ಉ.ಕ ಸುದ್ದಿಜಾಲ ಬೆಳಗಾವಿ :

ಚಿಕನ್ ತಿನ್ನುವ ವಿಚಾರಕ್ಕೆ ಶುರುವಾದ ಸಣ್ಣ ಗಲಾಟೆ ಸ್ನೇಹಿತನ ಕೊಲೆಯಲ್ಲಿ ಅಂತ್ಯವಾಗಿದೆ. ಪಾರ್ಟಿ ವೇಳೆ ಹೆಚ್ಚು ಚಿಕನ್ ಪೀಸ್ ಬೇಕು ಎಂಬ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ಗಲಾಟೆ ನಡೆದಿದ್ದು, ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದು ಸ್ನೇಹಿತನನ್ನೇ ಹತ್ಯೆ ಮಾಡಲಾಗಿದೆ.

ಅಷ್ಟೇ ಅಲ್ಲ, ಕೊಲೆ ಮಾಡಿದ ಬಳಿಕ ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಆರೋಪಿ ಯತ್ನಿಸಿದ್ದಾನೆ ಎನ್ನಲಾಗಿದೆ. ಅಷ್ಟಕ್ಕೂ ಚಿಕನ್ ಪಾರ್ಟಿಯಲ್ಲಿ ನಡೆದಿದ್ದೇನು? ಸ್ನೇಹಿತನನ್ನೇ ಕೊಲೆ ಮಾಡುವ ಹಂತಕ್ಕೆ ಗಲಾಟೆ ಹೇಗೆ ಗೊತ್ತಾ!

ಚಿಕನ್ ತಿನ್ನುವ ವಿಚಾರಕ್ಕೆ ಸ್ನೇಹಿತರ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹುಣಸ್ಯಾಳ ಪಿಜಿ ಗ್ರಾಮದಲ್ಲಿ ನಡೆದಿದೆ. ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಕಬೀರಗಂಜ್ ಗ್ರಾಮದ ಸೀತಾರಾಮ್ ಸತಿರಾಮ್ ಮೃತ ವ್ಯಕ್ತಿ. ಹುಣಶ್ಯಾಳ ಪಿಜಿ ಗ್ರಾಮದ ಪ್ರಿಯಾ ಸ್ಟೀಲ್ ಕಂಪನಿಯಲ್ಲಿ ಸೀತಾರಾಮ್ ಹಾಗೂ ಆರೋಪಿ ಅರುಣ್ ಕುಮಾರ್ ಚೌಹಾನ್ ಇಬ್ಬರೂ ಕೆಲಸ ಮಾಡುತ್ತಿದ್ದರು.

ವಿಕ್ ಎಂಡ್ ನಲ್ಲಿ ಸ್ನೇಹಿತರೆಲ್ಲರೂ ಸೇರಿ ಪಾರ್ಟಿ ಮಾಡುತ್ತಿದ್ದ ವೇಳೆ ಹೆಚ್ಚು ಚಿಕನ್ ಪೀಸ್ ಬೇಕು ಎಂಬ ವಿಚಾರಕ್ಕೆ ಸೀತಾರಾಮ್ ಹಾಗೂ ಅರುಣ್ ಕುಮಾರ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ಕೇವಲ ಮಾತಿನ ಚಮಮಕಿಗೆ ನಿಂತಿಲ್ಲ. ಮುಂದೆ ಇಬ್ಬರು ಹೊಡೆದಾಡುಕೊಂಡಿದ್ದಾರೆ.

ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿದ್ದು, ಅರುಣ್ ಕುಮಾರ್ ಚಾಕುವಿನಿಂದ ಸೀತಾರಾಮ್ ಅವರ ಎದೆಗೆ ಇರಿದಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಸೀತಾರಾಮ್ ಅವರನ್ನು ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೀತಾರಾಮ್ ಮೃತಪಟ್ಟಿದ್ದಾರೆ. ಇತ್ತ ಕೃತ್ಯ ಎಸಗಿದ ಬಳಿಕ ಪ್ರಕರಣವನ್ನು ಮುಚ್ಚಿಹಾಕಲು ಆರೋಪಿ ಪ್ರಯತ್ನಿಸಿದ್ದ ಎನ್ನಲಾಗಿದೆ.

ಸೀತಾರಾಮ್ ಕಟ್ಟಡದ ಮೇಲಿಂದ ಬಿದ್ದು ಗಾಯಗೊಂಡಿದ್ದಾನೆ ಎಂದು ಬಿಂಬಿಸಲು ಅರುಣ್ ಕುಮಾರ್ ಯತ್ನಿಸಿದ್ದ ಎನ್ನಲಾಗಿದೆ. ಆದರೆ ಮರಣೋತ್ತರ ಪರೀಕ್ಷೆ ವೇಳೆ ಸತ್ಯಾಂಶ ಬೆಳಕಿಗೆ ಬಂದಿದೆ‌. ಅಷ್ಟೇ ಅಲ್ಲದೇ ಪೊಲೀಸ್ ತನಿಖೆ ವೇಳೆಯಲ್ಲಿ ಆರೋಪಿ ಸತ್ಯಾಂಶ ಹೊರ ಹಾಕಿದ್ದಾನೆ.

ಘಟನೆಯ ಬಗ್ಗೆ ಅನುಮಾನಗೊಂಡ ಘಟಪ್ರಭಾ ಠಾಣೆ ಪೊಲೀಸರು ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿ ಅರುಣ್ ಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಚಿಕನ್ ತಿನ್ನುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಸೀತಾರಾಮ್‌ಗೆ ಚಾಕುವಿನಿಂದ ಇರಿದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಘಟನೆ ಕುರಿತು ಘಟಪ್ರಭಾ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.