ಅಂಕಣ : ದೀಪಕ ಶಿಂಧೆ – ವಕೀಲರು, ಬರಹಗಾರರು

ಕಾಲಲ್ಲಿನ ಚಪ್ಪಲಿಯ ಉಂಗುಷ್ಟ ಕಿತ್ತು ಹೋಯ್ತಾ ಎಸೆದು ಬಿಡಿ ನೂರೈವತ್ತು, ಇನ್ನೂರಕ್ಕೆ ಫ್ಯಾಶನೆಬಲ್ ಪುಟವೇರ್ ಗಳೇ ಸಿಗುತ್ತೆ, ಕೈಯ್ಯಲ್ಲಿದ್ದ ಚಲಿಸುವ ಗಡಿಯಾರ ನಿಂತು ಹೋಯಿತಾ?? ಎಸೆದು ಬಿಡಿ ನೂರೈವತ್ತರಿಂದ ಐದುನೂರಕ್ಕೆ ಆನ್ ಲೈನಲ್ಲಿ ಹೊಸ ಡಿಜೈನ್ ವಾಚ್ ಬರುತ್ತೆ. ರೀ ಬರಬೇಕಾದ್ರೆ ನಾಗಾ ಬ್ರಾಂಡ್ ಪೊರಕೆ ತಗೊಂಡು ಬನ್ನಿ ಅಂತ ತಿಂಗಳ ಒಪ್ಪತ್ತಿನಲ್ಲಿ ದಿನಸಿ ತರುವಾಗ ಹೆಂಡತಿ ಹೇಳುತ್ತಿದ್ದ ಲಿಸ್ಟಲ್ಲಿ ಕೂಡ ಈಗೀಗ ಎಷ್ಟೋ ವಸ್ತುಗಳ ಅಗತ್ಯವೇ ಇಲ್ಲದ ಹಾಗಾಗಿದೆ.

ಆದರೆ ಇವುಗಳ ರಿಪೇರಿಯನ್ನೇ ನಂಬಿ ಬದುಕುತ್ತಿದ್ದ ಬಡ ಕುಟುಂಬಗಳ ಗತಿ?? ಇದರ ಬಗ್ಗೆ ಯೋಚಿಸುವದಕ್ಕೆ ಮನಸುಗಳೇ ಇಲ್ಲದ ಕಾಲವಿದು. ಯಾಕೆಂದರೆ ಫ್ಯಾಶನ್ ಯುಗದಲ್ಲಿ ಗ್ಯಾರಂಟಿಗೆ ಬೆಲೆ ಇಲ್ಲ. ಪ್ಲಾಸ್ಟಿಕ್ ಪೊರಕೆ, ಮಗ್ಗು, ಜಗ್ಗು, ಗ್ಲಾಸು, ಕುರ್ಚಿ, ಡಸ್ಟಬಿನ್ ಹೀಗೆ ಸರ್ವಂ ಪ್ಲಾಸ್ಟಿಕ್ ಮಯಂ ಆದ ಬಳಿಕ ಸದ್ಯದ ಸಮಯವನ್ನ ಯೂಜ್ ಆಂಡ್ ಥ್ರೊ ಜಮಾನಾ ಅಂದರೆ ತಪ್ಪಾಗಲಿಕ್ಕಿಲ್ಲ.

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಇಂಡಿಯಾದ ಹೆಸರಿನಲ್ಲಿ ಕರೆನ್ಸಿ ಮಾಯವಾಗುತ್ತ ಪೋನ್ ಪೆ, ಯುಪಿಐ, ಪೇಟಿಎಮ್‌, ಗೂಗಲ್ ಪೇ ಗಳು ಬಂದ ಬಳಿಕವಂತೂ ಮನೆಯ ಸೆಲ್ಪಿನ ಯಾವುದೋ ಮೂಲೆಯಲ್ಲಿ ಬಿದ್ದ ಪರ್ಸು ನೋಡಿದರೆ ಅದು ಯಾವದೋ ಕಾಲದಲ್ಲಿ ಕಾಸಿಲ್ಲ ಅಂತ ಖಾಲಿ ಪರ್ಸು ತೋರಿಸಿದ್ದ ಹಳೆಯ ನೆನಪುಗಳು ಬಹುಶ ತೊಂಭತ್ತರ ದಶಕದೊಳಗೆ ಹುಟ್ಟಿದ ನಮ್ಮನ್ನಷ್ಟೆ ಕಾಡುತ್ತದೆ ಎನೋ ಅನ್ನಿಸುತ್ತದೆ.

ಈ ಹಿಂದೆ ದೊಡ್ಡವರ ಮನೆಯ ಶುಭ ಕಾರ್ಯಗಳಲ್ಲಿ ಅಪರೂಪಕ್ಕೆ ಕಂಡು ಬರುತ್ತಿದ್ದ ಯೂಜ್ ಆಂಡ್ ಥ್ರೋ ತಟ್ಟೆ, ಸಾಂಬಾರ ಲೋಟ, ಸ್ಪೂನು ಮತ್ತು ನೀರು ಕುಡಿಯುವ ಗ್ಲಾಸುಗಳು ಸದ್ಯ ಎಲ್ಲ ಕಡೆಯೂ ಕಂಡು ಬರುತ್ತಿವೆ.ಅಧುನಿಕತೆ ಬೆಳೆದಂತೆಲ್ಲ ಬಳಕೆಗೆ ಸುಲಭವಾಗುವ ತಂತ್ರಜ್ಞಾನ ಇಂದು ಮನೆ ಮಾತಾಗುತ್ತಿದೆ. ಆದರೆ ಆ ತಟ್ಟೆ, ಪ್ಲೇಟು, ಕಪ್ಪುಳಿಗಾಗಿ, ಕೈ ಒರೆಸಿ ಎಸೆಯುವ ಟಿಸ್ಯೂ ಪೇಪರಗಳಿಗಾಗಿ ಲಕ್ಷ ಕೋಟಿ ಸಂಖ್ಯೆಯಲ್ಲಿ ಮರಗಳ ಮಾರಣ ಹೋಮವಾಗುತ್ತಿದ್ದರೂ ನಮ್ಮ ಮೌನ ಯಾವ ಪುರುಷಾರ್ಥಕ್ಕಾಗಿ ಅನ್ನುವದನ್ನ ನಾವೆಲ್ಲ ಯೋಚಿಸಬೇಕಾಗಿದೆ. ಮಕ್ಕಳ ಪುಟ್ಟ ಡೈಪರ್ ಗಳಿಂದ ಹಿಡಿದು ಮನೆಯ ಕಸ ತುಂಬಿ ವಿಲೆವಾರಿ ಮಾಡುವ ತನಕ ಎಲ್ಲವೂ ಪ್ಲಾಸ್ಟಿಕ್ ಮಯ ಅನ್ನುವ ಅನಿವಾರ್ಯತೆಯ ನಡುವೆ ನಿಧಾನಕ್ಕೆ ಅನಾರೋಗ್ಯ ಎಂಬುದು ಪ್ರತಿ ಮನೆಯಲ್ಲೂ ಕಾಣಿಸಿಕೊಳ್ಳುತ್ತಿದೆ.

ಸದ್ಯ ಬಿಸ್ಲೆರಿ ವಾಟರ್ ಮತ್ತು ಪ್ಯೂರಿಪೈಡ್ ವಾಟರ್ ಎಂದು ನಂಬಿಸಲಾಗುತ್ತಿರುವ ಕೆಮಿಕಲ್ ಮಿಶ್ರಿತ ನೀರಿನಿಂದ ಹಿಡಿದು ಅವುಗಳನ್ನು ತುಂಬಿಕೊಂಡು ಹತ್ತಿಪ್ಪತ್ತು ರೂಪಾಯಿಯ ಪೆಟ್ ಬಾಟಲಿಗಳಲ್ಲಿ ಬರುವ ನೀರಿನ ಬಾಟಲ್ ಮತ್ತು ಕೋಲ್ಡ ಡ್ರಿಂಕ್ ಬಾಟಲಗಳು ಪ್ಲಾಸ್ಟಿಕ್ ಗುಡ್ಡಗಳನ ನಿರ್ಮಿಸುತ್ತಿವೆ.

ಇದಷ್ಟೇ ಸಾಲದ್ದಕ್ಕೆ ಗೋಬಿ ಮಂಚೂರಿ, ಪಾನಿಪೂರಿ, ನೂಡಲ್ಸ ನಂತಹ ಆಹಾರಗಳ ಜೊತೆಗೆ ಹೋಟೆಲ್ ಗಳಲ್ಲಿ ಅಷ್ಟೇ ಅಲ್ಲದೆ ಮನೆಯ ಆಹಾರಕ್ಕೂ ನಾಲಿಗೆಯ ರುಚಿಗಾಗಿ ಬಳಸುವ ಮಸಾಲೆಗಳ ಜೊತೆಗೆ ನಿತ್ಯವೂ ಹಾನಿಕಾರಕವಾದ ಕೆಮಿಕಲ್ಲುಗಳೇ ನಮ್ಮ ದೇಹ ಸೇರುತ್ತಿವೆ.

ನಮ್ಮ ಕಾಲಿಗೆ ಹಾಕುವ ಚಪ್ಪಲಿಯಿಂದ ಹಿಡಿದು ತಲೆಯ ಕೂದಲಿಗೆ ಬಳಸುವ ಶಾಂಪೂ ಸ್ಯಾಚೆಯ ತನಕ, ಬೆಳಗಿನ ಹಾಲಿನ ಪ್ಯಾಕೆಟ್ ನಿಂದ ಹಿಡಿದು,ಅಪರೂಪಕ್ಕೆ ಸಂಜೆ ಮನೆಗೆ ಪಾರ್ಸಲ್ ತರುವ ಕ್ಯಾರಿ ಬ್ಯಾಗಿನ ತನಕ, ಪ್ಲಾಸ್ಟಿಕ್ ನಮಗೆ ಅರಿವಿಲ್ಲದಂತೆ ನಮ್ಮೊಂದಿಗೆ ಬೆಸೆದುಕೊಳ್ಳುತ್ತಲೇ ಇದೆ.

ಜೀವ ಸೋಯಿ ಮತ್ತು ದಿನಬಳಕೆಯ ವಸ್ತುಗಳು ತುಟ್ಟಿಯಾಗಿರುವ ಈ ಕಾಲಮಾನದಲ್ಲಿ ನಲ್ಲಿಗೆ ಬಂದ ಕೆಸರು ಮಿಶ್ರಿತ ನೀರನ್ನು ಬಿಳಿಬಟ್ಟೆಗೆ ಹಾಕಿ ಸೋಸಿ ಕುಡಿಯುತ್ತಿದ್ದ ಕಾಲದವರಾದ ನಾವೂ ಕೂಡ ಈಗೀಗ ಅನಾರೋಗ್ಯದಿಂದ ಬಳಲುವಂತಾಗಿದ್ದರೆ ನೆಲಕ್ಕೆ ಬಿದ್ದ ಬೀಜವೊಂದು ಮೊಳಕೆ ಒಡೆದು ಫಸಲು ಕೊಟ್ಟು ಕಟಾವಿನ ಬಳಿಕ ಮೃಷ್ಟಾನ್ನ ಭೋಜನದ ಆಹಾರವಾಗುವ ತನಕ ಕೀಟನಾಶಕ, ಕಳೆ ನಾಶಕ ಮತ್ತು ಕೆಮಿಕಲ್ ಮಿಶ್ರಿತವಾಗುವ ಅನಿವಾರ್ಯತೆ ಬಂದು ಒದಗಿದೆ.

ಇನ್ನೊಂದು ಕಡೆ ಅತಿಯಾದ ಲಾಭ ಘಳಿಸುವ ಉದ್ದೇಶಕ್ಕೋ, ಸಾಲದ ಸೂಲದಿಂದ ಹೊರಬರುವ ಅನಿವಾರ್ಯತೆಗೋ ಅನ್ನದಾತನೆ ಭೂತಾಯಿಯ ಒಡಲಿಗೆ ವಿಷ ಬೆರೆಸುವ ಹೀನಾಯ ಸ್ಥಿತಿಯನ್ನು ಈಗಾಗಲೇ ನಿರ್ಮಿಸಿ ಜವಾರಿ ಬೆಳೆಗಳೇ ಕೈಗೆಟುಕದ ಹಾಗೆ ಮಾಡಿದ ಬಳಿಕ ಸಾವಯವ ಕೃಷಿ ಅಂತ ಬಾಯಿ ಬಡಿದುಕೊಳ್ಳುತ್ತಿರುವ ಪ್ರಜ್ಞಾವಂತರಿಗೆ ಬೆಲೆಯೆ ಇಲ್ಲದಂತಾಗಿದ್ದು ಇಂದಿನ ವಿಪರ್ಯಾಸಗಳಲ್ಲಿ ಒಂದು.

ವಿಶ್ವ ಪರಿಸರ ದಿನದಂದು ಒಂದು ಪುಟ್ಟ ಸಸಿ ನೆಟ್ಟು ಅವತ್ತಿನ ಮಟ್ಟಿಗೆ ನೀರೆರೆದು ಉದ್ದುದ್ದ ಭಾಷಣ ಬಿಗಿಯುವ ಅಥಿತಿಗಳಿಗೆ ಅವರ ಸನ್ಮಾನದ ಶಾಲು ಮತ್ತು ಹಾರಗಳನ್ನ ಮತ್ತೆ ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕಿ ಕೊಡುವ ಸಂಸ್ಕೃತಿ ಇಂದಿಗೂ ಪ್ರಸ್ತುತವಾಗಿದೆ. ಸಿಂಥೆಟಿಕ್ ಹೆಸರಿನಲ್ಲಿ, ಪೈಬರ್ ಹೆಸರಿನಲ್ಲಿ,ಸಸ್ತೆಕಾ ಮಾಲ್ ರಸ್ತೆಮೆ ಎನ್ನುವ ಜಾಹಿರಾತಿನ ಜೊತೆಗೆ, ಈಜಿ ಟು ಕ್ಯಾರಿ ಅನ್ನುವದರಿಂದ ಹಿಡಿದು ಯೂಜ್ ಯಾಂಡ್ ಥ್ರೋ ಹೆಸರಿನಲ್ಲಿ ಹೀಗೆ ತರಹೇವಾರಿ ಆಕಾರ ಮತ್ತು ಅಗ್ಗದ ದರದಲ್ಲಿ ಲಭ್ಯ ಅನ್ನುವ ಕಾರಣಕ್ಕಾಗಿ ನಮ್ಮೆಲ್ಲರ ಮನೆ ಸೇರಿ ಪರಿಸರಕ್ಕೆ ಮಾರಕವಾಗುತ್ತಿರುವ ಪ್ಲಾಸ್ಟಿಕ್ ಬಳಕೆಯನ್ನು ಸ್ಥಗಿತಗೊಳಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದಿಟ್ಟ ಹೆಜ್ಜೆಯನ್ನು ಇನ್ನಾದರೂ ಇಡಬಹುದೆ??

ವಾರದ ಎರಡು ದಿನ ಗೋ ಗ್ರೀನ್ ಹೆಸರಿನಲ್ಲಿ ಕಾರು ಬೈಕ್ ಬಿಟ್ಟು ಸೈಕಲ್ ಬಳಸುವ ಅಥವಾ ಕಾಲ್ನಡಿಗೆಯಲ್ಲಿ ಗಮ್ಯ ತಲುಪುವ ಕೆಲಸದಿಂದ ಹಿಡಿದು ತಿಂಗಳಿಗೊಮ್ಮೆ ನಮ್ಮ ವಠಾರ,ಗಲ್ಲಿ,ಮತ್ತು ಪರಿಚಯದವರ ಮನೆಯ ಸುತ್ತ ಸ್ವಚ್ಚತಾ ಕಾರ್ಯದಲ್ಲಿ ತೊಡಗುವ ಮತ್ತು ಅಂತಹ ಕೆಲಸಕ್ಕೆ ಪ್ರೋತ್ಸಾಹಿಸುವದರ ಜೊತೆಗೆ ಒಂದಷ್ಟು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಸಮಾನ ಮನಸ್ಕರ ಅಗತ್ಯ ಇಂದು ಅತ್ಯವಶ್ಯಕವಾಗಿದೆ.

ಕೆಮಿಕಲ್ ಮುಕ್ತ ಆಹಾರ ಪದಾರ್ಥಗಳನ್ನು ಬೆಳೆದು
ಸಾವಯವ ಕೃಷಿಗೆ ಆಧ್ಯತೆ ನೀಡುವ ರೈತರನ್ನು ಗುರುತಿಸಿ ಗೌರವಿಸಿ ಅವರಿಗೆ ಅವರ ಜವಾಬ್ದಾರಿಯ ಅರಿವು ಮೂಡಿಸಬಹುದೆ??

ನಾನೂ ಕೂಡ ನಾಳೆಯಿಂದ ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆಯನ್ನ ಕಡಿಮೆ ಮಾಡುತ್ತೇನೆ ಜೊತೆಗೆ ಕೆಮಿಕಲ್ ಮಿಶ್ರಿತ ಆಹಾರ ಬಳಕೆ ಕಡಿಮೆ ಮಾಡುತ್ತೇನೆ. ನಮ್ಮ ಸುತ್ತಲಿನ ಪರಿಸರದ ಜೊತೆಗೆ ನಮ್ಮ ಹಾಗೂ ಮನೆಯವರ ಆರೊಗ್ಯವನ್ನ ಕಾಪಾಡಿಕೊಳ್ಳಲು ಅಣಿಯಾಗುತ್ತೇನೆ ಎಂದು ಪ್ರಮಾಣ ಮಾಡುವದರ ಜೊತೆಗೆ ನಮ್ಮ ಗೆಳೆಯರು ಮತ್ತು ಸಂಭಂಧಿಕರಿಗೂ ಮನುಕುಲಕ್ಕೆ ಮಾರಕವಾಗುತ್ತಿರುವ ಪ್ಲಾಸ್ಟಿಕ್ ಬಳಕೆಯ ದುಷ್ಪರಿಣಾಮಗಳನ್ನ ಎಳೆ ಎಳೆಯಾಗಿ ಬಿಡಿಸಿ ಹೇಳುವ ಮೂಲಕ ಜಾಗೃತಿ ಮೂಡಿಸುತ್ತೇನೆ ಎಂದು ಮನಸ್ಸು ಗಟ್ಟಿ ಮಾಡಿ ಈ ಕ್ಷಣದಿಂದಲೇ ಒಂದು  ನಿರ್ಧಾರಕ್ಕೆ ಬರೋಣವೆ?? ಸಾಧ್ಯವಾದಷ್ಟು ಯೂಜ್ ಯಾಂಡ್ ಥ್ರೋ ಪ್ಲಾಸ್ಟಿಕ್ ಗೆ ಹೇಳೋಣವೆ ಗುಡ್ ಬೈ…??

ದೀಪಕ ಶಿಂಧೇ – ವಕೀಲರು, ಬರಹಗಾರರು