ದೀಪಕ ಶಿಂಧೆ – ವಕೀಲರು, ಬರಹಗಾರರು

ಅಲ್ಲ ನೀಲವ್ವ ನಿನಗ ಇರಾಂವ ಒಬ್ಬ ಮಗಾ….ಅವನ ಹಿಂಗ ಕುಡ ಕುಡದ ಬೀಳಾಕ ಹತ್ತಿದ್ರ ಮುಂದ ನಿನ್ನ ಜೀವನಾ ಹೆಂಗ???

ಅಲ್ಲ…..ದುರ್ಗಿ ಇಸ್ಪೇಟ್ ಆಡಾಗ ನಿನ್ನ ಮಗನ್ನ ಪೋಲಿಸರು ಹಿಡಕೊಂಡ್ ಹೋಗ್ಯಾರ್ ಅಂತ.ಎಷ್ಟ ಬಡೀತಾರೋ ಎನೋ ನೆನಸಕೊಂಡ್ರ ನಮ್ ಕಳ್ಳು ಚುರ್ ಅಂತಾವ ನೋಡು….

ಏ ಲಕ್ಷ್ಮಿ ನೀನು ತಿಳದಾಕಿ ಅದಿ, ಸಾಲಿ ಕಲತಾಕಿ ಅದಿ ಈ ಪ್ರೀತಿ ಪ್ರೇಮಾ ಅನ್ನೋದು ನಮ್ ನಿಮ್ಮಂಥೋರಿಗ್ ಅಲ್ಲವಾ…ಅಪ್ಪ ಇಲ್ಲದ ಪರದೇಶಿ ಅಂತಾ ಭಾಳ ಜ್ವಾಕಿ ಮಾಡ್ಯಾಳ ನಿಮ್ಮವ್ವ ಮರತ ಬಿಡು ಆ ಹುಡುಗನ್ನ….

ದೇವರ ನಿನ್ನ ಕೈ ಮುಗಿತೇನಿ ಹಿಂಥಾ ಮಕ್ಕಳನ್ನ ನನ್ನ ಪದರಾಗ ಕೊಡುದಕಿಂತ ನನ್ನ ಬಂಜೀನ ಮಾಡಿದ್ರ ನಿನಗ್ ಪುಣ್ಯಾ ಬರ್ತಿತ್ತಲ್ಲೋ ಯಪ್ಪಾ….

ಹೀಗೆ ಅಕ್ಕಪಕ್ಕದವರ ಬುದ್ದಿ ಮಾತು, ಚುಚ್ಚು ಮಾತು, ಕುಹಕದ ಮಾತು ಮತ್ತು ಆತ್ಮ ಸ್ವಗತಗಳ ನಡುವೆ ನಮ್ಮ ಕಣ್ಣಿಗೆ ಎಂದೂ ಕಾಣದ ದೇವರ ಮುಂದೆ ಕೈ ಮುಗಿವ ಹತ್ತಾರು ಹೆಣ್ಣುಮಕ್ಕಳ ಬದುಕು ಅಕ್ಷರಶಃ ನರಕವಾಗುತ್ತಿರುವದು ಅವರದಲ್ಲದ ತಪ್ಪುಗಳಿಂದ.

ಆದರೆ, ಹುಟ್ಟಿದ ಮಕ್ಕಳು ಸುಸಂಸ್ಕೃತರಾಗಿ, ಸನ್ಮಾರ್ಗಿಗಳಾಗಿ ಬೆಳೆಯುವದಕ್ಕೆ ಅಮ್ಮನ ಪ್ರೀತಿಯಷ್ಟೇ ಅಪ್ಪನ ಗದರುವಿಕೆಯೂ ಮುಖ್ಯ. ಅಮ್ಮನ ಕಣ್ಣೀರಿನ ಸಾಂತ್ವನದಷ್ಟೇ ಅಪ್ಪನ ಏಟುಗಳೂ ಕೂಡ ಅಷ್ಟೇ ಮುಖ್ಯ. ಆದರೆ ಮನೆಯಲ್ಲಿ ಅಪ್ಪ ಅನ್ನುವ ಅಬ್ಬೇಪಾರಿಯೊಬ್ಬ ಆಪತ್ಭಾಂಧವನಂತೆ ಇಲ್ಲದೆ ಹೋಗುವದರಿಂದ, ಅಕಾಲಿಕವಾಗಿ ಎಲ್ಲರನ್ನೂ ಬಿಟ್ಟು ಬಾರದ ಲೋಕದ ಕದ ತಟ್ಟಿದ್ದಕ್ಕೋ ಅಥವಾ ಹರೆಯದ ಹೆಂಗಸೊಬ್ಬಳು ಕಿಬ್ಬೊಟ್ಟೆಯ ದಾಹ ತೀರಿಸಿಕೊಳ್ಳಲು ಪರಪುರುಷನನ್ನು ನಂಬಿ ಬಂದಿದ್ದಕ್ಕೋ,ಅಥವಾ ಗಂಡಸಾದವನು ಮತ್ತೊಬ್ಬ ಮಾಯಾಂಗನೆಗಾಗಿ ಮನೆ ತೊರೆದಿದ್ದಕ್ಕೋ,ಇಲ್ಲವೆ ಸುಂದರ ಸಂಸಾರವೊಂದು ದಿಕ್ಕು ಕಾಣದೆ ದಾರಿ ತಪ್ಪಿದ್ದಕ್ಕೋ ಅವರವರ ಕರ್ಮದ ಫಲಗಳನ್ನ ಬಹಳಷ್ಟು ಹೆಣ್ಣುಮಕ್ಕಳು ಅನುಭವಿಸುತ್ತ ಇರುತ್ತಾರೆ.

ಈ ಬದುಕೆಂಬ ಚದುರಂಗದ ಆಟದಲ್ಲಿ ಹುಟ್ಟಿಸಿದ ದೇವರು ಹುಲ್ಲು ಮೇಯಿಸದೆ ಇದ್ದರೂ ಕೂಡ ಹುಟ್ಟಿದ ಮಕ್ಕಳು ಹಾದಿ ತಪ್ಪಿ ಮಾಡುವ ಆಘಾತಗಳು ಈ ನಿತ್ಯದ ಬದುಕಿನಲ್ಲಿ ರಂಗು ರಂಗಿನ ಸಿನೆಮಾ ಕತೆಗಳ ಹಾಗೆ ಸೀರಿಯಲ್ಲಿನ ಎಪಿಸೋಡುಗಳ ಹಾಗೆ ಅನೇಕ ರೀತಿಯಲ್ಲಿ ಎದುರಾಗುತ್ತಲೇ ಇರುತ್ತವೆ.

ಗಂಡನಿಲ್ಲದ ವಿಧವೆಯೊಬ್ಬಳು ತನ್ನ ಬಡತನದ ಪರಿಸ್ಥಿತಿಯಲ್ಲಿ ಅವರಿವರ ಮನೆಯ ಕಸ ಮುಸುರೆಯ ಕೆಲಸ ಮಾಡಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಅವರು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡ ಬಳಿಕ ಅವರೊಂದಿಗೆ ಇರಲಾಗದೆ ಮತ್ತೆ ಬೀದಿಗೆ ಬೀಳುವದರಿಂದ ಹಿಡಿದು,ಗಂಡ ಬಿಟ್ಟ ಹೆಂಗಸೊಬ್ಬಳು ಮರ್ಯಾದೆಗೆ ಹೆದರುತ್ತ,ಪುರುಷ ಪ್ರಧಾನ ಸಮಾಜವನ್ನು ತನ್ನ ಮನಸಲ್ಲೇ ಶಪಿಸುತ್ತ ಮನೆಯಲ್ಲೇ ಟೇಲರಿಂಗ್, ಕಸೂತಿ, ಮೆಹಂದಿ ಆರ್ಟನಂತಹ ಒಂದಷ್ಟು ವಿದ್ಯೆಗಳನ್ನ ಮಹಿಳೆಯರಿಗೆ ಕಲಿಸಿ ಅವರನ್ನು ಸ್ವಾವಲಂಬಿ ಆಗಿಸುತ್ತ ತನ್ನ ಬದುಕು ಕಟ್ಟಿಕೊಳ್ಳುವ ಸಮಯದಲ್ಲೆ ಅವಳ ಹಿರಿಯ ಮಗಳು ಹದಿನೇಳು ಮುಗಿಯುವದರೊಳಗೆ ಆಟೋದವನ ಜೊತೆಗೆ ಓಡಿ ಹೋಗಿ ಮರಳಿ ಬಂದು ಮನೆಯ ಬಾಗಿಲಲ್ಲಿ ನಿಲ್ಲುವ ದೌರ್ಬಾಗ್ಯವೂ ಅಷ್ಟೇ ಕೆಟ್ಟದ್ದು.

ಯಾವುದೋ ಜನುಮದ ಶಾಪ ಎನ್ನುವಂತೆ ತನಗೆ ತಿಳಿಯದ ವಯಸ್ಸಿನಲ್ಲಿ ದೇವದಾಸಿಯಾದ ಹೆಂಗಸೊಬ್ಬಳಿಗೆ ಗಂಡ ಎಂಬ ಹಣೆಪಟ್ಟಿ ಕಟ್ಟಿಕೊಳ್ಳದ ಗಂಡಸಿನ ಆ ಕ್ಷಣದ ಸುಖಕ್ಕೆ ಹುಟ್ಟಿದ ಹಣ್ಣು ಮಗುವೊಂದು ಮತ್ತೆ ದೇವರಿಗೆ ಅರ್ಪಣೆಯಾಗುವ ಹೆಸರಲ್ಲಿ ಆ ದೇವಿಯ ಪೂಜಾರಿಯ ಅಥವಾ ಅಮವಾಸ್ಯೆ ಹುಣ್ಣಿಮೆಗೊಮ್ಮೆ ದೇವರಿಗೆ ಬರುವ ನೆಪದಲ್ಲಿ ಇಂತಹದ್ದೇ ಸೋತು ಸೊರಗಿದ ಬೇಟೆಗಳನ್ನ ಹುಡುಕಿಕೊಂಡು ಬಂದು ಹುರಿದುಮುಕ್ಕುವ ಭಕ್ತರ ಸೋಗಿನ ಬ್ರಹ್ಮರಾಕ್ಷಸನಿಗೆ ಬಲಿಪಶುವಾಗುವದು ಕೂಡ ಅಷ್ಟೇ ದುರಂತದ ವಿಷಯ.

ಜಗತ್ತಿನಲ್ಲಿ ನಾವು ಕೆಟ್ಟದ್ದನ್ನು ಗಮನಿಸುತ್ತ ಹೋದರೆ ನಮ್ಮ ಕಣ್ಣಿಗೆ ಕೆಟ್ಟ ಸಂಗತಿಗಳೇ ಬೀಳುತ್ತ ಹೋಗುತ್ತವೆ.ಒಳ್ಳೆಯದನ್ನ ಹುಡುಕುತ್ತ ಹೊರಟರೆ ಒಳ್ಳೆಯ ವಿಷಯಗಳೇ ಎದುರಾಗುತ್ತ ಹೋಗುತ್ತವೆ.ಈ ಜಗತ್ತನ್ನು ಪ್ರೀತಿಸಿ ನೋಡು ನಿನಗೆ ದ್ವೇಷವೆಂಬುದು ಮನಸ್ಸಿನ ಯಾವ ಮೂಲೆಯಲ್ಲೂ ಸಿಗುವದಿಲ್ಲ.ಆದರೆ ಈ ಜಗತ್ತನ್ನು ದ್ವೇಷಿಸಿ ನೋಡು ನಿನಗೆ ಪ್ರೀತಿ ಎಂಬುದು ಕೊನೆಯವರೆಗೂ ಸಿಗುವದಿಲ್ಲ ಅನ್ನುವಂತೆ ಅಪ್ಪನಿಲ್ಲದ ಮಕ್ಕಳ ಲಾಲನೆ ಪಾಲನೆಯ ಬಗ್ಗೆ ಎಷ್ಟೋ ವಿಷಯಗಳನ್ನ ಸುಮ್ಮನೆ ಇಲ್ಲಿ ಬರೆಯುತ್ತ ಕೂಡುವದಕ್ಕಿಂತ ಬಹಳ ಎಚ್ಚರಿಕೆ ವಹಿಸುವದಾಗಲಿ ಅಥವಾ ಬಹಳ ಸವಲತ್ತು ಕೊಡುವದಾಗಲೀ ಮಾಡುವದಕ್ಕಿಂತ ತನ್ನ ಮಕ್ಕಳೇ ತನ್ನ ಸರ್ವಸ್ವ ಅಂದುಕೊಂಡು ಕತ್ತಲಲ್ಲಿ ಬದುಕುವದಕ್ಕಿಂತ ಒಂದೊಮ್ಮೆ ಇಂತಹ ಸಂಧರ್ಬಗಳು ಬಂದರೆ ಹೇಗೆ ನಿಭಾಯಿಸಬಹುದು ಅನ್ನುವದನ್ನ ಕೂಡ ಅಂತಹ ನಿರ್ಗತಿಕ,ವಿಧವೆ,ಮತ್ತು ಪರಿತ್ಯಕ್ತ ಹೆಣ್ಣುಮಕ್ಕಳು ಯೋಚಿಸುವಂತೆ ಅವರಲ್ಲಿ ಪ್ರಜ್ಞೆ ಮೂಡಿಸಬೇಕಾಗಿದೆ.

ಇಲ್ಲಿ ಒಂದಷ್ಟು ಉದಾಹರಣೆ ಕೊಟ್ಟ ಬಳಿಕ ಅಪ್ಪ ಇಲ್ಲದ ಮಕ್ಕಳೆಲ್ಲ ಹಾದಿ ತಪ್ಪುತ್ತಾರೆ ಅಂತೇನೂ ಅಲ್ಲವಾದರೂ ಇಂತಹ ಕಹಿ ಘಟನೆಗಳನ್ನು ಅನುಭವಿಸಿದ ಅಂತಹ ತಾಯಂದಿರಿಗೆ ಒಂದು ಸಾಂತ್ವನವನ್ನ ಹೇಳುವ ಪುಟ್ಟ ಪ್ರಯತ್ನದ ನಡುವೆ ನಿಮಗೆಲ್ಲ ನನ್ನ ಕೋರಿಕೆ ಇಷ್ಟೇ.ನಿಮ್ಮ ಮಕ್ಕಳನ್ನು ನಿಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿ ಆದರೆ ಅವರ ಮುಂದೆ ನಿಮ್ಮ ಕಷ್ಟಗಳನ್ನ ಎಂದಿಗೂ ಮುಚ್ಚಿಡಬೇಡಿ.ಅಮ್ಮಾ ನಮಗೊಸ್ಕರ ಏನ್ ಮಾಡಿದಿಯಾ?? ಒಪ್ತೀವಿ ಊಟಾ ಕೊಟ್ಟಿದಿಯಾ ವರ್ಷಕೊಮ್ಮೆ ಬಟ್ಟೆ ಕೊಡ್ಸಿದಿಯಾ ಅದನ್ನ ಬಿಟ್ಟು ಏನಮ್ಮ ಮಾಡಿದಿಯಾ ಬೇರೆ ಅಮ್ಮಂದಿರು ಮಾಡದೆ ಇರೋದನ್ನ ಅಂತ ನಮ್ಮ ಕರುಳ ಬಳ್ಳಿಗಳು ನಮ್ಮನ್ನು ಕೇಳುವ ಮುನ್ನ, ಅಪ್ಪ ಎಂಬ ಏಟಿಎಮ್ ಮತ್ತು ಅಮ್ಮನೆಂಬ ಮನೆಯಲ್ಲಿ ದುಡಿಯುವ ಮಷೀನು ತಮಗಾಗಿ ಪಡುವ ಕಷ್ಟಗಳ ಬಗ್ಗೆ ಸಾಧ್ಯವಾದಷ್ಟು ನಿಮ್ಮ ಮಕ್ಕಳಿಗೆ ತಿಳಿಸುತ್ತ ಹೋಗಿ.

ಅಮ್ಮಾ ಅಪ್ಪ ನಿನ್ನ ಬಿಟ್ಟಿದ್ದಾನೆ ಅಂದ್ರೇ ನೀನೆ ಸರಿ ಇರಲಿಲ್ಲ ನಿನಗೆ ಯಾರ ಜೊತೆಗೂ ಹೊಂದಿಕೊಳ್ಳೋದಕ್ಕೆ ಆಗಲ್ಲ ಅಂತ ಮಕ್ಕಳು ನಮ್ಮ ಎದುರು ನಿಂತು ವಾದಿಸುವ ಮುನ್ನ,ಅಪ್ಪ ಯಾಕೆ ಜೊತೆಗಿಲ್ಲ ಅನ್ನುವದರ ಕಾರಣವನ್ನ ನಿಧಾನಕ್ಕೆ ಅವರು ಪ್ರಬುದ್ದರಾಗುವ ಸಮಯಕ್ಕೆ ಸರಿಯಾಗಿ ತಿಳಿಸಿಬಿಡಿ. ಅವಳಿಗೆನ್ ಸಾರ್ ಅನಾಥಾಶ್ರಮಕ್ಕೆ ಸೇರಿಸ್ತೀನಿ ನಾನು ಕೆಲಸಕ್ಕೆ ಹೋಗಬೇಕಲ್ವ ನಂಗೂ ನಂದೇ ಆದ ಪ್ಯೂಚರ್ ಇದೆ ಅಂತ ಕರುಳಬಳ್ಳಿಗಳೇ ನಮ್ಮ ಬಗ್ಗೆ ಅಸಡ್ಡೆಯ ಮಾತನಾಡುವ ಮುನ್ನ ಅಮ್ಮಾನೇ ನನ್ನ ಸರ್ವಸ್ವ ಅನ್ನುವ ಹಾಗೆ ಅವರನ್ನ ಬೆಳೆಸಿಬಿಡಿ.

ಆದರೆ ಇದೆಲ್ಲ ನಿಮ್ಮಿಂದ ಅಸಾಧ್ಯ ಅನ್ನುವದಾದರೆ,ಇದರಲ್ಲಿ ಖಂಡಿತ ನಾವು ಸೋಲ್ತೀವಿ ಅಂತ ನಿಮಗೆ ಅನ್ನಿಸಿದರೆ ಅಂತಹ ಮಕ್ಕಳು ನಮ್ಮ ಜೊತೆಗೆ ಇಲ್ಲದೆಯೂ ಬದುಕಬಲ್ಲೆವು ಅನ್ನುವ ಒಂದಷ್ಟು ಗಟ್ಟಿತನವನ್ನ ಬೆಳೆಸಿಕೊಳ್ಳುವದರ ಜೊತೆಗೆ ನಮ್ಮ ಕಷ್ಟಕ್ಕೆ ಆಗಲಿ ಅಥವಾ ಮುಂದೊಂದು ದಿನ ಸ್ವಂತದ ಖರ್ಚಿಗೆ ಆಗಲಿ ಅಂತ ಒಂದಷ್ಟು ದುಡಿಮೆಯ ಹಣವನ್ನ ಯಾರಿಗೂ ತಿಳಿಯದಂತೆ ಉಳಿಸಿಕೊಳ್ಳುವ ಜಾಣತನವನ್ನ ಮಕ್ಕಳಿಗಾಗಿ ಖರ್ಚು ಮಾಡುವಾಗ ಒಂದಷ್ಟು ಜಿಪುಣತನವನ್ನ ರೂಢಿಸಿಕೊಂಡು ಬಿಡಿ.

ಮುಂದೊಮ್ಮೆ ಅಪ್ಪನಿಲ್ಲದ ಮಕ್ಕಳು ಹಾದಿ ತಪ್ಪಿದ್ದಾರೆ ಅನ್ನುವ ವ್ಯಥೆಯ ಕತೆಗಳಿಗಿಂತ ಮನೆಯಲ್ಲಿ ಸಿಕ್ಕಾಪಟ್ಟೆ ಬಡತನ ಒಂದು ಹೊತ್ತಿನ ಗಂಜಿಗೂ ಗತಿ ಇರಲಿಲ್ಲ ಇದ್ದಿದ್ದು ಅವರ ಅಮ್ಮ ಒಬ್ಬಳೇ ಇದ್ಲು ಸಾರ್ ಅಂತಹದ್ದರಲ್ಲಿ ಕಷ್ಟಪಟ್ಟು ಚೆನ್ನಾಗಿ ಓದಿ, ಐಎಎಸ್,ಐಪಿಎಸ್,ಕೆಎಸ್ ನಂತಹ ಹುದ್ದೆಗೆ ಏರಿದ ಬಳಿಕವೂ ತಮ್ಮ ವಿಚ್ಚೇಧಿತ,ಅಥವಾ ವಿಧವೆಯಾದ ಅಮ್ಮನೊಂದಿಗೆ ಈಗಲೂ ಚೆನ್ನಾಗಿದ್ದಾರೆ ಅನ್ನುವ ಸಮಾಧಾನದ ಸಂಗತಿಗಳು ನಮ್ಮ ಎದುರಾಗುವಂತಾಗಲಿ.

ತಂದೆಯಿಲ್ಲದ ಪರದೇಶಿ ಮಕ್ಕಳು ಯಾರಾದರೂ ನಿಮಗೆ ಸಿಕ್ಕಾಗ ಏ ಮರೀ ಒಂದ್ ಸಿಗರೇಟು ಎರಡು ಸ್ಟಾರ್ ತಂದು ಕೊಡು,ಲೋ ಪುಟ್ಟಾ ಒಂದ್ ಕ್ವಾಟರ್ ತಂದ್ ಕೊಡ್ತಿಯಾ ಚಿಲ್ಲರೆ ನೀನೆ ಇಟ್ಕೋ ಅನ್ನೋದಕ್ಕಿಂತ ಒಂದೆರಡು ನಿಮಿಷ ನಿಮ್ಮಿಂದ ಸಾಧ್ಯವಾದಷ್ಟು ಅವರು ಬದುಕು ಕಟ್ಟಿಕೊಳ್ಳುವ ದಾರಿಯನ್ನ ಹೇಳಿಕೊಟ್ಟು ಅಂದುಕೊಂಡದ್ದನ್ನ ಸಾಧಿಸುವ ಛಲವನ್ನ ಅವರಲ್ಲಿ ತುಂಬಿದರೆ ಅದಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲ ಅಲ್ಲವಾ???