ಉ.ಕ ಸುದ್ದಿಜಾಲ ಬೆಳಗಾವಿ :

ಬಡವರಿಗೆ ಕೊಡಬೇಕಾದ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಿಕೊಳ್ಳುತ್ತಿರುವ ಅಗಸಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಲೂಟಿಕೋರರ ಕೈಗೆ ಸಿಕ್ಕು ನರಳುತ್ತಿದೆ

ಬೆಳಗಾವಿ ಜಿಲ್ಲೆಯ ಅಗಸಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ (ಪಿಕೆಪಿಎಸ್)ಗೆ ನವೆಂಬರನಲ್ಲಿ ನಡೆದ ಚುನಾವಣೆಯಲ್ಲಿ ರೈತರಿಗೆ ಹಗಲು ಕನಸು ತೋರಿಸಿ, ರೈತರಿಗೆ ರಾಯಲ್ ಸೌಲಭ್ಯ ನೀಡುತ್ತೆವೆ ಎಂದು ಅಧಿಕಾರಕ್ಕೇರಿದ ಹೊಸ ಆಡಳಿತ ಮಂಡಳಿ ಐದೇ ತಿಂಗಳಲ್ಲಿ ಸೊಸೈಟಿಯನ್ನು ಮೂರಾಬಟ್ಟಿ ಮಾಡಿಬಿಟ್ಟಿದೆ.

ಹಾಲಿ ಅಧ್ಯಕ್ಷ ಇದ್ದರೂ ಊರಬಿಟ್ಟು ವಾಸವಾಗಿದ್ದರಿಂದ ಅಧ್ಯಕ್ಷನ ಅನುಪಸ್ಥಿತಿಯಲ್ಲಿ ಲೂಟಿಕೋರ ಖ್ಯಾತಿಯ ಸದಸ್ಯನೊಬ್ಬ ಸೊಸೈಟಿಯನ್ನು ನುಂಗಿ ನೀರು ಕುಡಿಯಲು ಮಂದಾಗಿದ್ದಾನೆ. ಯಾಕೆಂದರೆ ಈ ಹಿಂದೆ ಈತ ಮಾಡಿದ್ದು ಅದೆ. ಇದರಿಂದಾಗಿ ಊರಬಿಟ್ಟ ಹಾಲಿ ಅಧ್ಯಕ್ಷನ ಬೇರೆಡೆಯ ವಾಸ ಪಡಿತರಿಗೆ, ರೈತರಿಗೆ ವನವಾಸವಾಗಿ ಪರಿಣಮಿಸಿದೆ.

ನಿಯಮದ ಪ್ರಕಾರ ಹೆಬ್ಬೆರಳು ಹಚ್ಚಿದ ತಕ್ಷಣ ಪಡಿತರ ನೀಡಬೇಕು. ಆದರೆ ಅಗಸಗಿ ಪಿಕೆಪಿಎಸ್ ನಲ್ಲಿ ಮಾತ್ರ ವಿಚಿತ್ರ ಕಾರ್ಯ ನಡೆಯುತ್ತಿದೆ.

ಪ್ರತಿ ಗಲ್ಲಿಯ ಪಡಿತರಿಗೆ ಒಂದೊಂದು ದಿನ ನಿಗದಿಪಡಿಸಿ ಹೆಬ್ಬೆರಳು ಹಚ್ಚಿಕೊಂಡು ರೇಶನ್ ಕೊಡುವುದಾಗಿ ಹೇಳಿ ಈಗ ರೇಶನ್ ಖಾಲಿ ಆಗಿದೆ. ಬೇರೆ ಊರಿನಲ್ಲಿದೆ ಅಲ್ಲಿಂದ ತಂದು ಕೊಡುತ್ತೇವೆ ಎಂದು ಮೂಗಿಗೆ ತುಪ್ಪ ಹಚ್ಚುವ ಕೆಲಸ ಕಳೆದೊಂದು ತಿಂಗಳಿನಿಂದ ಮಾಡಲಾಗುತ್ತಿದೆ.

ಆಹಾರ ಇಲಾಖೆಯವರ ಪ್ರಕಾರ ಅಗಸಗಿಗೆ ಕೊಡಬೇಕಾದ ಸಂಪೂರ್ಣ ಪಡಿತರವನ್ನು ಕೊಡಲಾಗಿದೆ. ಆದರೆ ಆ ರೇಶನ್ ಎಲ್ಲಿಗೆ ಹೊಯ್ತು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಬಲ್ಲ ಮೂಲಗಳ ಪ್ರಕಾರ ರೇಶನ್ ಸಾವಿರಾರು ಕೆಜಿ ಅನ್ನಭಾಗ್ಯ ಅಕ್ಕಿ ಲೂಟಿ ಮಾಡುವ ಕೆಲಸವನ್ನು ಅಧಿಕಾರಿಗಳ ಜತೆ ಸೇರಿ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ. ಇದರ ಹಿಂದೆ ಲೂಟಿಕೋರ ಸದಸ್ಯನ ಪಾತ್ರವಿರುವುದು ಸ್ಪಷ್ಟವಾಗಿದೆ.

ಮುಂಗಾರು ಬಂದರೂ ರೈತರಿಗೆ ಸಿಗದ ಸಾಲ ಸಿಗದೇ ಇಡೀ ಸೊಸೈಟಿ ವ್ಯವಸ್ಥೆ ಹಾಳಾಗಿದೆ ಪಿಕೆಪಿಎಸ್ ಸೊಸೈಟಿಯಿಂದ ಪಡೆದ ಸಾಲಕ್ಕೆ ವರ್ಷದ ಹಿಂದೆ ರೈತರು ಸಕಾಲದಲ್ಲಿ ಹೊರಗಡೆಯಿಂದ ಬಡ್ಡಿ ಮೇಲೆ ಸಾಲ ತೆಗೆದು ತುಂಬಿದ್ದರೂ, ಇದೂವರೆಗೆ ಸಾಲ ನೀಡುವುದಕ್ಕೆ ಹೊಸ ಮಂಡಳಿ ಮುಂದಾಗಿಲ್ಲ.

ಇದಕ್ಕೆ ಆ ಲೂಟಿಕೋರ ಸದಸ್ಯ ಹಾಗೂ ಅನ್ನ ಕಸಿದು ತಿನ್ನುತ್ತಿರುವ ಸದಸ್ಯನೇ ಕಾರಣ ಎಂದು ತಿಳಿದಿದೆ. ಹೊಸ ಅಧ್ಯಕ್ಷನಿಂದ ರೈತ ಹಾಗೂ ಜನತೆಗೆ ಭಾರಿ ನಿರೀಕ್ಷೆ ಇತ್ತು. ಈತ ಬಂದಮೇಲೆ ನಮಗೆ ಫಲ ನೀಡುವ ಸೊಸೈಟಿಯನ್ನಾಗಿ ಮಾಡುತ್ತಾರೆ ಎಂದು ನಂಬಿದ್ದರು.

ಆದರೆ ಆ ಲೂಟಿಕೋರ ಸದಸ್ಯ ತನ್ನ ವಯಕ್ತಿಕ ಲಾಭ ಹಾಗೂ ದ್ವೇಷಕ್ಕಾಗಿ ಸೊಸೈಟಿಯನ್ನು ಬಲಿ ಪಡೆಯುತ್ತಿದ್ದಾನೆ. ಇದನ್ನು ಕಂಡು ಕಾಣದಂತೆ ಇರುವ ಉಳಿದ ಸದಸ್ಯರು ರಬ್ಬರ ಸ್ಟ್ಯಾಂಪಗಳಾಗಿದ್ದಾರೆ. ಇಂತಹ ಸದಸ್ಯರಿಗೆ ಬುದ್ದಿ ಕಲಿಸಿ ಸರ್ಕಾರದ ಯೋಜನೆ ಸಮರ್ಪಕವಾಗಿ ಬಡವರಿಗೆ ಸಿಗುವಂತೆ ಮಾಡಬೇಕಾದ ಅಗತ್ಯವಿದೆ.