ಅಂಕಣ – ದೀಪಕ ಶಿಂಧೆ, ವರದಿಗಾರ, ಬರಹಗಾರ
ಅಂದ ಹಾಗೆ ನೀವು ವೆಜ್ಜಾ? ನಾನ್ ವೆಜ್ಜಾ?, ಕಾಕಾರಿ ನಮಸ್ಕಾರ್ರಿ ನಾಡಿದ್ದು ನನ್ನ ತಂಗಿ ಮದ್ವೀರಿ ಚೌಲ್ಟ್ರಿ ಬುಕ್ ಮಾಡಿದ್ವಿ ಅಲ್ಲ ಅವರು ಪೋನ್ ಮಾಡಿದ್ರು ಊಟಕ್ ಎನೆನ್ ಐಟಮ್ ಬೇಕಂತ ಕೇಳಾತಾರ ಎನ್ ಹೇಳುನ್ರೀ??
“ಅಣ್ಣಾರ ಎನ್ ತಪ್ ತಿಳಿಬ್ಯಾಡ್ರಿ ಸ್ವಲ್ಪ ಗಡಿಬಿಡ ಒಳಗ ಲಗ್ನ ಆಗಿ ಹೋತು ನಾಡಿದ್ದು ರಿಷೆಪ್ಷನ್ ಇಟ್ಕೊಂಡೆವಿ ವೆಜ್ಜು,ನಾನ್ ವೆಜ್ಜು ಎರಡೂ ಇರ್ತಾವ ಬರೂದು ಮರಿಬ್ಯಾಡ್ರಿ…” ಅಪ್ಪಾಗ ಶಾಂವಿಗಿ ಪಾಯಸ್ ಭಾಳ ಇಷ್ಟಾ ಇತ್ತು ಪ್ರೀತಿಲೆ ತಿಂತಿದ್ದ ಈ ಸಲ ಶ್ರಾದ್ದಕ್ ಶಾಂವಿಗಿ ಪಾಯಸ್ ಅನ್ನ ಸಾಂಬಾರ ಮಾಡಸೇವ್ರಿ…
ಇದ್ ನೋಡ್ರಿ ನಮ್ ಮನಿಯೊಳಗ ನಾನು ಹುಟ್ಟಿದ ಮೇಲೆ ಒಂದು ನಾಮಕರಣ ಆಗಿರಲಿಲ್ಲ ಅದಕ್ ನನ್ನ ಮಗನ ನಾಮಕರಣ ಸಿಹಿ ಊಟ ಇರಲಿ ಅಂತ ಸೇಂಗಾ ಹೋಳಗಿ,ತುಪ್ಪ ಮಸಾಲೆ ರೈಸು,ಬೇಳೆ ಸಾರ್ ಮಾಡಸೋದ್ ಆತ್ರಿ ತಪ್ಪಸಬ್ಯಾಡ್ರೀ ಹೋಳಿಗಿ ಊಟ…
ಎ ದೋಸ್ತ ಒಮ್ಮೆರೆ ಊಟ ಮಾಡಸು ಬರೆ ನಮ್ದ ತಿನ್ನೂದ ಆತು,ಮನಿ ಒಪನಿಂಗಕ್ ಆದ್ರೂ ಕರಿಯೋ ಮಾರಾಯಾ ಹೀಗೆ ಹುಟ್ಟಿನಿಂದ ಹಿಡಿದು,ಮದುವೆ ಮುಂಜಿ,ನಾಮಕರಣ,ಮನೆ ಓಪನಿಂಗು,ಹಿಡಿದು ಶ್ರಾದ್ದದ ತನಕ ಬರೀ ಊಟದ ಮಾತು ಮತ್ತು ಮೆನುಗಳ ಡಿಸ್ಕಷನ್ ಸದ್ದಿಲ್ಲದೆ ಸಾಗುತ್ತ ಇರುತ್ತದೆ.
ಆಗಾಗ ಅಲ್ಲಲ್ಲಿ ಚರ್ಚೆಯ ವಿಷಯವಾಗಿ ಮುನ್ನಲೆಗೆ ಬರುವ ಒಂದೆ ಒಂದು ಮಹತ್ವದ ವಿಚಾರವೆಂದರೆ ಅದು ಊಟ…ಮತ್ತು ಒಂದು ಹೊತ್ತಿನ ಊಟವಷ್ಟೇ…
ಜಗತ್ತಿನ ಬಹಳಷ್ಟು ಬಡ ರಾಷ್ಟ್ರಗಳಲ್ಲಿ ಇಂದಿಗೂ ಕಾಡುತ್ತಿರುವದು ಹಸಿವು,ಹಸಿವು ಮತ್ತು ಕೇವಲ ಹಸಿವು.ಅಂಗನವಾಡಿ ಮತ್ತು ಸರ್ಕಾರಿ ಶಾಲೆಯ ಮಕ್ಕಳಿಹೆ ಮೊಟ್ಟೆ ಕೊಡೊದಾ ಬಾಳೆಹಣ್ಣು ಕೊಡೋದಾ ಅಂತ ಒಂದು ಕಡೆ ಸರ್ಕಾರದ ಯೋಜನೆಗೆ ಅಡ್ಡ ಹಾಕುತ್ತಿರುವ ಅಡ್ಡಾ ದಿಡ್ಡಿ ಯಡಬಿಡಂಗಿಗಳ ತರ್ಕವಿಲ್ಲದ ಮತ್ತು ವಿತಂಡವಾದದಿಂದ ಕೂಡಿದ ಹೋರಾಟಗಳ ನಡುವೆ ಒಂದಷ್ಟು ಪ್ರಶ್ನೆಗಳನ್ನು ಹರಡಿಕೊಂಡು ಕುಳಿತ ನನಗೆ ಕೊನೆಗೆ ಹೊಳೆದ ಉತ್ತರವಿಷ್ಟೇ…
ಜಗತ್ತಿನ ಹಲವು ದೇಶಗಳಲ್ಲಿ ಇಂದಿಗೂ ಹಸಿವಿನಿಂದ ಸಾಯುತ್ತಿರುವ ಜನರಿದ್ದಾರೆ ಅಂದ ಮೇಲೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ತಡೆಯುವ ಬಡಾಯಿ ಹಾರಾಟಗಾರರಿಗೆ ಈ ಲೇಖನದ ಮೂಲಕ ನನ್ನದೊಂದು ಒಂದು ಕಿವಿ ಮಾತಷ್ಟೇ…
“ಜಗತ್ತಿನಾದ್ಯಂತ ಪ್ರತಿ ಒಂದು ನಿಮಿಷದಲ್ಲಿ ಹಸಿವಿನಿಂದ ಹನ್ನೊಂದು ಜನ ಸಾವನ್ನಪ್ಪುತ್ತಾರೆ ಅಂತ ಆಫ್ಸಕ್ಯಾಮ್ ವರದಿ ಹೇಳುತ್ತದೆ” ಇಂತಹದ್ದರ ನಡುವೆ ತಾಂತ್ರಿಕ ಕಾರಣದಿಂದ ನಮ್ಮ ದೇಶದಲ್ಲಿ ಸುಮಾರು ಮೂರು ಕೋಟಿಯಷ್ಟು ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡಗಳು ರದ್ದಾಗಿವೆ,ಎಷ್ಟೋ ಹಳ್ಳಿಯ ಬಡ ಕುಟುಂಬಗಳು ಆಧಾರ ಕಾರ್ಡ ಇಲ್ಲ ಅನ್ನುವ ಕಾರಣಕ್ಕೊ,ಮೊಬೈಲ್ ಲಿಂಕ್ ಓಟಿಪಿ ಅನ್ನುವ ಕಾರಣಕ್ಕೋ,ಸರ್ಕಾರದ ಪಡಿತರ ಅಕ್ಕಿಯಿಂದ ವಂಚಿತರಾಗಿದ್ದಾರೆ.
ಇನ್ನೂ ಪ್ರತಿ ಮೂರು ತಿಂಗಳಲ್ಲಿ ಇಪ್ಪತ್ತರಿಂದ ಹತ್ತಕ್ಕೆ ಹತ್ತರಿಂದ ಐದಕ್ಕೆ ಹೀಗೆ ಕೆ.ಜಿ ಲೆಕ್ಕಾಚಾರದಲ್ಲಿ ಏರಿಳಿತವಾಗಿ ಒಮ್ಮೆ ಕಡ್ಲೇ ಬೇಳೆ ಕೊಡ್ತೀವಿ,ರಾಗಿ ಕೊಡ್ತೀವಿ,ಗೋಧಿ ಕೊಡ್ತೀವಿ,ಜೋಳ ಕೊಡ್ತೀವಿ ಅನ್ನುವ ಪೊಳ್ಳು ಭರವಸೆ ಮತ್ತು ಪಡಿತರ ಅಂಗಡಿ ಮಾಲೀಕರ ತೂಕದಲ್ಲಿನ ಮೋಸದಿಂದ ಹಲವಾರು ಬಡ ಮತ್ತು ಅಕ್ಷರಸ್ಥ ಕುಟುಂಬಗಳು ಕೂಡ ಹಸಿವಿನಿಂದ ಬಳಲಿದ್ದು ಇದೆ.
ವಿಧವೆ ಅನ್ನುವ ಕಾರಣಕ್ಕೆ ಅನುಕಂಪದ ಕೆಲಸ ಗಿಟ್ಟಿಸಿಕೊಂಡ ಅಂಗನವಾಡಿ ಸಹಾಯಕಿ ಒಬ್ಬಳು ಕೈಗೆ ಬರುವ ಐದಾರು ಸಾವಿರ ಗೌರವ ಧನದಲ್ಲಿ ಮನೆಯ ವಿದ್ಯುತ್ ಬಿಲ್,ಗ್ಯಾಸ್ ಬಿಲ್ಲು, ಮಕ್ಕಳಿಗೆ ಹಾಲು ತರುವಷ್ಟರಲ್ಲೆ ಹೈರಾಣಾಗಿ ಒಂದು ಹೊತ್ತಿಗೆ ಆಗುವಷ್ಟು ಅಂಗನವಾಡಿ ಅಕ್ಕಿಯನ್ನೋ ಅಥವಾ ತನ್ನ ಹಸಿವು ತೀರಿದ ಮೇಲೆ ಮನೆಯಲ್ಲಿನ ಎರಡು ಪುಟಾಣಿ ಮಕ್ಕಳು ತಿನ್ನಲಿ ಅಂತ ಸೆರಗಿನಲ್ಲಿ ಕಟ್ಟಿಕೊಂಡ ಮೊಟ್ಟೆಯನ್ನೋ ರೆಡ್ ಹ್ಯಾಂಡ್ ಆಗಿ ಹಿಡಿದು ಅವಳು ದೇಶವನ್ನೆ ಕೊಳೆ ಹೊಡೆದಿದ್ದಾಳೆ ಅನ್ನುವಷ್ಟರ ಮಟ್ಟಿಗೆ ಪೆಸಬುಕ್,ವಾಟ್ಸಪ್ ಸೇರಿದಂತೆ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುವ ವಿಡಿಯೋ ಹಿಂದೆಯೂ ಇರುವ ಒಂದು ಕುಟುಂಬದ ಹಸಿವಿನ ಆರ್ತನಾದ ಮಾತ್ರ ಯಾರಿಗೂ ಕಾಣಿಸುವದಿಲ್ಲ.
ಬೇಕರಿಯೊಂದರಿಂದ ಬ್ರೆಡ್ ಪ್ಯಾಕೆಟ್ ಕದ್ದು ತನ್ನ ಹಸಿದ ತಂಗಿಗೆ ಕೊಡಲು ರಸ್ತೆಯಲ್ಲಿ ಓಡುವಾಗಲೇ ಸಿರಿವಂತನೊಬ್ಬ ಕಾರಿಗೆ ಅಡ್ಡ ಬಂದು ಅಪಘಾತದಲ್ಲಿ ಸತ್ತ ಪುಟ್ಟ ಹುಡುಗನ ಬಗ್ಗೆ ಬಹಳ ಜನ ಆಗಿನ ಕ್ಷಣಕ್ಕೆ ಅಯ್ಯೋ ಪಾಪ ಅನ್ನುತ್ತಾರೆಯೆ ಹೊರತು ಆ ಬಲಿಪಶುವಿನ ಮನೆಯ ಹಸಿವು ಮಾತ್ರ ನೀಗುವದೆ ಇಲ್ಲ.
ಉದ್ಯೋಗ ಎನ್ ಮಾಡ್ತೀರಿ ಅಂದಾಗ ಪ್ರೆಸ್ ರಿಪೋರ್ಟ್ರ ಅಂತ ಎದೆ ಉಬ್ಬಿಸಿ ಹೇಳುವ ನನ್ನಂತವನಿಗೆ ಹೊಟ್ಟೆಪಾಡಿಗೆ ಎನ್ ಮಾಡ್ತೀರಿ ಅಂದಾಗ ಕೆಲವೊಮ್ಮೆ ಉತ್ತರ ಬರುವದೆ ಇಲ್ಲ.
ಪತ್ರಿಕಾರಂಗದ ಪ್ರಾಮಾಣಿಕ ಮತ್ತು ಬಡ ಪತ್ರಕರ್ತ ಹಾಗೂ ಸಮಾಜದ ಅಂಕು ಡೊಂಕುಗಳನ್ನು ತನ್ನ ಕತೆ, ಕವಿತೆಯಲ್ಲಿ ಬರೆಯುವ ಬಂಡಾಯದ ಧ್ವನಿಯ ಯುವಕನಿಂದ ಹಿಡಿದು ಅದರಲ್ಲೆ ಮಾಗಿದ ಹಿರಿಯ ಸಾಹಿತಿಗಳತನಕ ಎಲ್ಲೋ ಒಂದು ಕಾರ್ಯಕ್ರಮವಾದಾಗ ಅಥವಾ ಯಾರೋ ಮಹಾನುಭಾವರು ಒಂದು ಒಳ್ಳೆಯ ಊಟದ ಆಯೋಜನೆ ಮಾಡಿದಾಗ ಆ ದಿನದ ಹೊತ್ತಿನ ತುತ್ತಿನ ಚೀಲ ತುಂಬಿರಬಹುದು ಆದರೆ ನಮ್ಮ ಅಲಂಬಿತರದ್ದಲ್ಲ ಅನ್ನುವದು ನೆನಪಿರಲಿ.
ಬಡತನವನ್ನೆ ಹಾಸಿ ಹೊದ್ದು ಮಲಗಿದ ದೇಶದಲ್ಲಿ ಯಾರೋ ಒಂದಷ್ಟು ಜನ ಯಾವು ಯಾವುದೋ ಮಾರ್ಗಗಳಿಂದ ಬೆಳೆದು ದೊಡ್ಡವರಾದ ಮಾತ್ರಕ್ಕೆ ಹುಟ್ಟು ಹಬ್ಬ ಅನ್ನುವ ಕಾರಣಕ್ಕೆ ಎರಡು ಬಾಳೆಹಣ್ಣು ಒಂದು ಸೇಬುಕೊಟ್ಟ ಮಾತ್ರಕ್ಕೆ ಆ ದೇಶ ಶ್ರೀಮಂತ ದೇಶವಾಗುವದಿಲ್ಲ, ಮತ್ತು ವಿಶ್ವಗುರುವು ಆಗುವದಿಲ್ಲ.ಒಂದು ಪುಟ್ಟ ಗುಡಿಸಲಿನ ಎರಡು ಹಸಿದ ಜೀವಗಳ ಹಸಿವನ್ನು ಯಾರೊ ಒಬ್ಬ ಅಪರಿಚಿತ ವ್ಯಕ್ತಿ ಅವರಿಗೂ ತಿಳಿಯದಂತೆ ತಿಂಗಳ ದಿನಸಿ ಸಾಮಾನು ಇಟ್ಟು ಹೋಗುವಷ್ಟು ಹೃದಯ ಶ್ರೀಮಂತಿಕೆ ನಮ್ಮಲ್ಲಿ ಬೆಳೆದಾಗ ಮಾತ್ರ ನಮ್ಮ ದೇಶ ನಿಜವಾದ ಶ್ರೀಮಂತ ರಾಷ್ಟ್ರವಾಗುತ್ತದೆ.
ಆದರೆ, ನನ್ನ ಈ ಮಾತುಗಳು ಹುಟ್ಟಿನಿಂದ ಚಿನ್ನದ ಚಮಚವೊಂದನ್ನು ಬಾಯಿಗೆ ಇಟ್ಟುಕೊಂಡು ಬೆಳೆದವರಿಗೋ ಗೊತ್ತಾ ನಮ್ಮಪ್ಪ ಫೆಮಸ್ ಲಾಯರ್ರು,ಅರೆ ನಾನು ಡಾಕ್ಟ್ರ ಮಗ,ನಾನು ಇಂಜನೀಯರ ಮಗಳು ಅನ್ನುವ ಇಂದಿನ ಕಾಲದ ಮಕ್ಕಳಿಗೆ ಎಂದಿಗೂ ತಿಳಿಯುವದಿಲ್ಲ. ಇಷ್ಟಕ್ಕೂ ಆಂತರ್ಯದಲ್ಲಿ ಒಂದಷ್ಟು ಅನುಕಂಪ,ಮಾನವೀಯತೆ ಮತ್ತು ಕನಿಕರ ಹುಟ್ಟಬೇಕಾದರೆ ಮನುಷ್ಯನೊಬ್ಬ ಮನುಷ್ಯನಾಗಲು ಬಡತನ ಮತ್ತು ಹಸಿವಿನ ಭಾಷೆ ಅರ್ಥವಾಗಬೇಕು ಅನ್ನುವದರಲ್ಲಿ ಎರಡು ಮಾತಿಲ್ಲ.
ಬಹಳಷ್ಟು ಸಲ ಫ್ಯಾಮಿಲಿ ಕರ್ಕೊಂಡು ಹೋಟೆಲಿಗೆ ಹೋದವರು ತಟ್ಟೆಯಲ್ಲೆ ಅರ್ಧಕ್ಕೆ ಬಿಟ್ಟು ಕೈ ತೊಳೆಯುವದು,ಅಯ್ಯೋ ಟೆಸ್ಟೆ ಇಲ್ಲ ಅನ್ನುವ ಸಬೂಬು ಹೇಳುವದು,ಸ್ವಂತದ ಮನೆಯಲ್ಲಿಯೂ ಅಂಕೆಯಿಲ್ಲದಷ್ಟು ಅಡುಗೆ ಮಾಡಿಟ್ಟು ಡಸ್ಟಬಿನ್ ಗೆ ಸುರಿಯುವದು ನೋಡಿದಾಗೆಲ್ಲ ನನ್ನ ಕರುಳು ಕಿವುಚಿದಂತಾಗುತ್ತದೆ.
ದುರಂತವೆಂದರೆ ರೈತನೊಬ್ಬ ತನ್ನ ಜಮೀನಿನಲ್ಲಿ ಬಿತ್ತಿದ ಭತ್ತ ಕಸಿಯೊಡೆದು ಸಸಿಯಾಗಿ ಪೈರು ಕೊಟ್ಟು ರಾಶಿಯಾಗಿ ತೌಡು ಕುಟ್ಟಿದ ಮೇಲೆ ಅಕ್ಕಿಯಾಗುವದಕ್ಕೆ ತೆಗೆದುಕೊಳ್ಳುವ ಸಮಯದಷ್ಟು ಕೂಡ ತಾಳ್ಮೆ ಇಲ್ಲದ ಬಹಳ ಜನ ನನ್ನ ದೇಶಭಕ್ತ ಗೆಳೆಯರು ಮತ್ತೊಬ್ಬರ ಹಸಿವಿನ ಬಗ್ಗೆ ಯೋಚಿಸುವದೇ ಇಲ್ಲ.
ನೀವು ಮಾಂಸಾಹಾರಿಗಳಾ ಹಂಗಾದ್ರೆ ಮನೆ ಬಾಡಿಗೆ ಕೊಡಲ್ಲ,ಅನ್ನುವದರಿಂದ ಹಿಡಿದು ಅವರು ಆಗಾಗ ಮೊಟ್ಟೆ ತಿಂತಾರಿ ಇಷ್ಟಕ್ಕೂ ವೆಜಿಟೆರಿಯನ್ ಅಂತ ಪ್ರೂವ್ ಆಗಿದೆಯಲ್ಲ ಅಂತ ಗರ್ಭಾವಸ್ಥೆಯಲ್ಲಿ ಕೋಳಿ ಮರಿಯನ್ನೆ ಕಣ್ಣು,ಕಾಲು,ಕೊಕ್ಕು ಮತ್ತು ಪುಕ್ಕ ಮೂಡುವ ಮೊದಲೆ ಬೇಯಿಸಿ ಅಥವಾ ಉಪ್ಪು ಖಾರ ಹಾಕಿ ಸುಟ್ಟು ತಿನ್ನುವ ಬಹಳ ಜನರಿಗೆ ಬಹಿರಂಗವಾಗಿ ಅದನ್ನು ಒಪ್ಪಿಕೊಳ್ಳುವದಕ್ಕೂ ಮುಜಗುರ ಅನ್ನಿಸುವದನ್ನು ನೋಡಿ ಹೊಟ್ಟೆ ನೋಯುವಷ್ಟು ನಕ್ಕಿದ್ದೇನೆ.
ಹಸಿವು ನೀಗಿಸುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಹೀಗಳೆಯುವದರಲ್ಲೆ ಅರ್ಧ ಆಯುಷ್ಯ ಕಳೆದ ಬಹಳಜನ ಸಂಜೆಯಾಗುತ್ತಲೇ ಅಯ್ಯೋ ಹಸಿವು ಎನಾದ್ರೂ ಕೊಡಿ ಅಂತ ಚಡಪಡಿಸಿದ್ದನ್ನೂ ನೋಡಿದ್ದೇನೆ. ಬಿಪಿಎಲ್, ಅಂತ್ಯೋದಯ, ಕಾರ್ಮಿಕ ಕಿಟ್, ಮಾತೃಪೂರ್ಣ ಯೋಜನೆ,ಪೋಷನ್ ಅಭಿಯಾನದಂತಹ ಯೋಜನೆಗಳನ್ನು ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪಿಸುವಲ್ಲಿ ಎಡವುತ್ತಿರುವ ನಾವುಗಳು ಇನ್ನಾದರೂ ಅರಿತು ಬಾಳಿದರೆ ಒಂದಷ್ಟು ಹಸಿದ ಹೊಟ್ಟೆಗಳು ಹೊಟ್ಟೆ ತುಂಬ ಉಂಡು ಕಣ್ಣುತುಂಬ ನಿದ್ದೆ ಮಾಡಿಯಾವು ಅಲ್ಲವೇ??
ಯಾರು ಏನನ್ನಾದರೂ ಉಣ್ಣಲಿ ಆದರೆ ಅದು ಮತ್ತೊಬ್ಬರಿಗೆ ಅಡ್ಡಿಯಾಗದಿರಲಿ ಇನ್ನೊಬ್ಬರ ಸಂಪ್ರದಾಯ,ಪದ್ಧತಿ ಮತ್ತು ಆಹಾರದ ಶೈಲಿ ನಮ್ಮಲ್ಲಿ ತಾತ್ಸಾರದ ವಿಷಯವಾಗಿ ಹೊಮ್ಮಿ ದ್ವೇಷದ ಬೀಜ ಬಿತ್ತದಿರಲಿ.
ಹೇಗೆ ಅನ್ನ ಬೆಂದಿದೆಯೋ ಇಲ್ಲವೋ ಅಂತ ನೋಡಲು ಒಂದು ಅಗುಳನ್ನಷ್ಟೆ ಹಿಚುಕಿ ನೋಡುತ್ತಾರೋ ಹಾಗೆ ನಮ್ಮ ಸಂಸ್ಕಾರಗಳ ಹೊರನೋಟ ನಮ್ಮನ್ನು ಕೆಳಗೆ ಕುಸಿಯುವಂತೆ ಮಾಡದಿರಲಿ.ಅನಾಥ ಮಗುವಿನ ಮುಂದೆ ನಮ್ಮ ಮಕ್ಕಳನ್ನು ಮುದ್ದಿಸಿದರೆ ಪಾಪ ತಟ್ಟುತ್ತದೆ ಅನ್ನುವದು ನಿಜವಾದರೆ ಹಸಿದವರ ಎದುರು ನಮ್ಮ ಬೂರಿ ಭೋಜನ ಕೂಡ ಖಂಡಿತ ತಪ್ಪು ಅಲ್ಲವೇ??
ಹೋಟೆಲ್, ಬಸ್ ಸ್ಟಾಂಡ್,ಮಂದಿರ,ಮಸೀದಿ,ಚರ್ಚು ಮತ್ತು ಶಾಪಿಂಗ್ ಮಾಲುಗಳ ಹತ್ತಿರ ಎದುರು ನಿಂತು ಕೈ ಒಡ್ಡಿ ಬೇಡುವ ನಿರ್ಗತಿಕ ಮತ್ತು ವಯೋವೃದ್ದ ಜೀವಗಳಿಗೆ ನೀವು ಹಣ ಕೊಡುವದಕ್ಕಿಂದ ಒಂದು ಹೊತ್ತಿನ ಊಟವನ್ನೋ,ಒಂದು ಬಿಸ್ಕತ್ತು ಪ್ಯಾಕೆಟು ಅಥವಾ ಒಂದಷ್ಟು ಹಣ್ಣುಗಳನ್ನೋ ಕೊಟ್ಟು ನೋಡಿ ಖಂಡಿತ ನಿಮಗೆ ಅವರ ನಗುವಿನಲ್ಲಿ ದೇವರು ಕಾಣಿಸಬಹುದು.
ಅಂದಹಾಗೆ ನೀವು ಊಟ ಮಾಡುತ್ತಿರುವದು ಮನೆಯಲ್ಲಿಯೋ,ಹೋಟೆಲಿನಲ್ಲಿಯೋ,ಯಾರದೋ ಯಾವುದೋ ಕಾರ್ಯಕ್ರಮದಲ್ಲಿಯೋ ಅಥವಾ ಸದ್ಯಕ್ಕೆ ಉಣ್ಣುತ್ತಿರುವದು ವೆಜ್ಜೋ ಅಥವಾ ನಾನ್ ವೆಜ್ಜೋ ಅಂತ ನಾನಂತೂ ಕೇಳುವದಿಲ್ಲ. ಆದರೆ, ಊಟದ ತಟ್ಟೆಯಲ್ಲಿ ಅನ್ನವನ್ನು ಅರ್ಧಕ್ಕೆ ಬಿಟ್ಟು ಕೈತೊಳೆಯುವ ಮುನ್ನ ಎಂದಿಗೂ ಈ ಕೆಳಗಿನ ಸಾಲುಗಳನ್ನು ಮರೆಯಬೇಡಿ
ಅನ್ನಂ ಪರಬ್ರಹ್ಮ ಸ್ವರೂಪಂ,ಅನ್ನಂ ದೇವೀಪ್ರಸಾದಂ ಅನ್ನಂ ಪ್ರತ್ಯಕ್ಷ ದೈವಂ.