ಉ.ಕ ಸುದ್ದಿಜಾಲ ಬೆಳಗಾವಿ :
ಕುಂದಾನಗರಿ ಬೆಳಗಾವಿಯಲ್ಲಿ ಗುರುವಾರ ರಾತ್ರಿ 10 ಗಂಟೆಯಿಂದಲೇ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಮುಗಿಲು ಮುಟ್ಟಿದೆ. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಕನ್ನಡಾಭಿಮಾನಿಗಳ ಸಂತಸಕ್ಕೆ ಪಾರವೇ ಇರಲಿಲ್ಲ.
ಹೌದು, ಮದುವಣಗಿತ್ತಿಯಂತೆ ಶೃಂಗಾರಗೊಂಡಿದ್ದ ರಾಣಿ ಚನ್ನಮ್ಮ ವೃತ್ತವು ಸಂಪೂರ್ಣ ಕನ್ನಡಮಯವಾಗಿದೆ. ಹಳದಿ – ಕೆಂಪು ಬಾವುಟಗಳನ್ನು ಹಿಡಿದು ನಿದ್ದೆಯನ್ನೂ ಲೆಕ್ಕಿಸದೇ ಬಂದಿದ್ದ ಕನ್ನಡಿಗರು ಕಿವಿಗಡಚಿಕ್ಕುವ ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.
ನಮ್ಮ ಬೆಳಗಾವಿ ಇದು ನಮ್ಮ ಬೆಳಗಾವಿ, ಕಾಣದಂತೆ ಮಾಯವಾದನು, ಬೊಂಬೆ ಹಾಡುತೈತೆ ಸೇರಿ ಮತ್ತಿತರ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ರಾಣಿ ಚನ್ನಮ್ಮ ವೃತ್ತದ ಮುಂದೆ ಯುವಕರು ಬೃಹದಾಕಾರಾದ ಕನ್ನಡ ಬಾವುಟಗಳನ್ನು ತಿರುಗಿಸಿ ಕನ್ನಡದ ಮೇಲಿನ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ಯುವಕ – ಯುವತಿಯರು, ಚಿಕ್ಕ ಮಕ್ಕಳು, ಮಹಿಳೆಯರು ಕೂಡ ಮಧ್ಯರಾತ್ರಿಯೇ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಬೆಳಗಾವಿಯಲ್ಲಿ ರಾಜ್ಯೋತ್ಸವದ ಖದರ್ ಹೇಗಿರುತ್ತೆ ಎಂಬುದನ್ನು ನಿರೂಪಿಸುವಂತಿದೆ. ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಪರ ಜಯಘೋಷಗಳು ಮುಗಿಲು ಮುಟ್ಟಿದವು.
ಸರಿಯಾಗಿ 12 ಗಂಟೆ ಆಗುತ್ತಿದ್ದಂತೆ ಚನ್ನಮ್ಮ ವೃತ್ತದ ಬಳಿಯ ವೇದಿಕೆಯಲ್ಲಿ ಮಹಾನಗರ ಪಾಲಿಕೆ ಅಭಿಯಂತ ಲಕ್ಷ್ಮೀ ಸುಳಗೇಕರ್, ಹಿರಿಯ ಕನ್ನಡ ಹೋರಾಟಗಾರ ಮೆಹಬೂಬ್ ಮಕಾನದಾರ್ ಸೇರಿ ಮತ್ತಿತರರು ಕೇಕ್ ಕತ್ತರಿಸಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮಕ್ಕೆ ಚಾಲನೆ ನೀಡಿದರು.
ಅತ್ತ ಕೇಕ್ ಕತ್ತರಿಸುತ್ತಿದ್ದಂತೆ ಇತ್ತ ಯುವಕರು ಸಿಡಿಸಿದ ಪಟಾಕಿಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು. ನಂತರ ಮತ್ತಷ್ಟು ಹುರುಪು ಹುಮ್ಮಸ್ಸಿನಿಂದ ಯುವ ಮನಸ್ಸುಗಳು ಮನ ಬಿಚ್ಚಿ ಕುಣಿದವು.
ಅಪ್ಪು ಭಾವಚಿತ್ರಕ್ಕೆ ಗೌರವ ಸಲ್ಲಿಕೆ :
ರಾತ್ರಿ ಹೊತ್ತೂ ಕರ್ನಾಟಕ ರತ್ನ ದಿ. ಡಾ.ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರ ಹಿಡಿದು ಬಂದಿದ್ದ ಅವರ ಅಭಿಮಾನಿಗಳು ವಿಶೇಷ ಗೌರವ ಸಲ್ಲಿಸಿದರು. ಅಪ್ಪು ಅಗಲಿ ಮೂರು ವರ್ಷವಾದರೂ ನೀವು ಎಂದೆಂದೂ ಅಜರಾಮರಾ ಎಂಬ ಸಂದೇಶ ಸಾರಿದ್ದು ಎಲ್ಲರ ಗಮನ ಸೆಳೆಯಿತು.