ಉ.ಕ ಸುದ್ದಿಜಾಲ ಬೆಳಗಾವಿ :

ಈ ಬಾರಿಯೂ ಗಡಿ ಕನ್ನಡಿಗರ ರಾಜ್ಯೋತ್ಸವ ಅಕ್ಷರಶಃ ಅಭಿಮಾನದ ಅಣೆಕಟ್ಟೆ ಒಡೆದಂತಾಯಿತು. ಜಿಲ್ಲೆ– ನೆರೆ ಜಿಲ್ಲೆಗಳಿಂದ ಬಂದ 4 ಲಕ್ಷಕ್ಕೂ ಹೆಚ್ಚು ಜನ ಈ ಸಂಭ್ರಮಕ್ಕೆ ಸಾಕ್ಷಿಯಾದರು.

ಬೆಳಗಾವಿ ನಗರದ ರಾಣಿ ಚನ್ನಮ್ಮ ವೃತ್ತ ಕನ್ನಡಿಗರ ಅಸ್ತಿತ್ವದ ಪ್ರತಿರೂಪದಂತೆ ಕಂಡಿತು. ಭುವನಸುಂದರಿ ಭುವನೇಶ್ವರಿಯೇ ಅವತರಿಸಿದಷ್ಟು ವೈಭೋಗ ಮನೆ ಮಾಡಿತು.

ಚನ್ನಮ್ಮ ವೃತದ ಸುತ್ತ ಕುಳಿತು ಮೆರವಣಿಗೆ ನೋಡಲು ಮೆಟ್ಟಿಲುಗಳ ವ್ಯವಸ್ಥೆ ಮಾಡಲಾಗಿತ್ತು. ಇಡೀ ದಿನ ಜನಪ್ರವಾಹ ಹರಿಯುತ್ತಲೇ ಇತ್ತು. ಈ ಸಂಭ್ರಮ ನೋಡಲು ಜನ ಮನೆಗಳ ಮೇಲೆ, ಕಟ್ಟಡಗಳ ಮೇಲೆ, ಮರಗಳ ಮೇಲೆ ಹೀಗೆ ಎಲ್ಲೆಲ್ಲಿ ನುಸುಳಲು, ನುಗ್ಗಲು ಸಾಧ್ಯವೋ ಅಲ್ಲೆಲ್ಲ ನುಗ್ಗಿದರು.

ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಿಕೇಶಿಯ ಬೃಹತ್‌ ಪ್ರತಿಮೆ ಚನ್ನಮ್ಮ ವೃತ್ತಕ್ಕೆ ಬಂದಾಗಲಂತೂ ಮೈ–ಮನ ರೋಮಾಂಚನಗೊಂಡವು. ಅದರ ಹಿಂದೆ ಬಂದ ಮಹಾನ್‌ ವಿಜಯನಗರ ಸಾಮ್ರಾಜ್ಯ ಕಟ್ಟಿದ ಶ್ರೀಕೃಷ್ಣದೇವರಾಯ, ಮೈಸೂರು ಒಡೆಯರು, ಕೆಳದಿ ಚನ್ನಮ್ಮ, ಮಹರ್ಷಿ ವಾಲ್ಮೀಕಿ, ಜಗಜ್ಯೋತಿ ಬಸವಣ್ಣ ಸೇರಿದಂತೆ ಐತಿಹಾಸಿಕ ಪುರುಷ ಪ್ರತಿರೂಪಗಳನ್ನು ಮಾಡಿದ ಯುವಜನರ ಸಂಘಗಳು ಸೈ ಅನ್ನಿಸಿಕೊಂಡವು.

ಯುವಕರನ್ನೂ ಮೀರಿಸಿದ ಯುವತಿಯರು

ವಿವಿಧ ಶಾಲೆ– ಕಾಲೇಜುಗಳ ವಿದ್ಯಾರ್ಥಿನಿಯರ ತಂಡಗಳು ತಿಂಗಳ ಹಿಂದಿನಿಂದಲೂ ರಾಜ್ಯೋತ್ಸವದ ಗೀತೆಗಳಿಗೆ ನೃತ್ಯ ಸಂಯೋಜನೆ ಮಾಡಿದ್ದರು. ರಾಣಿ ಚನ್ನಮ್ಮ ವೃತ್ತದಲ್ಲಿ ಅಪಾರ ಜನರ ಮಧ್ಯೆ ತಮ್ಮ ನೃತ್ಯ ಪ್ರದರ್ಶನ ನೀಡಿದರು. ಉಳಿದವರಂತೂ ಡಿ.ಜೆ ಸೌಂಡ್‌ ಸಿಸ್ಟಂಗೆ ತಕ್ಕಂತೆ ಮೈಮರೆತು ಕುಣಿದರು.

ಕೆಲವರು ವಾಹನಗಳ ಎಂಜಿನ್‌ ಮೇಲೆ ಹತ್ತಿ, ಲಾರಿಗಳ ಮೇಲೆ ಹತ್ತಿ ಚಿತ್ತ ಸೆಳೆದರು. ಹುಡುಗರಿಗಿಂತ ತಾವೇನು ಕಮ್ಮಿ ಇಲ್ಲ ಎಂಬಂತೆ ಜಿದ್ದಿಗೆ ಬಿದ್ದರು. ಯುವಕ– ಯುವತಿಯರ ಈ ತಂಡಗಳಲ್ಲಿ ಕನ್ನಡತನ ಹುಚ್ಚು ಹೊಳೆಯಾಗಿ ಹರಿಯಿತು.

ಮೆರವಣಿಗೆಯ ಇಕ್ಕೆಲಗಳಲ್ಲೂ ಹಲವು ಸಂಘಟನೆಗಳು ಗ್ಯಾಲರಿ, ಪೆಂಡಾಲುಗಳನ್ನು ನಿರ್ಮಿಸಿದವು. ಅಲ್ಲಿಂದಲೇ ಪುಷ್ಪವೃಷ್ಟಿ ಮಾಡಲಾಯಿತು.