ಉ.ಕ‌ ಸುದ್ದಿಜಾಲ ಶಿವಮೊಗ್ಗ :

ನ್ಯಾಯಾಲಯಕ್ಕೆ ಕ್ಯಾರೇ ಎನ್ನದೆ, ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳುತ್ತಿದ್ದ ಮೋಸ್ಟ್ ವಾಂಟೆಡ್ ರೌಡಿ ಶೀಟರ್ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಸಿನಿಮೀಯ ರೀತಿಯಲ್ಲಿ ನಡೆದ ಈ ಹೈ ವೋಲ್ಟೇಜ್ ಚೇಸಿಂಗ್‌ನಲ್ಲಿ ಖಾಕಿ ಪಡೆಯ ಧೈರ್ಯ ಮೆಚ್ಚಲೇಬೇಕು.

ಮಹಾಭಾರತದ ದುರ್ಯೋಧನ ವೈಶಂಪಾಯನ ಸರೋವರದಲ್ಲಿ ಅವಿತುಕೊಂಡಂತೆ, ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾಲುವೆಯ ಗಿಡ ಗಂಟಿಗಳ ನಡುವೆ ಅಡಗಿ ಕುಳಿತಿದ್ದ ಖತರ್ನಾಕ್ ಆರೋಪಿಯನ್ನು ನ್ಯೂ ಟೌನ್ ಪೊಲೀಸರು ನೀರಿಗೆ ಧುಮುಕಿ ಸೆರೆಹಿಡಿದಿದ್ದಾರೆ.

ದಿಲೀಪ ಅಲಿಯಾಸ್ ಕರಿಯ ಮಾರಣಾಂತಿಕ ಹಲ್ಲೆ ಸೇರಿದಂತೆ ಬರೋಬ್ಬರಿ 16 ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಭದ್ರಾವತಿಯ ಕುಖ್ಯಾತ ರೌಡಿಶೀಟರ್. ಕಳೆದ ವರ್ಷ ನಡೆದ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದಿದ್ದ ಈತ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಸತತವಾಗಿ ತಲೆ ಮರೆಸಿಕೊಂಡಿದ್ದ.

ಕೋರ್ಟ್ ಈತನ ವಿರುದ್ಧ ಬರೋಬ್ಬರಿ ಮೂರು ಬಾರಿ ಜಾಮೀನು ರಹಿತ ವಾರಂಟ್ ಜಾರಿ ಮಾಡಿದ್ದರೂ, ಪೊಲೀಸರ ಕಣ್ಣಿಗೆ ಮಣ್ಣೆರೆಚಿ ಓಡಾಡುತ್ತಿದ್ದ. ಇಂದು ಕೂಡ ಕೋರ್ಟ್‌ಗೆ ಹಾಜರಾಗಬೇಕಿದ್ದ ಖತರ್ನಾಕ್, ಪೊಲೀಸರು ಮನೆ ಬಳಿ ಬರುತ್ತಿದ್ದಂತೆಯೇ ಮನೆಯ ಹಂಚು ಕಿತ್ತು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದ.

ಹಲವು ಬಾರಿ ಖಾಕಿಗೆ ಕೈಕೊಟ್ಟು ಎಸ್ಕೇಪ್ ಆಗುತ್ತಿದ್ದ ಕರಿಯನನ್ನು ಈ ಬಾರಿ ಬಿಡಲೇಬಾರದು ಎಂದು ಪಣತೊಟ್ಟ ಭದ್ರಾವತಿ ನ್ಯೂ ಟೌನ್ ಪೊಲೀಸರು ಜಾಲ ಬೀಸಿದರು. ಖಚಿತ ಸುಳಿವಿನ ಮೇರೆಗೆ ಪಿಎಸ್‌ಐ ರಮೇಶ್ ನೇತೃತ್ವದ ತಂಡ ಆರೋಪಿಯ ಜಾಡು ಹಿಡಿದು ಹೊರಟಿತು. ಭಂಡಾರಹಳ್ಳಿ ಸಮೀಪದ ಕಾಲುವೆ ಬಳಿ ಆರೋಪಿ ಓಡಿ ಹೋಗಿರುವುದು ಖಚಿತವಾಯಿತು. ಆದರೆ ಸುತ್ತಮುತ್ತ ಹುಡುಕಿದರೂ ಆತ ಎಲ್ಲಿಯೂ ಕಾಣಿಸಲಿಲ್ಲ. ಅನುಮಾನಗೊಂಡ ಪಿಎಸ್‌ಐ ರಮೇಶ್ ಕಾಲುವೆಯತ್ತ ಸೂಕ್ಷ್ಮವಾಗಿ ಕಣ್ಣು ಹಾಯಿಸಿದಾಗ ಅಸಲಿ ಸತ್ಯ ಬಯಲಾಗಿತ್ತು.

ಮಹಾಭಾರತದಲ್ಲಿ ಗದಾಯುದ್ಧದ ವೇಳೆ ದುರ್ಯೋಧನ ವೈಶಂಪಾಯನ ಸರೋವರದಲ್ಲಿ ಅವಿತು ಕುಳಿತಿದ್ದ ಕಥೆ ಕೇಳಿದ್ದೇವೆ. ಇಲ್ಲಿ ಈ ಆಧುನಿಕ ದುರ್ಯೋಧನ ದಿಲೀಪ ಕೂಡ ಅದೇ ಹಾದಿ ಹಿಡಿದಿದ್ದ. ಕಾಲುವೆಯ ಕೆಸರು ನೀರಿನಲ್ಲಿ ಇಡೀ ದೇಹ ಮುಳುಗಿಸಿ, ಕೇವಲ ಮೂಗು-ಬಾಯಿಯನ್ನಷ್ಟೇ ನೀರಿನ ಮೇಲೆ ಬೆಳೆದಿದ್ದ ಗಿಡಗಂಟಿಗಳ ಮರೆಯಲ್ಲಿಟ್ಟು ಉಸಿರಾಡುತ್ತಾ ಅಡಗಿ ಕುಳಿತಿದ್ದ.

ಇದನ್ನು ತಕ್ಷಣವೇ ಗುರುತಿಸಿದ ಪಿಎಸ್‌ಐ ರಮೇಶ್, ಕ್ಷಣ ಮಾತ್ರವೂ ತಡಮಾಡದೆ ತಮ್ಮ ಸಮವಸ್ತ್ರ ಕಳಚಿಟ್ಟು ನೇರವಾಗಿ ಕೊಳಚೆ-ಕೆಸರು ತುಂಬಿದ ಕಾಲುವೆಗೆ ಧುಮುಕಿದರು. ಜೀವದ ಹಂಗು ತೊರೆದು ಆತನನ್ನು ಹಿಡಿದು ಎಳೆದು ತಂದರು. ಈ ವೇಳೆ ಪಿಎಸ್‌ಐ ರಮೇಶ್ ಅವರಿಗೆ ಸಾಥ್ ನೀಡಿದ ಪೊಲೀಸ್ ಸಿಬ್ಬಂದಿಗಳಾದ ಪ್ರಸನ್ನ, ಸದ್ದಾಂ ಹಾಗೂ ಗಂಗಾಧರ್ ಆರೋಪಿಯನ್ನು ಕಾಲುವೆಯಿಂದ ಮೇಲಕ್ಕೆತ್ತಿ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದರು.

ಹಲವು ದಿನಗಳಿಂದ ತಲೆಮರೆಸಿಕೊಂಡು ಕಣ್ಣಾಮುಚ್ಚಾಲೆ ಆಡುತ್ತಿದ್ದ 16 ಕೇಸ್‌ಗಳ ಹಳೇ ಗಿರಾಕಿ ಕೊನೆಗೂ ಕಂಬಿ ಎಣಿಸುವಂತಾಗಿದೆ. ಕೆಸರಿನ ಕಾಲುವೆಗೆ ನೆಗೆದು, ಖತರ್ನಾಕ್ ಆರೋಪಿಯನ್ನು ಬಂಧಿಸಿದ ಭದ್ರಾವತಿ ನ್ಯೂ ಟೌನ್ ಪಿಎಸ್‌ಐ ರಮೇಶ್, ಪ್ರಸನ್ನ, ಸಿಬ್ಬಂದಿ ಗಂಗಾಧರ್, ಹಾಲಪ್ಪ ಹಾಗೂ ಸದ್ದಾಂ ಅವರ ಕೆಚ್ಚೆದೆಯ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕಾನೂನಿನ ಕೈಗಳು ತುಂಬಾ ಉದ್ದ ಎಂಬ ಮಾತಿದೆ. ನೀರೊಳಗೆ ಅಡಗಿದರೂ, ಹಂಚು ಕಿತ್ತು ಓಡಿದರೂ ತಪ್ಪಿತಸ್ಥರು ಖಾಕಿ ಕಣ್ತಪ್ಪಿಸಿ ಬದುಕಲು ಸಾಧ್ಯವೇ ಇಲ್ಲ ಎಂಬುದನ್ನು ಭದ್ರಾವತಿ ಪೊಲೀಸರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.