ಉ.ಕ ಸುದ್ದಿಜಾಲ ಬೆಳಗಾವಿ :

ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ನಗರದ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದ್ದು ಡಿಸೆಂಬರ್ 31 ರಾತ್ರಿ ಕುಡಿದು ವಾಹನ ಚಲಾವಣೆ ಮಾಡಿದರೆ ಪ್ರಕರಣ ದಾಖಲಿಸಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ್ ಗುಲಾಬರಾವ ಬೋರಸೆ ಖಡಕ್ ಎಚ್ಚರಿಕೆ ನೀಡಿದ್ದಾರೆ.‌

ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ನಗರದ ಭದ್ರತೆಗಾಗಿ 4 ಡಿಎಸ್ಪಿ, 24 ಇನ್ಸ್ಪೆಕ್ಟರ್, 34 ಸಬ್ ಇನ್ಸ್ಪೆಕ್ಟರ್, 660 ಸಿಎಸ್ಸಿ, ಸಿಪಿಸಿ, 300 ಹೋಮ್ ಗಾರ್ಡ್, 7 ಸಿಎಆರ್ ತುಕಡಿ ಹಾಗೂ 3 ಕೆಎಸ್ಆರ್ ಪಿ ತುಕಡಿ ನಿಯೋಜಿಸಲಾಗಿದೆ. ಅಷ್ಟೇ ಅಲ್ಲದೆ ನಗರದ ಎಲ್ಲಾ ಕಡೆಗಳಲ್ಲಿ ತೀವ್ರ ನಿಗಾ ವಹಿಸಲಾಗಿದ್ದು ಸಿಸಿಟಿವಿ ಹಾಗೂ ಡ್ರೋಣ್ ಕಣ್ಗಾವಲು ಇರಲಿದೆ. ಮುಂಜಾಗ್ರತಾ ಕ್ರಮವಾಗಿ ಅಂಬ್ಯುಲೆನ್ಸ್ ಹಾಗೂ ಅಗ್ನಿಶಾಮಕ ವಾಹನ ಬಳಸಲಾಗುತ್ತಿದೆ.

ಬಾರ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಅಪ್ರಾಪ್ತ ವಯಸ್ಕರಿಗೆ ಮದ್ಯ ಮಾರಾಟ ನಿಷೇಧ ಇದ್ದು ಕಟ್ಟುನಿಟ್ಟಿನಿಂದ ನಿಯಮ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಪಟಾಕಿ ಹಾರಿಸುವ ಸ್ಥಳದಲ್ಲಿ ಸುರಕ್ಷಾ ಉಪಕರಣ ಇಟ್ಟುಕೊಳ್ಳಬೇಕು.

ಕಾರ್ಯಕ್ರಮ ಸ್ಥಳಗಳಲ್ಲಿ ಒಳ ಬರುವ ಹಾಗೂ ನಿರ್ಗಮನ ಫಲಕ ಅಳವಡಿಸಬೇಕು. ಅಪ್ರಾಪ್ತರಿಗೆ ಲಾಡ್ಜ್ ಕೇಳಿದರೆ ನೀಡದಂತೆ ಹೊಟೆಲ್ ಮಾಲಿಕರ ಸಭೆಯಲ್ಲಿ ಸೂಚಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ಡಿಸೆಂಬರ್ 22 ರಿಂದ 29 ರ ವರೆಗೆ ನಗರ ವ್ಯಾಪ್ತಿಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಚಾಲಕರ ವಿರುದ್ಧ 138 ಪ್ತಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ. ಕುಡಿದು ವಾಹನ ಚಲಾಯಿಸಿದರೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.