ಉ.ಕ‌ ಸುದ್ದಿಜಾಲ ಹುಬ್ಬಳ್ಳಿ :

ಕರ್ನಾಟಕದಲ್ಲಿ ಜೈನ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಗೆ ಆಗ್ರಹಿಸಿ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಸರ್ಕಾರ ಈ ಹಿಂದೆಯೇ ನೀಡಿದ್ದ ಗಡುವು ಮುಗಿದಿದ್ದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಡಿಸೆಂಬರ್ 4ರಿಂದ ಚಿಕ್ಕೋಡಿಯಿಂದ ಪಾದಯಾತ್ರೆ ಆರಂಭಿಸಿ, ಬೆಳಗಾವಿಯ ಸುವರ್ಣಸೌಧದ ಎದುರು ಸತ್ಯಾಗ್ರಹ ನಡೆಸಿ ದೇಹತ್ಯಾಗ ಮಾಡುವುದಾಗಿ ವರೂರು ನವಗ್ರಹ ತೀರ್ಥಕ್ಷೇತ್ರದ ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಎಚ್ಚರಿಕೆ ನೀಡಿದರು.

ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕರ್ನಾಟಕ ಮೂಲದ ಜೈನ ಸಮಾಜದಲ್ಲಿ ಅನೇಕ ಕುಟುಂಬಗಳು ತೀವ್ರ ಬಡತನದಲ್ಲಿವೆ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ಬಡ ಜೈನ ಕುಟುಂಬಗಳಿಗೆ ನೆರವಾಗಲು ಜೈನ ಅಭಿವೃದ್ಧಿ ನಿಗಮದ ಸ್ಥಾಪನೆ ಅತ್ಯಗತ್ಯವಾಗಿದೆ.

ಈ ಕುರಿತು ಈ ಹಿಂದೆ ಸರ್ಕಾರಕ್ಕೆ ಮನವಿ ಸಲ್ಲಿಸಿ ಗಡುವು ನೀಡಲಾಗಿತ್ತು. ಆದರೆ, ಗಡುವು ಮುಗಿದರೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಚಿವ ಸಂತೋಷ ಲಾಡ್ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದರು. ಸಚಿವರಾದ ಲಕ್ಷ್ಮಣ ಸವದಿ, ಸತೀಶ ಜಾರಕಿಹೊಳಿ ಹಾಗೂ ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರೊಂದಿಗೂ ಈ ವಿಷಯವಾಗಿ ಚರ್ಚಿಸಲಾಗಿದೆ. ಆದರೂ ಈವರೆಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ನವೆಂಬರ್ 19ರಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೇರದಾಳದಲ್ಲಿ ಸಮಾಜದ ಮುಖಂಡರ ಸಭೆ ನಡೆಸಲಾಗುವುದು. ಬಳಿಕ ಕಾಗವಾಡ ಮತ್ತು ಅಥಣಿ ಕ್ಷೇತ್ರಗಳ ಶಾಸಕರಿಗೆ ಮನವಿ ಸಲ್ಲಿಸಲಾಗುವುದು. ಡಿಸೆಂಬರ್ 4ರಂದು ಚಿಕ್ಕೋಡಿಯಿಂದ ಪಾದಯಾತ್ರೆ ಆರಂಭಿಸಿ ಮೂರು ದಿನಗಳಲ್ಲಿ ಬೆಳಗಾವಿ ತಲುಪಲಾಗುವುದು. ನಂತರ ಸುವರ್ಣಸೌಧದ ಎದುರು ಸತ್ಯಾಗ್ರಹ ನಡೆಸಿ, ಬೇಡಿಕೆ ಈಡೇರದಿದ್ದರೆ ದೇಹತ್ಯಾಗ ಮಾಡುವುದಾಗಿ” ಎಚ್ಚರಿಸಿದರು.