ಉ.ಕ ಸುದ್ದಿಜಾಲ ಅಥಣಿ :

ಅದು ತುಂಬು ಕುಟುಂಬ, ಇಬ್ಬರು ಮುದ್ದಾದ ಮಕ್ಕಳು, ಹುಣ್ಣಿಮೆ ಚಂದ್ರನಂತಿರೋ ಇಬ್ಬರು ಮಕ್ಕಳ ತುಂಟಾಟ, ಹುಡುಗಾಟ ಮಕ್ಕಳ ನಗು ನೋಡುತ್ತಿದ್ದ ಕುಟುಂಬಕ್ಕೆ ಇಂದು ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಮನೆ ಪಕ್ಕದಲ್ಲೇ ಇರೋ ಬಾವಿ ಮಗುವಿಗೆ ಮಸಣವಾಗಿದೆ.

ಹೌದು,, ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಸಂತೋಷ ಮಂಟೂರ್ ಎಂಬ ರೈತನ 9 ವರ್ಷದ ಪುಟಾಣಿ ಬಾಲಕ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.

ಪ್ರವೀಣ ಸಂತೋಷ ಮಂಟೂರ್ (9) ಮೃತ ದುರ್ದೈವಿಯಾಗಿದ್ದು. ಇಂದು ಬೆಳಿಗ್ಗೆ ತಮ್ಮನ ಜೊತೆ ಮನೆ ಪಕ್ಕದಲ್ಲಿರೋ ಬಾವಿಯಲ್ಲಿ ಕಾಲು ಜಾರಿ ಬಿದ್ದಿದ್ದಾನೆ ಎಂದು ತಮ್ಮ ಮನೆಗೆ ಬಂದು ಹೇಳಿದ್ದಾನೆ ಅಷ್ಟರಲ್ಲೇ ಕುಟುಂಬದವರು ಗಾಬರಿಯಿಂದ ಹುಡುಕಾಡಿದ್ದಾರೆ.

ಬಾವಿಯಲ್ಲಿ ಅಪಾರ ನೀರು ಇದ್ದ ಕಾರಣ ಕಾರ್ಯಾಚರಣೆ ವಿಳಂಭವಾಗಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಕಾರ್ಯಾಚರಣೆಯಲ್ಲಿ ಮಗುವಿನ ಮೃತ ದೇಹ ಸಿಕ್ಕಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.