ಟರು. ಹೆದ್ದಾರಿ ಮೂಲಕ ಬೆಳಗಾವಿಗೆ ತೆರಳಲು ನಿರ್ಧರಿಸಿದ್ದರು. ಇಷ್ಟು ಆಗಿದ್ದೇ ತಡ ಬೆಳಗಾವಿ ಡಿಸಿ ನಿಷೇಧಾಜ್ಞೆ ಜಾರಿಗೊಳಿಸಿದರು.

ಕಾನೂನು ಸುವ್ಯವಸ್ಥೆ ಪಾಠ ಹೇಳಲು ಪ್ರಾರಂಭಿಸಿದರು. ಹೆದ್ದಾರಿ ಬಂದ್ ಆದರೆ ಆಗುವ ತೊಂದರೆಗಳ ಕುರಿತು ಸವಿಸ್ತಾರವಾಗಿ ಮಾತನಾಡಲಾರಂಭಿಸಿದರು. ಇದಾದ ನಂತರ ರೈತರು ಬೆಳಗಾವಿಗೆ ಬರುತ್ತಿದ್ದಂತೆ ಮತ್ತದೇ ನಿಷೇಧಾಜ್ಞೆ, ರೈತರನ್ನು ಎಳೆದು ಬೆಳಗಾವಿಯಿಂದ ಆಚೆಗೆ ಬೀಡಲಾಯಿತು.

ತಮ್ಮ ಬುಡಕ್ಕೆ ಬಂದಾಗ ನಿಷೇಧಾಜ್ಞೆ ಜಾರಿಗೊಳಿಸಿ ಹೋರಾಟ ಸಮಾಧಾನಪಡಿಸುವ ಪ್ರಯತ್ನ ಮಾಡಿದ ರಾಜ್ಯ ಸರ್ಕಾರ ಅದೇ ಕೇಂದ್ರದ ವಿರುದ್ಧದ ಹೋರಾಟ ಎಂದಾಕ್ಷಣ ಕೆಂಪು ವಸ್ತ್ರ ಹಾಸಿ, ಮಾರ್ಗ ಬದಲಾವಣೆ ಮಾಡಿ ಹೋರಾಟ ನಡೆಯಲಿ ಎಂದು ಹಾರೈಸಿದರ ಹಿಂದಿನ ಉದ್ದೇಶ ಅರ್ಥವಾಗಲಿಲ್ಲ. ಇದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಕರೆಗಂಟೆ, ಕಾಂಗ್ರೆಸ್ ಆಡಳಿತವಿರುವ ರಾಜ್ಯದಲ್ಲಿ ಕೇಂದ್ರದ ವಿರುದ್ಧ ಜನರನ್ನು ಎತ್ತಿ‌ ಕಟ್ಟುವ ವ್ಯವಸ್ಥಿತ ತಂತ್ರ ನಡೆಯುತ್ತಿದೆ ಎಂಬುವುದರಲ್ಲಿ ಅನುಮಾನವಿಲ್ಲ.