ಉ.ಕ ಸುದ್ದಿಜಾಲ ಗುರ್ಲಾಪೂರ :

ದೇಶದ ಬೆನ್ನೆಲ್ಲಬು ರೈತ ಎನ್ನುವ ಮಾತು ಮಾತಿಗೆ ಅಷ್ಟೇ ಸೀಮಿತವಾಗಿದೆ ತಾನು ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದೆ ಎಷ್ಟೋ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಕೆಲ ರೈತರು ಬೀದಿಗೆ ಇಳಿದು ಹೋರಾಟ ಮಾಡಿದರು ಗಮನ ಹರಿಸದ ಸರ್ಕಾರ ಹೌದು ಕಳೆದ ನಾಲ್ಕೈದು ದಿನಗಳಿಂದ ಸರ್ಕಾರ ವಿರುದ್ದ ಬೀದಿಗಳಿದು ರೈತ ಸಂಘಟನೆಗಳು ಕಬ್ಬಿನ ಬೆಲೆ ನಿಗಧಿ ಮಾಡಿ ಎಂದು ಹೋರಾಟ ಮಾಡಿದರು ಕ್ಯಾರೆ ಎನ್ನದ ಸರ್ಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿರುವ ಅನ್ನದಾತರು.

ಸಕ್ಕರೆ ಕಾರ್ಖಾನೆಗಳಿಂದ 3,500 ರೂ. ದರ ನೀಡುವಂತೆ ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ರೈತರು ಗುರ್ಲಾಪುರ್ ಕ್ರಾಸ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಭಾನುವಾರ ಪ್ರತಿಭಟನಾ ಸ್ಥಳಕ್ಕಾಗಮಿಸಿದ್ದ ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಎಸ್ಪಿ ಅವರ ನೇತೃತ್ವದಲ್ಲಿ ಹೋರಾಟಗಾರರೊಂದಿಗೆ ನಡೆದ ಸಂಧಾನ ಸಭೆ ವಿಫಲವಾಗಿದೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ನಲ್ಲಿ ಕಳೆದ ನಾಲ್ಕು ದಿನಗಳಿಂದ ಹಗಲು ರಾತ್ರಿ ಎನ್ನದೆ ಬೃಹತ್ ಪ್ರಮಾಣದ ಕಬ್ಬು ಬೆಳೆಗಾರರ ಹೋರಾಟ ನಡೆಯುತ್ತಿದೆ. ಹೀಗಾಗಿ ನಿನ್ನೆ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಮತ್ತು ಎಸ್ಪಿ ಭೀಮಾಶಂಕರ್ ಗುಳೇದ್ ರೈತರು ಹಾಗೂ ರೈತ ಮುಖಂಡರ ಜೊತೆ ಸಂಧಾನ ಸಭೆ ನಡೆಸಿದರು.

ಈ ಕುರಿತಂತೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿದ್ದು, ರೈತರು ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಬೃಹತ್ ಹೋರಾಟ ಮಾಡಿಕೊಂಡು ಬಂದಿದ್ದಾರೆ. ರೈತರ ಏಳಿಗೆಗಾಗಿ ನಾನು ಶ್ರಮಿಸುತ್ತೇನೆ. ಕಾರ್ಖಾನೆ ಮಾಲೀಕರ ಜೊತೆಗೆ ಸಭೆ ನಡೆಸಲಾಗಿತ್ತು. ಆದರೆ ಕಾರ್ಖಾನೆ ಮಾಲೀಕರು 3,200 ರೂ. ಕೊಡುವುದಾಗಿ ಒಪ್ಪಿಕೊಂಡಿದ್ದಾರೆ.

ನಿಮ್ಮ ಜೊತೆ ನಾನು ನಿರಂತರವಾಗಿ ಇರುತ್ತೇನೆ. ನಿಮ್ಮ ಬೇಡಿಕೆಗೆ ನಾನು ಸ್ಪಂದನೆ ನೀಡುತ್ತೇನೆ. ಯಾವುದೇ ಕಾರಣಕ್ಕೂ ರೈತರು ಬೀದಿಯಲ್ಲಿ ಕೂರಬಾರದು. ನಾನು ರೈತ ಸ್ನೇಹಿ ಅಧಿಕಾರಿಯಾಗಿ ನಿಮಗೆ ಮನವಿ ಮಾಡಿಕೊಳ್ಳುತ್ತೇನೆ. ನೀವು ಈ ಪ್ರತಿಭಟನೆಯನ್ನು ಕೈ ಬಿಡಿ, ನಾನು ನಿಮ್ಮ ಜೊತೆ ಇರುತ್ತೇನೆ ಎಂದು ಮನವೊಲಿಸಲು ಪ್ರಯತ್ನಿಸಿದರು.

ಈ ಹಿಂದೆ ಕೂಡ ತೂಕದಲ್ಲಿ ಕೆಲವು ಕಾರ್ಖಾನೆಗಳು ಮೋಸ ಮಾಡುತ್ತವೆ ಎಂದು ರೈತ ಮುಖಂಡ ಚುನ್ನಪ್ಪ ಪೂಜಾರಿ ನನಗೆ ವಿಸ್ತೃತವಾಗಿ ಮಾಹಿತಿ ನೀಡಿದ್ದರು. ತಕ್ಷಣವೇ ನಾನು ಜಿಲ್ಲಾಡಳಿತದಿಂದ ಓರ್ವ ಅಧಿಕಾರಿಯನ್ನು ನೇಮಿಸಿ ತೂಕದ ಮಷಿನ್ಗಳನ್ನು ಪರಿಶೀಲನೆ ಮಾಡಿಸಿದ್ದೆ. ಬೆಳಗಾವಿಯಲ್ಲಿ ರೈತರ ಹೋರಾಟಕ್ಕೆ ಜಿಲ್ಲಾಡಳಿತ ಸ್ಪಂದನೆ ನೀಡಿದೆ, ನೀವು ಈ ಪ್ರತಿಭಟನೆಯನ್ನು ಕೈ ಬಿಡಬೇಕೆಂದು ರೈತರಿಗೆ ಡಿಸಿ ಮನವಿ ಮಾಡಿದರು.

ರೈತ ಮುಖಂಡರಾದ ಶಶಿಕಾಂತ ಗುರೂಜಿ ಮತ್ತು ಚುನ್ನಪ್ಪ ಪೂಜಾರಿ ಮಾತನಾಡಿ, ಪಕ್ಕದ ಮಹಾರಾಷ್ಟ್ರದವರು ಪ್ರತಿ ಟನ್ ಕಬ್ಬಿಗೆ 3,425 ರೂ‌. ನಿಗದಿ ಮಾಡಿದ್ದಾರೆ. ಕಳೆದ 10 ವರ್ಷಗಳಿಂದ ದರ ಹೆಚ್ಚಿಗೆ ಮಾಡಿ ಎಂದು ಕಾರ್ಖಾನೆಗಳಿಗೆ ಬೇಡಿಕೊಂಡರೂ ನಯಾ ಪೈಸೆ ಏರಿಕೆ ಮಾಡಿಲ್ಲ. ಜಿಲ್ಲಾಧಿಕಾರಿಗಳು ರೈತರ ಪರವಾಗಿರುವುದರಿಂದ ನಿಮ್ಮ ಮಾತಿಗೆ ನಾವು ಬೆಲೆ ಕೊಡುತ್ತೇವೆ.

ಇದುವರೆಗೆ ಅಹಿತಕರ ಘಟನೆ ನಡೆಯದಂತೆ ಶಾಂತಿಯುತವಾಗಿ ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಗೋಕಾಕ್ ಚಳವಳಿ ಬಿಟ್ಟರೆ ಬೆಳಗಾವಿ ಇತಿಹಾಸದಲ್ಲಿ ಒಂದು ಲಕ್ಷ ಜನ ಸೇರಿದ್ದು ಇದೇ ಮೊದಲು. ಇದರಿಂದ ಜಿಲ್ಲಾಧಿಕಾರಿಗಳ ಮನವಿಯನ್ನು ನಾವು ತಿರಸ್ಕರಿಸುತ್ತೇವೆ ಎಂದರು.

ನಮ್ಮ ಬೇಡಿಕೆ 3,500 ರೂ. ಆಸುಪಾಸಿನವರೆಗೆ ಇದೆ. ಪ್ರತಿ ಟನ್ ಕಬ್ಬಿಗೆ ದರ ನಿಗದಿ ಮಾಡುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ. ನಾಳೆ ಎರಡು ಲಕ್ಷ ಜನ ಸೇರುತ್ತಾರೆ. ಯಾವುದೇ ಅಹಿತಕರ ಘಟನೆ ನಡೆಯುವ ಮುನ್ನ ಅದಷ್ಟು ಬೇಗನೆ ನಮಗೆ ಸಿಹಿ ಸುದ್ದಿ ನೀಡಿ.

ನಿಮ್ಮ ಜಿಲ್ಲಾಧಿಕಾರಿಗಳ ಸರ್ವೋಚ್ಛ ಅಧಿಕಾರ ಬಳಸಿ ಕಾರ್ಖಾನೆ ಮಾಲೀಕರ ಜೊತೆ ಮಾತನಾಡಿ, ನಮಗೆ ನ್ಯಾಯ ಒದಗಿಸಿಕೊಡಬೇಕು. ಈ ಪ್ರತಿಭಟನೆಯನ್ನು ಇಲ್ಲಿಗೆ ಕೈ ಬಿಡೋದಿಲ್ಲ, ನಮಗೆ ನ್ಯಾಯಯುತವಾದ ಬೆಲೆ ನಿಗದಿಪಡಿಸುವವರೆಗೆ ಈ ಹೋರಾಟ ಮುಂದುವರಿಯುತ್ತದೆ ಎಂದು ತಿಳಿಸಿದರು.