ಉ.ಕ ಸುದ್ದಿಜಾಲ ಬೆಳಗಾವಿ :

ಬೆಳಗಾವಿಯಲ್ಲಿ ನಗರಾಭಿವೃದ್ಧಿ ಕೋಸದ ಎಇಇ ಅಜಯಸಿಂಗ್ ರಜಪೂತ ಮನೆ ಸೇರಿದಂತೆ ಹಲವು ಕಡೆ ನಡೆದ ದಾಳಿಯಲ್ಲಿ ಬೆಚ್ಚಿಬೀಳಿಸುವ ಅಕ್ರಮ ಆಸ್ತಿ ಪತ್ತೆಯಾಗಿದೆ. ದಿನಗೂಲಿ ನೌಕರನಾಗಿ ಕೆಲಸ ಆರಂಭಿಸಿದ ವ್ಯಕ್ತಿ ಇಂದು ಕೋಟಿ ಕೋಟಿ ಆಸ್ತಿ ಹೊಂದಿ ಕುಬೇರನಾಗಿದ್ದು ಲೋಕಾಯುಕ್ತ ದಾಳಿಯಲ್ಲಿ ಬೆಚ್ಚಿಬೀಳಿಸುವ ಅಕ್ರಮ ಆಸ್ತಿ ಪತ್ತೆಯಾಗಿದೆ. ಹಾಗಾದರೆ ಅಜಯಸಿಂಗ್ ರಜಪೂತ ಭ್ರಷ್ಟಾಚಾರದ ಕರ್ಮಕಾಂಡದ ಸಂಪೂರ್ಣ ಡಿಟೈಲ್ ಇಲ್ಲಿದೆ ನೋಡಿ..!

1992ರಲ್ಲಿ ದಿನಗೂಲಿ ನೌಕರ ; ಇಂದು ಕೋಟಿ ಕೋಟಿ ಆಸ್ತಿ ಮಾಲೀಕ

ಡೈಮಂಡ್ ನೆಕ್ಲೇಸ್‌ನಿಂದ ಬಂಗಾರದ ಗಟ್ಟಿಗಳವರೆಗೆ ಜಪ್ತಿ

5.96 ಕೆಜಿ ಚಿನ್ನ, 5 ಕೆಜಿ ಬೆಳ್ಳಿ ವಶಕ್ಕೆ

ಹೆಂಡತಿ, ಅತ್ತೆ ಲಾಕರ್‌ಗಳಲ್ಲೂ ಅಕ್ರಮ ಆಸ್ತಿ ಪತ್ತೆ


ಇದ್ಯಾವದೋ ಬಂಗಾರದ ಅಂಗಡಿಯಲ್ಲ, ಲೋಕಾಯುಕ್ತ ದಾಳಿಯಲ್ಲಿ ಸಿಕ್ಕಿರುವ ಭ್ರಷ್ಟಾಚಾರದ ಹಣದಿಂದ ಖರೀದಿಸಿ ಚಿನ್ನಾಭರಣಗಳು ಹೌದು, ಬೆಳಗಾವಿಯಲ್ಲಿ ಬಧುವಾರ(ಏ.07)ರಂದು ನಡೆದ ಲೋಕಾಯುಕ್ತ ದಾಳಿಯೂ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ. ಸರ್ಕಾರಿ ಸೇವೆಯ ಬಗ್ಗೆ ಅನುಮಾನ ಮೂಡಿದೆ. ಒಂದು ಕಾಲದಲ್ಲಿ ದಿನಗೂಲಿ ನೌಕರನಿದ್ದವ ಇವತ್ತು ಕೋಟಿ ಕೋಟಿ ಕುಬೇರನಾಗಿದ್ದಾನೆ.

ಬೆಳಗಾವಿ ಡಿಸಿ ವ್ಯಾಪ್ತಿಯಲ್ಲಿ ಬರೋ (DUDC) ನಗರಾಭಿವೃದ್ಧಿ ಕೋಸದಲ್ಲಿ ಎಇಇ ಅಜಯಸಿಂಗ್ ರಜಪೂತ ಪ್ಲಾನಿಂಗ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದವ.ಅಕ್ರಮ‌ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂಬ ಕಾರಣಕ್ಕೆ ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ದಾರೆ. ಚಮೂರು ದಿನಗಳ ಕಾಲ ನಿರಂತರವಾಗಿ ನಡೆದ ಶೋಧ ಕಾರ್ಯಾಚರಣೆಯಲ್ಲಿ 14 ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿದೆ.

ಡೈಮಂಡ್ ನೆಕ್ಲೇಸ್, ವಜ್ರದ ಉಂಗುರಗಳು, ಬಂಗಾರದ ಗಟ್ಟಿಗಳು. ಒಟ್ಟಾರೆ 5.96 ಕೆಜಿ ಚಿನ್ನ, 5 ಕೆಜಿ ಬೆಳ್ಳಿ, 3.12 ಕೋಟಿ ಬ್ಯಾಂಕ್ ಡೆಪಾಸಿಟ್ ಪತ್ತೆಯಾಗಿದೆ.ಇದಲ್ಲದೆ ಐಷಾರಾಮಿ ಕಾರು ಮತ್ತು ಬೈಕ್‌ಗಳನ್ನೂ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಇನ್ನೂ ಹೆಂಡತಿ ಹಾಗೂ ಅತ್ತೆಯ ಹೆಸರಿನಲ್ಲಿ ಇಟ್ಟಿದ್ದ SBI ಲಾಕರ್‌ಗಳಲ್ಲೂ ಅಕ್ರಮ ಆಸ್ತಿ ಪತ್ತೆಯಾಗಿದೆ.ಹುಕ್ಕೇರಿ, ಹುಬ್ಬಳ್ಳಿ, ಗೋಕಾಕ್ ಸೇರಿದಂತೆ ಹಲವು ಕಡೆಗಳಲ್ಲಿ ಒಟ್ಟು 18 ನಿವೇಶನಗಳ ದಾಖಲೆಗಳು ಸಿಕ್ಕಿವೆ. ಬೆಳಗಾವಿಯ ಆಂಜನೇಯ ನಗರದಲ್ಲಿ ಮೂರು ಮನೆಗಳು, ಒಂದು ಮನೆಯಲ್ಲಿ ಅರ್ಧ ಕೆಜಿ ಚಿನ್ನ ಪತ್ತೆಯಾಗಿದೆ.

ಹುಕ್ಕೇರಿ SBI ಲಾಕರ್‌ನಲ್ಲಿ 400 ಗ್ರಾಂ ಚಿನ್ನ, ಗ್ರಾಮೀಣ ಬ್ಯಾಂಕ್‌ಗಳಲ್ಲಿ ಚಿನ್ನ ಮತ್ತು ಬೆಳ್ಳಿ ಗಟ್ಟಿಗಳು ಪತ್ತೆಯಾಗಿವೆ. ಎಲ್ಲವನ್ನೂ ಜಪ್ತಿ ಮಾಡಿರೋ ಲೋಕಾಯುಕ್ತ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇನ್ನೂ ಅಜಯಸಿಂಗ್ ಹಿನ್ನೆಲೆ ನೋಡುವುದಾದರೆ ಈತ ಮೂಲತಃ ಹುಕ್ಕೇರಿಯವ. 1992ರಲ್ಲಿ ದಿನಗೂಲಿ ನೌಕರನಾಗಿ ಅಜಯಸಿಂಗ್ ಸೇವೆ ಆರಂಭಿಸಿದ್ದನು. 2006ರವರೆಗೆ ದಿನಗೂಲಿ ನೌಕರನಾಗಿಯೇ ಮುಂದುವರಿದು 2008ರಲ್ಲಿ ಸರ್ಕಾರದಿಂದ ಖಾಯಂ ಆಗುತ್ತದೆ. ಬಳಿಕ ಅಸಿಸ್ಟೆಂಟ್ ಇಂಜಿನಿಯರ್, ಜ್ಯೂನಿಯರ್ ಇಂಜಿನಿಯರ್ ಹೀಗೆ ಹಂತಹಂತವಾಗಿ ಬೆಳೆದ ಅಜಯಸಿಂಗ್ ಇದೀಗ ನಗರಾಭಿವೃದ್ಧಿ ಇಲಾಖೆ ಎಇಇ ಹುದ್ದೆವರೆಗೆ ಏರಿದ್ದಾರೆ.

ಆದರೆ ಈ ಅವಧಿಯಲ್ಲಿ ಸುಳ್ಳು ಆದಾಯ ತೋರಿಸಿ ಕೋಟಿ ಕೋಟಿ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಎಲ್ಲ ಮಾಹಿತಿ ಲೋಕಾಯುಕ್ತ ಸಿಪಿಐ,ತನಿಖಾಧಿಕಾರಿ ಆಗಿರೋ ನಿರಂಜನ ಪಾಟೀಲ ಗೌಪ್ಯ ಮಾಹಿತಿ ಸಿಗುತ್ತದೆ.

ಇದೇ ಆಧಾರದ ಮೇಲೆ ಲೋಕಾಯುಕ್ತ ಎಸ್‌ಪಿ ಪ್ರಸನ್ ದೇಸಾಯಿ ಮಾರ್ಗದರ್ಶನದಲ್ಲಿ ಸಂಪೂರ್ಣ ಆಪರೇಷನ್ ಮಾಡಲಾಗುತ್ತದೆ. ಮೂರು ದಿನಗಳ ಕಾಲ ದಾಖಲೆಗಳ ಪರಿಶೀಲನೆ ಸಂದರ್ಭದಲ್ಲಿ 14ಕೋಟಿಗೂ ಅಧಿಕ ಅಕ್ರಮ ಆಸ್ತಿ ಪತ್ತೆಯಾಗಿದೆ. ಸದ್ಯ ಬೆಳಗಾವಿಯಲ್ಲಿ ಭ್ರಷ್ಟ ಅಧಿಕಾರಿಗಳಿಗೆ ಅಗಾಗ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸುವ ಕೆಲಸವನ್ನು ಮಾಡ್ತಿದ್ದಾರೆ.

ಒಟ್ಟಾರೆ ದಿನಗೂಲಿ ನೌಕರನಿಂದ ಕೋಟಿ ಕುಬೇರನಾಗಿರುವ ಈ ಪ್ರಕರಣದಲ್ಲಿ ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರದ ಮುಖವಾಡವನ್ನು ಮತ್ತೊಮ್ಮೆ ಬಿಚ್ಚಿಟ್ಟಿದೆ. ಇನ್ನೂ ಹೆಚ್ಚಿನ ಅಕ್ರಮ ಆಸ್ತಿ ಇರುವ ಶಂಕೆ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ.