ಉ.ಕ ಸುದ್ದಿಜಾಲ ಬೆಳಗಾವಿ :
ಇದೇ ತಿಂಗಳು ನಡೆಯುವ ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಹುಕ್ಕೇರಿ ತಾಲೂಕಿನಿಂದ ರಾಜೇಂದ್ರ ಪಾಟೀಲ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಘೋಷಿಸಿದರು.
ಬೆಳಗಾವಿ ನಗರದ ಖಾಸಗಿ ಹೊಟೇಲ್ ನಲ್ಲಿ ಆಯೋಜಿಸಿದ್ದ ಹುಕ್ಕೇರಿ ತಾಲೂಕಿನ 41 ಪಿಕೆಪಿಎಸ್ ಗಳ ಮತದಾರ( ಡೆಲಿಗೆಟ್)ರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜೇಂದ್ರ ಪಾಟೀಲ ಗೆಲುವಿಗೆ ಶ್ರಮಿಸುವಂತೆ ಅವರು ವಿನಂತಿಸಿಕೊಂಡರು.
ಬೆಳಗಾವಿ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ನಮ್ಮ ಪೆನೆಲ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ. ಜಿಲ್ಲೆಯ ಬಹುತೇಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ನಮ್ಮ ಬೆಂಬಲಿಕ್ಕೆ ನಿಂತಿವೆ. ಇದರಿಂದ ಈ ಚುನಾವಣೆಯಲ್ಲಿ ನಾವು 12 ಸ್ಥಾನಗಳನ್ನು ಗೆಲ್ಲುತ್ತೇವೆ. ಈ ಮೂಲಕ ಬ್ಯಾಂಕಿನ ಅಧಿಕಾರ ಚುಕ್ಕಾಣಿ ಹಿಡಿಯುವುದು ಶತಸಿದ್ದ ಎಂದು ಅವರು ಭವಿಷ್ಯ ನುಡಿದರು.
ಹುಕ್ಕೇರಿ ಮತ್ತು ಯಮಕನಮರಡಿ ಕ್ಷೇತ್ರಗಳಲ್ಲಿ ರೈತರ ಕೋರಿಕೆಯಂತೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸಹಕಾರಿ ಸಂಘಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದೇವೆ. ಹೊಸ ಸಂಘಗಳಿಂದ ರೈತರು ಆರ್ಥಿಕಾಭಿವೃದ್ಧಿ ಹೊದಲು ಸಹಕಾರಿಯಾಗುತ್ತದೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲದ ಪ್ರಯೋಜನಗಳು ದೊರಕಲಿವೆ ಎಂದು ಹೇಳಿದರು.
ಕಳೆದ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯಲ್ಲಿ ನಡೆದಿರುವ ಘಟನೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಯಾರೂ ಧೈರ್ಯವನ್ನು ಕಳೆದುಕೊಳ್ಳಬೇಡಿ. ಕೇವಲ ಒಂದು ಸೋಲಿನಿಂದ ಜಗತ್ತು ಮುಳುಗುವುದಿಲ್ಲ.
ರೈತರ ಆಶೀರ್ವಾದದಿಂದ ಇದೇ ದಿನಾಂಕ 19 ರಂದು ನಡೆಯುವ ಬೆಳಗಾವಿ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು. ಯಾರು? ಏನು ? ಬೇಕಾದರೂ ಮಾತಾಡಿಕೊಳ್ಳಲಿ. ಇದರಲ್ಲಿ ನಾವೇ ಗೆಲ್ಲೋದು. ಆಡಳಿತವನ್ನು ನಾವೇ ಹಿಡಿಯುತ್ತೇವೆ ಎಂದು ಬಾಲಚಂದ್ರ ಜಾರಕಿಹೊಳಿಯವರು ಮತದಾರರಿಗೆ ಅಭಯ ನೀಡಿದರು.
ಈ ಸಂದರ್ಭದಲ್ಲಿ ಯುವ ಮುಖಂಡ ರಾಹುಲ್ ಜಾರಕಿಹೊಳಿ, ಹುಕ್ಕೇರಿ ತಾಲೂಕಿನ ಮುಖಂಡರಾದ ಅಪ್ಪಾಸಾಹೇಬ ಶಿರಕೋಳಿ, ರಾಜೇಂದ್ರ ಪಾಟೀಲ, ಪ್ರಭುಗೌಡ ಪಾಟೀಲ, ಶಶಿರಾಜ ಪಾಟೀಲ, ಶಂಕರ ಹೆಗಡೆ, ಭಂಡು ಹಥನೂರೆ, ಬಸವರಾಜ ಮಟಗಾರ, ರಿಷಬ್ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹುಕ್ಕೇರಿ ತಾಲೂಕಿನ 41 ಪಿಕೆಪಿಎಸ್ ಮತದಾರರ ಸಭೆ ಹುಕ್ಕೇರಿಗೆ ರಾಜೇಂದ್ರ ಪಾಟೀಲ ಅಭ್ಯರ್ಥಿ- ಶಾಸಕ ಬಾಲಚಂದ್ರ ಜಾರಕಿಹೊಳಿ ಘೋಷಣೆ
