ಉ.ಕ ಸುದ್ದಿಜಾಲ ರಾಜಸ್ಥಾನ :

ರಾಜಸ್ಥಾನದ ಜಿನ್ಜುನು ಜಿಲ್ಲೆಯ ಮಾಂಡವಾ ಪ್ರದೇಶದ ಮೆಹ್ರಾದಸಿ ಗ್ರಾಮದ ನಿವಾಸಿ ಜವಾನ್ ಸುರೇಂದ್ರ ಕುಮಾರ್ ಮೋಗಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ನಡೆಸಿದ ದಾಳಿಯಲ್ಲಿ ಹುತಾತ್ಮರಾಗಿದ್ದಾರೆ.

ಸುರೇಂದ್ರ ಅವರನ್ನು ಜಮ್ಮುವಿನಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಉಧಂಪುರದಲ್ಲಿ ನಿಯೋಜಿಸಲಾಗಿತ್ತು. ಸುರೇಂದ್ರ ಮೋಗಾ ಸೇನೆಯ ವೈದ್ಯಕೀಯ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದರು. ನಿನ್ನೆ ರಾತ್ರಿ ನಡೆದ ಪಾಕಿಸ್ತಾನಿ ದಾಳಿಯಲ್ಲಿ ಅವರು ಹುತಾತ್ಮರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಜುಂಜುನು ಜಿಲ್ಲಾಧಿಕಾರಿ ರಾಮಾವತಾರ್ ಮೀನಾ ಮಾತನಾಡಿ, ಮೆಹ್ರಾದಸಿಯ ಯೋಧ ಸುರೇಂದ್ರ ಕುಮಾರ್ ಮೊಗ ಹುತಾತ್ಮರಾಗಿದ್ದಾರೆ. ಅಲ್ಲಿನ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದೇವೆ. ಇತರ ಮಾಹಿತಿಯನ್ನು ಸಹ ಸಂಗ್ರಹಿಸಲಾಗುತ್ತಿದೆ ಎಂದಿದ್ದಾರೆ.

ಹುತಾತ್ಮ ಸುರೇಂದ್ರ ಕುಮಾರ್ ಅವರಿಗೆ 5 ವರ್ಷದ ಮಗ ಮತ್ತು 8 ವರ್ಷದ ಮಗಳಿದ್ದಾರೆ. ಈ ದುಃಖದ ಸುದ್ದಿಯನ್ನು ಹುತಾತ್ಮನ ತಾಯಿಗೆ ಕುಟುಂಬ ಇನ್ನೂ ತಿಳಿಸಿಲ್ಲ. ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಸೇನಾ ಪ್ರಧಾನ ಕಚೇರಿಯಿಂದ ದೂರವಾಣಿ ಮೂಲಕ ಸುರೇಂದ್ರ ಕುಮಾರ್ ಅವರ ಹುತಾತ್ಮತೆಯ ಮಾಹಿತಿಯನ್ನು ಅವರ ಸೋದರ ಮಾವ ಬಾಜಿಸರ್ ನಿವಾಸಿ ಜೈಪ್ರಕಾಶ್ ಅವರಿಗೆ ಹೇಳಲಾಯಿತು. ಹುತಾತ್ಮರ ಪಾರ್ಥಿವ ಶರೀರ ಗ್ರಾಮಕ್ಕೆ ಬರುವ ದಿನಾಂಕ ಮತ್ತು ಸಮಯದ ಬಗ್ಗೆ ಇನ್ನೂ ಯಾವುದೇ ಮಾಹಿತಿ ಬಂದಿಲ್ಲ.

14 ವರ್ಷಗಳ ಹಿಂದೆ ಸೇನೆಗೆ ಸೇರಿದ್ದ ಸುರೇಂದ್ರ ಕುಮಾರ್ : ಸುರೇಂದ್ರ ಕುಮಾರ್ ಅವರು 1990ರ ಸೆಪ್ಟೆಂಬರ್ 8 ರಂದು ಜನಿಸಿದರು ಮತ್ತು ಸುಮಾರು 14 ವರ್ಷಗಳ ಹಿಂದೆ ಭಾರತೀಯ ಸೇನೆಯನ್ನು ಸೇರ್ಪಡೆಗೊಂಡಿದ್ದರು. ಸುರೇಂದ್ರ ಏಪ್ರಿಲ್ 15 ರಂದು ತಮ್ಮ ಕುಟುಂಬದೊಂದಿಗೆ ಕರ್ತವ್ಯಕ್ಕೆ ಮರಳಿದ್ದರು.

ಅವರು ಗ್ರಾಮದಲ್ಲಿ ಹೊಸ ಮನೆ ಕಟ್ಟಿದ್ದರು. ಅದರ ಗೃಹಪ್ರವೇಶ ಸಮಾರಂಭ ಇತ್ತೀಚೆಗಷ್ಟೇ ನಡೆದಿತ್ತು. ಅವರು ಮಾರ್ಚ್ 29 ರಂದು ಗ್ರಾಮಕ್ಕೆ ಬಂದು ಪುನಃ ಏಪ್ರಿಲ್ 15 ರಂದು ಕರ್ತವ್ಯಕ್ಕೆ ಮರಳಿದ್ದರು. ಸುರೇಂದ್ರ ಸಿಂಗ್ ಅವರು ಹೆತ್ತವರಿಗೆ ಒಬ್ಬನೇ ಮಗ. ಅವರ ತಂದೆ ಶಿಶುಪಾಲ್ ಸಿಂಗ್ ಸಿಆರ್‌ಪಿಎಫ್ನಲ್ಲಿ ಸೇವೆ ಸಲ್ಲಿಸಿದ್ದಾರೆ.