ಉ.ಕ ಸುದ್ದಿಜಾಲ ಕಲಬುರಗಿ :

ಹಲವಾರು ರೀತಿ ಹಲವಾರು ತೆರನಾಗಿ ಕಳ್ಳರು ಕಳ್ಳತನವನ್ನ ಮಾಡಿರುವುದನ್ನ ನೋಡಿದ್ದೇವೆ. ಆದರೆ ಇಲ್ಲೊಬ್ಬ ಕಳ್ಳ ಕೆಎಸ್‌ಆರ್‌ಟಿಸಿ ಬಸ್‌ನ್ನೆ ಕದ್ದೊಯ್ದ ಪ್ರಕರಣ ಒಂದು ಬೆಳಕಿಗೆ ಬಂದಿದ್ದು ಕಲಬುರಗಿ ಜಿಲ್ಲೆ ಚಿಂಚೋಳಿ ಬಸ್ ನಿಲ್ದಾಣದಿಂದ ಕಳವು ಆಗಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಪಕ್ಕದ ತೆಲಂಗಾಣ ರಾಜ್ಯದಲ್ಲಿ ಪತ್ತೆ ಆಗಿದೆ.

ಮಿರಿಯಾನಾ, ತಾಂಡೂರ ಮಾರ್ಗವಾಗಿ ಕೊಡಂಗಲ್‌ಗೆ ಬಸ್ ಪ್ರವೇಶ ಮಾಡಿರುವ ಬಗ್ಗೆ ಸಿಸಿಟಿವಿ ದೃಶ್ಯಗಳಲ್ಲಿ ಸೇರೆ ಆಗಿತ್ತು. ಇದೇ ಜಾಡು ಹಿಡಿದು ಹೋದ ಪೊಲೀಸರು ತೆಲಂಗಾಣಾ ರಾಜ್ಯದ ಪ್ರಸಿದ್ದ ಭೂಕೈಲಾಸ ದೇವಸ್ಥಾನ ಸಮೀಪದ ಅಂತಾರಾಮ ತಾಂಡಾ ಬಳಿ ಬಸ್ ಇರೋದನ್ನು ಪತ್ತೆ ಹಚ್ಚಿದ್ದಾರೆ.‌

ರಸ್ತೆ ಬದಿಯ ಗುಂಡಿಯಲ್ಲಿ ಬಸ್ ಸಿಲುಕಿದ್ರಿಂದ ಸ್ಥಳದಲ್ಲಿಯೇ ಬಿಟ್ಟು ಕಳ್ಳ ಪರಾರಿಯಾಗಿದ್ದಾನೆ. ಇಂದು ಬೆಳಗಿನ ಜಾವ ಸುಮಾರು 3:30 ಕ್ಕೆ ಕಲಬುರಗಿ ಜಿಲ್ಲೆ ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ನ್ನೇ ಖದೀಮ ಕಳ್ಳ ಕದ್ದೊಯ್ದಿದ್ದ, ಬೈಕ್ ಕಾರ್ ಕಳ್ಳತನ ಕಾಮನ್ ವಿಷಯ ಆದ್ರೆ ದೊಡ್ಡದಾದ ಸರ್ಕಾರಿ ಬಸ್‌ನ್ನೆ ಕದ್ದೊಯ್ದಿರುವದು ರಾಜ್ಯದಾದ್ಯಂತ ಬಾರಿ ಕೂತುಹಲಕ್ಕೆ ಕಾರಣವಾಗಿತ್ತು.

ಬೀದರ್ ಡಿಪೋ ನಂಬರ್ – 2 ಗೆ ಸೇರಿದ KA-38 F-971 ನೋಂದಣಿಯ ಬಸ್ ಕಳ್ಳತನ ಮಾಡಲಾಗಿತ್ತು. ಬಸ್ ಕದ್ದೊಯ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಬಸ್ ಪತ್ತೆಗಾಗಿ ಮೂರು ಪೊಲೀಸ್ ತಂಡ ಜೊತೆಗೆ ಕೆಕೆಆರ್‌ಟಿಸಿಯ ನಾಲ್ಕು ತಂಡಗಳನ್ನ ರಚಿಸಿ ಹುಡುಕಾಟ ನಡೆಸಲಾಗಿತ್ತು.

ಟೋಲ್ ನಾಕಾ ಹಾಗೂ ರಸ್ತೆ ಪಕ್ಕದ ಅಂಗಡಿಗಳಲ್ಲಿನ ಸಿಸಿ ಕ್ಯಾಮೇರಾ ಫೂಟೇಜ್ ಗಳನ್ನು ಆಧರಿಸಿ ಪೊಲೀಸರು ಕೊನೆಗೂ ತೆಲಂಗಾಣ ರಾಜ್ಯದಲ್ಲಿ ಬಸ್ ಇರೋದನ್ನು ಪತ್ತೆ ಹಚ್ಚಿದ್ದಾರೆ.

ಸದ್ಯ ಬಸ್ ಪತ್ತೆಯಾದ್ರೂ ಕಳ್ಳ ಮಾತ್ರ ಪತ್ತೆ ಆಗಿಲ್ಲ, ಕಳ್ಳನ ಪತ್ತೆಗೆ ಪೊಲೀಸರು ಕಾರ್ಯಚರಣೆ ಮುಂದುವತರೆಸಿದ್ದಾರೆ‌. ಕಳ್ಳ ಸಿಕ್ಕ ಮೇಲಷ್ಟೇ ಬಸ್ ಕದೀಯಲು ಕಾರಣ ಗೊತ್ತಾಗಲಿದೆ.‌ ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.