ಡಾ. ಸಲೀಮ ನದಾಫ – ವೈದ್ಯರು, ಬರಹಗಾರರು ಮೋಳೆ

ಹಳೆ ಕಾಲದಲ್ಲಿ ಜಾಹೀರಾತುಗಳ ಮೂಲಕ ನಕಲಿ ವೈದ್ಯರು ಜನರನ್ನ ಆಕರ್ಷಿಸುವ ಒಂದು ಹಾಸ್ಯ ಘಟನೆಯನ್ನ ಅಸಲಿ ವ್ಯದ್ಯರಾದ ಡಾ.ಸಲೀಮ ನದಾಫ ಅವರು ಹಾಸ್ಯ ಘಟನೆ ಮೂಲಕ ವಿಸ್ತರಿಸಿದ್ದಾರೆ….

ನಿರಾಸಕ್ತಿಗೆ ನವಸಕ್ತಿ, ನರಗಳ ದೌರ್ಬಲ್ಯಕ್ಕೆ ಸೂಕ್ತ ಚಿಕಿತ್ಸೆ ಮಾಡಿ, ಕಳೆದು ಹೋದ ಯೌವ್ವನ ಹುಡುಕಿ ಕೊಡಿಸುವಲ್ಲಿ ಹಲವು ದಶಕಗಳ ಅನುಭವಿ ಪಡೆದಿದ್ದ ಡಾ.ಪರಕಾರ್‌ ರವರು ಇಡೀ ರಾಜ್ಯಕ್ಕೆ ಪ್ರಸಿದ್ದರಾದವರು. ವಿವಿಧ ಪತ್ರಿಕೆಗಳಲ್ಲಿ ವಾರಕ್ಕೊಮ್ಮೆ ಜಾಹಿರಾತು ಕೊಟ್ಟು ನರಗಳ ದೌರ್ಬಲ್ಯ ಉಂಟುಮಾಡಿದ್ದರು.

ಹಲವಾರು ಧಾತು, ಆಮ್ಲ, ಕಸಾಯನ, ಲೋಹ, ಲೇಹ್ಯ ಇತ್ಯಾದಿಗಳ ಉಪಯೋಗಿಸಿ ಸ್ವಯಂ ಔಷಧ ತಯಾರಿಸಿ ಧಾತು ವೃದ್ಧಿ ಹಾಗೂ ಗಂಡಸು ಹೆಂಗಸರ ಬಿಳಿಸರಗಿನ ಸಮಸ್ಯೆಯ ಸೆರಗು ಬಿಡಿಸುವಲ್ಲಿ ಹೆಸರುವಾಸಿಯಾಗಿ ಪ್ರತಿ ತಿಂಗಳ ಮೊದಲನೆ ಹಾಗೂ ಮೂರನೆ ವಾರ ಅಜಂತಾ ಲಾಡ್ಜ್ ನ ಹದಿಮೂರನೆ ಕೊಠಡಿಯಲ್ಲಿ ವಾಸ್ತವ್ಯ ಹೂಡಿ ಭಯಂಕರ ಲೈಂಗಿಕ ಹಾಗೂ ಸೈಂಗಿಕ ರೋಗಗಳ ಚಿಕಿತ್ಸೆ ನೀಡುತ್ತಿದ್ದುದು ಅಜಂತಾ ಲಾಡ್ಜನ ಮಾಲೀಕರಿಗೂ ಹೆಮ್ಮೆಯ ವಿಷಯವಾಗಿತ್ತು.

ಲಾಡ್ಜನಲ್ಲಿನ ” ಸಂಡಾಸ್ ” ನ ಪ್ರತಿ ಗೋಡೆಯ ಮೇಲೆ ಡಾ.ಪರಕಾರ್ ರವರ ಚಿತ್ರ ಸಮೇತ ಜಾಹಿರಾತುಗಳು ರಾರಾಜಿಸುತ್ತಿದ್ದರೆ, ಮಡಿವಂತರು ವಾರಗಣ್ಣಿನಿಂದ ನೋಡದಂತೆ ನಟಿಸಿ ಪೂರ್ತಿ ಜಾಹಿರಾತು ಓದಿ ಪುಳಕಿತರಾಗುತಿದ್ದರೆ, ಪಡ್ಡೆ ಹೈಕ್ಳು ಗಂಡಸ್ರಿಗೆ ಇವೆಲ್ಲ ರೋಗ ಬರಬಹುದಾ? ಎಂದು ಯೋಚಿಸುತ್ತ, ಪೈಲ್ಸ ಅರ್ಥವಾಗದೆ “ಪಿಸ್ತೂಲು” ಅನ್ನೋ ಹೆಸರಿನ ಕಾಯಿಲೆಯೂ ಇರಬಹುದಾ? ಎಂದು ತಲೆ ಕೆರದುಕೊಳ್ಳುತಿದ್ದರು.

“ಸರ್ವರೋಗಾನಿಕಿ ಒಕಟೆ ಡಾಕ್ಟರು” ಎಂದು ಹೆಸರುವಾಸಿಯಾಗಿದ್ದ ಡಾ. ಎಲೆಡಿಕೆ ಅರ್ಥಾತ್ ಡಾ.ಪರಕಾರ್ ರವರು ಸೊಂಟದ ಕೆಳಗಿನ ಎಲ್ಲ ಕಾಯಿಲೆಗಳಿಗೆ ಒಂದೆ ಉತ್ತರವಾಗಿದ್ದರು. ಒಂದನೆ ಹಾಗೂ ಮೂರನೆ ವಾತದ ಅಂಜಂತಾ ಲಾಡ್ಜ್ನ ನೆಲಮಹಡಿಯ ಹೊಟೇಲಿನ ದೋಸೆಗಳು ಡಾ.ಪರಕಾರರ ಮಾತ್ರಗಳಂತೆ ಖರ್ಚಾಗುತಿದ್ದರೆ, ಕೈಯ್ಯಲ್ಲಿನ ನರಗಳ ಮುಟ್ಟಿಸಿಕೊಂಡು ನರಗಳ ದೌರ್ಬಲ್ಯ ಕಾಯಿಲೆಗೆ ಮಾತ್ರೆ ಪಡೆದುಕೊಂಡವರು ದೋಸೆ ತಿನ್ನುವ ನೆಪಮಾಡಿ ಡಾ.ಪರಕಾರರ ದರ್ಶನ ಪಡೆದು ಚಟ್ನಿಯ ಜೊತೆ ಮೊದಲ ಡೋಸು ಮಾತ್ರೆ ನೆಂಚಿಕೊಂಡು ನರನಾಡಿಗಳಲ್ಲಿ ಶಕ್ತಿ ತುಂಬಿಸಿಕೊಂಡು ಮಡದಿಯ ನೆನೆಯುತ್ತ ಮನೆಯತ್ತ ನಡೆಯುತಿದ್ದರು.

ಮದುವೆಯಾಗುವ ಗಂಡೈಕ್ಳು ನಾಚುತ್ತಲೆ ಡಾ.ಪರಕಾರರ ಪ್ರಸಾದ ಪಡೆದು ಮದುವೆಯ ತಾರೀಖು ತುಂಬ ದೂರವಾಯ್ತೆಂದು ಗೊಣಗುತ್ತ ಬರಿದೋಸೆ ಚಟ್ನಿ ತಿಂದು ಮರಳುತಿದ್ದರು .

ಆರ್‌ಎಮ್ಪಿ , ಎಮ್‌ಆರ್ಪಿ, ಎಸ್‌ಎಸ್‌ಎಲ್‌ಸಿ, ಪಿಯುಸಿ ಎಲ್ಲ ಪದವಿಗಳನ್ನು ತಮ್ಮ ಹೆಸರಿನ ಮುಂದೆ ಬರೆಸಿಕೊಂಡಿದ್ದ ಡಾ.ಪರಕಾರರವರ ನಾಮಫಲಕದಲ್ಲಿ ಆಂಗ್ಲ ವರ್ಣಮಾಲೆಯ ಎಲ್ಲ ಅಕ್ಷರಗಳನ್ನು ನಮೂದಿಸಿಕೊಂಡಿದ್ದ ಬೋರ್ಡ ಓದುತ್ತಲೆ ತಮ್ಮ ನರಗಳ ದೌರ್ಬಲ್ಯ ದೂರವಾಗುವ ಖುಷಿಯಿಂದ ದುರ್ಬಲ ನರಗಳ ನರಮಾನವರು ಡಾ.ಪರಕಾರರ ಕಂಡು ಪಾವನರಾಗುತಿದ್ದರು. ದೂರ ಪ್ರದೇಶಗಳಾದ ತರಕಟನಾಳ, ಹರಕಟನಾಳ ಹಾಗೂ ಗಡಿಭಾಗದ ತರ್ಲೆಕುಂಟ್ನಳ್ಳಿ ಗ್ರಾಮದ ಜನರು ಡಾ.ಪರಕಾರ ಅಲಿಯಾಸ್ ಡಾ ಎಲೆಅಡಿಕೆ ಯವರ ಕ್ಲಿನಿಕ್ ಗೆ ದಂಡಿಯಾಗಿ ಬರುತಿದ್ದರು.

ಸದಾ ಎಲೆಡಿಕೆ ಜಗಿಯುತ್ತಿದ್ದ ಡಾ.ಪರಕಾರ್ ರವರು ಗಡಿಭಾಗದಲ್ಲಿ” ಎಲೆಡಿಕೆ ದಾಗಟ್ರೆಂದೆ ಪೇಮಸ್ಸಾಗಿದ್ದರು. ಬರೀ ಮಕಾ ನೋಡೆ ಕಾಯ್ಲೆ ಹೇಳ್ತಾನಪ್ಪಾ. ಆ ಎಲೆಡಿಕೆ ಡಾಕ್ಟ್ರು …” ಎಂದು ಕೆಲವರು ಹೆಮ್ಮೆ ಪಟ್ರೆ, ಅವ್ನ ಬರ್ದಿರೋ ಬೋಲ್ಡಾಗಾ ಅದೆಷ್ಟ ಡಿಗ್ರಿಗಳೈತೋ ಸಾಮೆ… ಅದೆಷ್ಟು ಚಲುವಿದ್ನಪಾ ಅವ್ನು. ಒಂದೇ ಒಂದು ಇಂಜಿಷನ್ಕಾ ನಾನು ಕುದ್ರೆ ತರಾ ಅಗೋದೆ” ಅಂತ ಕಣ್ಣುಮಿಟುಕಿಸಿ ಬೀಡಿ ಅಂಟಿಸಿ ಭುಸಭುಸನೆ ಹೊಗೆ ಬಿಟ್ಟು ನರಗಳ ಶಕ್ತಿಯ ಜೊತೆ ಡಾ.ಪರಕಾರ್‌ರ ಜ್ಞಾನದ ಪುರಾವೆ ಕೊಡುವ ನಿರ್ದುರ್ಬಲ ರೋಗಿಗಳು ತರ್ಲೆಕುಂಟ್ನಳ್ಳಿಲಿ ಸುಮಾರು ಜನರಿದ್ದರು. ಅಂದು ಅಗರ್ಬತ್ತಿ ಅಂಟಿಸಿ, ಎಂದಿನಂತೆ ತಮ್ಮ ಕನ್ನಡವರೆಸಿಕೊಂಡು ಎಲೆಡಿಕೆ ಜಗಿಯುತ್ತ ತಮ್ಮ ಟೇತಾಸ್ಕೋಪು ನೇತಾಡಿಸಿಕೊಂಡು ಕುರ್ಚಿಯ ಮೇಲೆ ಕುಳಿತು ರೋಗಿ ಕ್ಷಾಮದ ಬಗ್ಗೆ ಚಿಂತಿಸುತ್ತ ಕುಳಿತಿದ್ದರು. ತರ್ಲೆಕುಂಟ್ನಳ್ಳಿಯ ವರ್ಲ್ಡ್ ಪ್ರೇಮಸ್ ಟಾಗ್ಟರ್ ಡೈವರ್ ಯಂಕಾ ತನ್ನ ಬಾಯಲ್ಲಿನ ಮೂವತ್ತೆರಡೂ ಕೆಂಪುಹಲ್ಲುಗಳನ್ನು ತೋರಿಸುತ್ತ ದಾಗಟ್ರ ಮುಂದೆ ವಕ್ಕರಿಸಿದ.

ಡಾ.ಪರಕಾರವರು ಆತನ ವೇಶಭೂಷಣ, ಬಂದ ಆವೇಶಗಳ ನೋಡಿ ಕೊಡಬಹುದಾದ ಪಾರಿನ್ ಇಂಜಿಷನ್ ಗಳ ನಂತರ ಬರಬಹುದಾದ ಬಿಲ್ ಗಳ ಲೆಕ್ಕ ಹಾಕುತ್ತ, “ಬಾ ಅಪ್ಪಯ್ಯ ಕುಂತ್ಕಾ ….” ಎನ್ನುವಷ್ಟರಲ್ಲಿ “ನಮಸ್ಕಾರ ಸೋಮೆ … ನಮ್ದು ಗೊತ್ತಲ್ಲ? ಅದೆ, ಊರು … ನಮ್ಮ ಚೆರ್ಮನ್ರಕಾ ಪೆಶಲ್ಲು ಇಂಜಿಷನ್ನು ಮಾತ್ರೆ ಕೊಟ್ಟಿದ್ರಂತೆ… ಅವ್ರಕಾ ಈಕ್ಕಾ ಚಾನಾ ಉಷಾರಗದೆ. ಈ ವಯಸ್ಕೂ ಕುದ್ರೆ ತರಾ ಕುಣಿತರೆ… ಅವ್ರೆ ಏಳಿದ್ದು ನಿಮ್ಮಸ್ರು ಹಿ …ಹಿ ..ಹಿ …. ನಮ್ಮೂರಾಕಾ ನಿಮ್ಮೆಸ್ರು ಬಲೆ ಪ್ರೇಮಸ್ಸು ಸಾ….” ಎನ್ನುತ್ತ ಬಾಯಿಯ ಮೂಲೆಯಿಂದ ಒಸರುತಿದ್ದ ಕೆಂಪು ಜೀಹ್ವಾ ರಸ ಟವೆಲಿನಿಂದ ಒರೆಸಿಕೊಂಡು ಡಾ ಎಲೆಯಡಕಿಯವರ ಮುಂದೆ ಆಸೀನನಾಗಲು, ಡಾಕ್ಟರು ತಮ್ಮ ದಿನರಾಶಿಯಲ್ಲಿ” ಧನಾಗಮ “ಎಂದು ಓದಿದ್ದು ನೆನಪಾಗಿ ನರನಾಡಿಗಳಲ್ಲಿ ಸಂಚಲನ ಉಂಟಾಯಿತು.

“ನಿಮದು ತರ್ಲೆಕುಂಟ್ನಳ್ಳಿ ಅಲ್ವಾ ?” ಎನ್ನಲು “ಅಲ್ಸಾ… ನಮ್ಮ ಚೇರ್ಮನ್ರು..? ಮರ್ತೋದ್ರಾ? ನಮದು ಸನ್ಸಂದ್ರ ಕುಂಟ್ನಳ್ಳಿಂದ ಮೂರ್ಮೈಲಿ ಹೆ ಹೆ ಹೆ ” ಎಂದು ನಗಲು, ತಮ್ಮ ಅಂಗಿಯ ಮೇಲೆ ಎಂಜಲು ಸಿಡಿದು ಕೆಂಪಾದ ಕಲೆಯನ್ನು ನೋಡಿಕೊಳ್ಳುತ್ತ ಡಾ.ಪರಕಾರರು ಮಾಸ್ಕನ್ನು ಮೂಗಿನ ಮೇಲೆಳೆದುಕೊಂಡು ನಾಡಿಹಿಡಿದು ಗಡಿಯಾರ ನೋಡುತ್ತ ಓ.. ಹೋ… ಹೋ…ತುಂಬಾ ದಿನದಿಂದ ಇದೆ. ನಿಂಕಾ ರಾತ್ರಿ ವೈಟೋತದೆ. ವಿಪರೀತ ಈಕ್ನೆಸ್ಸು ಚಿಕ್ಕ ವಯಸ್ನಾಗೆ ವಿಪರೀತ ಹಸ್ತಮೈಥುನ ಮಾಡಿ ಗಂಡಸ್ತನ ಕಮ್ಮಿಯಾದಂಗಿದೆ. ಎಲ್ಡೆಡು ಮುದ್ದೆ ನುಂಗಿ ನೀರು ಕುಡ್ದಿರೋನು ಈಗ ಅರ್ದ ಮುದ್ದೆ ಮಟ್ಟಕ್ಕ‌ ಬಂದಿದಿಯಾ ಅಲ್ವಾ ? ಅದರಲ್ಲಿ ಮದವೆನೂ ಫಿಕ್ಸಾಗಿ. ಇನ್ನೇನು ನನ್ಕೈಲಾಗಲ್ಲಾ ಅನ್ನೋ ಲೆವಲ್ಗೆ ಬಂದಿದಿಯಾ ಅಷ್ಟೆ ತಾನೆ ?

ಈ ಚಿಕ್ಕ ವಯಸ್ಗೆ ನರಗಳ ದೌರ್ಬಲ್ಯ” ಎಂದು ಒಂದೆ ಉಸಿರಲ್ಲಿ ಭಯಂಕರ ಕಾಯಿಲೆಯ ಪ್ರಸ್ತಾಪ ಮಾಡಿದಾಗ ಟವಲ್ ಝಾಡಿಸಿದ ಹೈದ ನರಗಳ ನೌರ್ಬಲ್ಯ ಏನೂ ಇಲ್ಲ ಸಾ …. ಮದ್ವೆಯಾಗಿ ಮೂರ್ಮಕ್ಕಳು ಮಕ್ಕಳು, ನಮ್ಮ ಪಕ್ಕದ ತೋಟದ ಸುಬ್ಬಿನ ಕರ್ಕೊಂಡು ದರ್ಸನ್ ಪಿಲಿಂ ನೋಡಕ ಬೆಂಗ್ಳೂರ್ಕೋದ್ರೆ, ಓಡಿಸ್ಕೆಂಡೋದ್ನೊಪಾ ಅನ್ಕೆಂಡು ಅವ್ರಪ್ನು ಪಂಚಯ್ತ್ಯಾಗ ದೂರ್ಕೊಟ್ನು ರೇಪ್ಕೆಸು ಅಂತೇಳಿ ಏದ್ರಸಿ. ಏಳ್ದೆ ಕೇಳ್ದೆ ನಮ್ಮೂರ ದೇವಸ್ಥಾನದಾಗ ಮದ್ವೆ ಮಾಡ್ಸಬುಟ್ಟಾ ಆರ್ ವರ್ಸದಾಗೆ ಮೂರ್ಮಕ್ಳು ಸಾಕಲ್ವಾ? ಎಂದು ಎಲೆಡಿಕೆ ಎಂಜಲುನುಂಗುವಷ್ಟರಲ್ಲಿ ಡಾ.ಪರಕಾರ ಬಾಯಿಯಲ್ಲಿ ಎಲೆಡಿಕೆ ಎಂಜಲು ಒಣಗಿ ಹೋಗಿತ್ತು .

ಆದ್ರೂ ಮದ್ವೆ ಆದ್ಮೆಲೂ ನರ್ಗಳ ದೌರ್ಬಲ್ಯ ಬರತ್ತೆ ಕೆಲವರಿಗೆ ನಿಂಕೂ ಅದೆ ಅಗಿದೆ ಅಲ್ವಾ? ಎಂದು ಹುಬ್ಬೇರಿಸಿದರು “ಅಯ್ಯೋ ಸಾಮೆ ನಂಕಾ ದರಗಳ ನೌರ್ಬಲ್ಯ ಇಲ್ಲ. ಹತ್ಸಪೈತುನ ಏನೂ ಇಲ್ಸಾ ನಂಕಾ ಪೆಶಲ್ ಜಾಗ್ದಾಗೆ ನವೆ ಸಾಮೆ ತಡಿಯಕ್ಕಾಗಲ್ಲ ಎಂದೂ ಗೋಳಾಡಲು ಅಂದ್ರೆ …..? ಎಂದು ಕನ್ನಡಕ ನೆತ್ತಿಯ ಮೇಲಿಟ್ಟುಕೊಂಡರು ಡಾ.ಪರಕಾರ್ ಅಯ್ಯೋ ಸಾಮೆ ಅಲ್ಲಿ‌ ನಾನೆಂಗಪ್ಪಾ ಹೇಳ್ಲಿ…? ಇಂಪಾಟೆಂಟ್ ಜಾಗ್ದಾಗೆ ಕೆರಕಾಟ ಸಾಮೆ ತಡಿಲಾರೆ ದಿನಾ ಸಂಜೆಗೆ ಪರಾ ಪರಾ ಕೆರಿಬೇಕು ಎನ್ನುವಷ್ಟರಲ್ಲಿ ಸಾವಿರ ರೂಪಾಯಿ ಗಿರಾಕಿ ಐವತ್ತರದ್ದಾಗಿದ್ದ ಅರಿತು ತೀವ್ರ ಬೇಸರವಾದರೂ ತೋರಿಸಿಕೊಳ್ಳದೆ .

ಪೆಸಿಫ್ಲಿಸ್ ಗೋನೋರಿಯಾ ಎಸ್ಟಿಡಿ ಐಸಿಡಿ ಎಲ್ಲಾ ಸೇರ್ಕೊಂಡಿದೆ ನಿಂಗೆ ಎನ್ನುವಷ್ಟರಲ್ಲಿ ಎಸ್ಟಿಡಿ ‌…ಲೋಕಲ್ ಯಾವ್ದು ಅಲ್ಲ ಸಾ ನಮ್ಮೂರ ಕೆರೆತಾವಾ ಕುರಿ ಮೇಕೆ ಹಸಾ ಎಲ್ಲ ತೊಳಿತಾರೆ ಸಾ… ಆ ಕಡೆ ನೀರು ಕ್ಲೀನಾಗಿರೋ ಜಾಗ್ದಲ್ಲಿ ಹೋದ್ವಾರಾ ‌ಆಚ್ಕೊಗಿ ತಿಕಾ ತೊಳ್ಕಂಡೆ ಸಾಮೆ ಆವಾಕ್ಕಿಂದ ಇಪರೀತ ನವೆ ಎಂದು ಸ್ಪೆಷಲ್ ಜಾಗದಲ್ಲಿ ಕೆರೆಯಲಾರಂಭಿಸಿದವನ ಮುಖ ನೋಡುತ್ತಲೆ ಒಂದೆರಡು ಪೆಶಲ್ ಇಂಜಿಷನ್, ಫಾರಿನ್ ಮಾತ್ರೆಯ ಬೂದಿ ಎರಚುವ ಲೆಕ್ಕ ಹಾಕುತ್ತ ಸುಮ್ನಿರಪ್ಪಾ ಡಾಕ್ಟರ್ ನಾನಾ ? ನೀನಾ? ಎಂದು ಕಣ್ಣುಕಿಸಿದು.

ಪ್ರಾಣಿಗಳ ಕಾಯ್ಲೆ ಮನುಷ್ಯರ್ಕಾ ಬರಲ್ಲ ನೀನೇನು ಮನುಷ್ನಾ? ಮೇಕೆನಾ ? ಎಂದಾಗ ಪ್ರಸನ್ನವದನನಾದ ರೋಗಿಯ ನೋಡಿ ಡಾ.ಪರಕಾರರು ಆನಂದ ತುಂದಿಲರಾಗಿ, ಸೀಫ್ಲೀಸ್ ಗೋನೋರಿಯಾ ಹಾಗೂ ಎಲ್ಲ ಲೈಂಗಿಕ ರೋಗಗಳನ್ನು ಆತನ ತಲೆಗೆ ಅಲ್ಲಲ್ಲ. ಪೇಶಲ್ ಜಾಗಕ್ಕೆ ಕಟ್ಟಲಣಿಯಾಗಿ ನೀನು ಆಗಾಗಾ ಮೆಜೆಸ್ಟ್ರಿಕ್ ಹಾಗೂ ಪಲಾಸಿಕಾಳ್ಯಕ್ಕ ಬಂದಾಗ, ಎಣ್ಣೈಕ್ಳ ಸಾವಾಸಾ ಎನಾರಾ ಮಾಡ್ತಿದ್ದಾ? ಮದ್ವೆಗ್ ಮುಂಚೆ ? ಮತ್ತೆ ಈವಾಗಾ ? ಅಥ್ವಾ ಊರಲ್ಲೆ ಯಾರಾದ್ರೂ? ಎಂದು ಗಂಭೀರವಾಗಿ ಕಣ್ಣುಮಿಟಿಕಿಸಿದರು. ಅಲ್ಸಾಮಿ ಮೆಜೆಸ್ಟ್ರಿಕ್ಕು ಮಾರ್ಕೆಟಾಗಾ ಹೆಣ್ಣೈಕ್ಳ ಸಾವಾಸಾ ಅಂದ್ರೆ …? ಅರ್ಥ ಆಗುಲ್ಲ ಸೋಮೆ?‌ ನಾನು ಕಾಲೆಜಲ್ಲಿ ಓದಿಲ್ಲ. ಹೆಣ್ಣೈಕ್ಳ ಜೊತೆ ಮಾತಾಡೆ ಇಲ್ಲ ಇಲ್ಲಿ ನಮ್ಮಗೋತ್ತಿರೋರು ನಮ್ಮ ನ್ಯಾಸ್ತರು ಯಾರೂ ಇಲ್ಲ ಬಂದಾಗ ಮಾತಾಡಾಕಾ ಎಂದು ಗಾಬರಿಯಾದ ಓ ಅಂಗಲ್ಲಯ್ಯಾ ಮೆಜೆಸ್ಟ್ರಿಕ್ ಆಕಡೆ ಮೇಕಪ್ ಬಳಕೊಂಡು ನಿಂತಿರ್ತಾರಲ್ಲ ಅಂತಾ ಎಣ್ಣೈಕ್ಳ ಸಾವಾಸಾ ಕಣಯ್ಯ ಎನ್ನುವಷ್ಟರಲ್ಲಿ ಅಲ್ಸಾಮಿ ಗಂಡ್ಸಾದೋನು ಹೆಂಗಸ್ರತಾವಾನೆ ಹೋಗ್ಬೇಕು ಇನ್ನೆನು ಗಂಡೈಕ್ಳ ಸಾವಾಸಾ ಮಾಡಕ್ಕಾದೀತೆ ? ಇದೆಂತಾ ಮಾತ್ಸೋಮೆ ಎನ್ನುವಷ್ಟರಲ್ಲಿ ಡಾ.ಪರಕಾರರ ಹಣೆ ಬೆವರಲಾರಂಭಿಸಿದ.

ಬೇರೆ ಯಾರಾದ್ರೂ ಹೆಂಗಸರ ಅಲವಾಟೆನನ ಅದೆಯಾ …? ಎಂದು ಕತ್ತಲಲ್ಲಿ ಕೆಲೆಸೆದರು ನಾನು ತರದ ಮನ್ಸಾ ಅಲ್ಲ ಸಾ… ನಾನು ಏಕಪ್ರತ್ನಿ ವ್ರತಸ್ತ ಸುಬ್ಬಿನ ಬಿಟ್ರೆ ಯಾರ ಮೈಮುಟ್ಟಿಲ್ಲ ಸಾ ಆ ತರ ಎಲ್ಲ ಕೆಲ್ಸ ಮಾಡದ್ರೆ ಕೆಟ್ಟ ಕೆಟ್ಟ ಕಾಯ್ಲೆ ಬರತ್ತೆ ಸಾ ಥೂ ಎನ್ನುತ್ತ ದವಡೆಯಲ್ಲಿನ ಅಡಿಕೆ ತುಂಡು ಕಡ್ಡಿಯಿಂದ ಹೊರತೆಗೆದು ಕಿಟಕಿಯತ್ತ ಉಗುಳಿದವನ ಮುಖ ಕಿವುಚಿ ನೋಡಿ ಅದೆಯಾ ನಾನೆಳಿದ್ದು ಕೆಟ್ಟೆಂಗಸ್ರ ಸಾವಾಸಾ ಮಾಡಿ ನಿನಗೆ ಎಸ್ಟಿಡಿ ಬಂದಿದೆ. ಅದಕ್ಕೆ ಪಾರಿನ್ ಇಂಜಿಷನ್ನು. ಪಾರಿನ್ ಮಾತ್ರೆ ಕೊಡಬೇಕು ಎನ್ನುವಷ್ಟರಲ್ಲಿ ಕೆಂಡಾಮಂಡಲನಾದ ರೋಗಿ ಎಸ್ಟಿಡಿನೋ ಲೋಕಲ್ಲೋ ಇದೇನು ಡಾಕ್ಟರ್ ಕ್ಲಿನಿಕಾ ಕಾಯಿನ್ ಬಾಕ್ಸಾ ಎಸ್ಟಿಡಿ ಲೋಕಲ್ ಕಾಲ್ ಮಾಡಕ್ಕೆ ಎನ್ನುತ್ತ ಟವಲ್ ಝಾಡಿಸಿ ಎದ್ದವನ ನೋಡಿ ಅದಂಗಲ್ಲಯ್ಯಾ ಕಾಯ್ಲೆ ಹೆಸ್ರು ಎಸ್ಟಿಡಿ ಸೀಪ್ಲೀಸ್ ಗೋನೋರಿಯಾ ” ಎಂದು ಮುಗಿಸುವಷ್ಟರಲ್ಲಿ ಕೆಟ್ಟೆಂಗಸ್ರ ಸಾವಸಾ ಎಸ್ಟಿಡಿ ದರಗಳ ನೌರ್ಬಲ್ಯ ನಿನೆಂತಾ ಡಾಗಟ್ರಯ್ಯ ದರಗಳ ನೌರ್ಬಲ್ಯ ನಿಂಕೆರಬೇಕು ನಂಕಲ್ಲ ಥೂ ನಿನ್ನ ಎನ್ನುತ್ತ ಎದ್ದು ಹೋದವನ ನೋಡುತ್ತಲೆ ಇದ್ದು ಹೋದರು ಡಾ.ಪರಕಾರ್ …..

ಒಟ್ಟಿನಲ್ಲಿ ಮನುಷ್ಯನಿಗೆ ನರ ದೌರ್ಬಲ್ಯ ಇದೆಯೊ ಇಲ್ಲೊ ಗೊತಿಲ್ಲ. ಆದರೆ, ನರ ದೌರ್ಬಲ್ಯ ಬಗ್ಗೆ ನಕಲಿ ಡಾಕ್ಟರ್ ಜಾಹೀರಾತು ಕಂಡರೆ ಸಾಕು ಅವರ ವಿಳಾಸ ಹುಡುಕಿ ಹೋಗುವವರನ್ನ ಈಗಿನ ಕಾಲಮಾನದಲ್ಲಿ ನೋಡಬಹುದಾಗಿದೆ……