ಉ.ಕ ಸುದ್ದಿಜಾಲ ಅಥಣಿ :

ಹೊರಗಿನಿಂದ ಅಥಣಿಗೆ ಬರುವ ಕೆಲ ರಾಜಕಾರಣಿಗಳು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನನಗೂ ಅವರದೇ ಭಾಷೆಯಲ್ಲಿ ತಿರುಗೇಟು ನೀಡಲು ಬರುತ್ತದೆ, ಆದರೆ ವೇದಿಕೆಯ ಮೇಲಿರುವ ಪೂಜ್ಯರು ಹಾಗೂ ನನ್ನ ತಂದೆ, ತಾಯಿ, ಹಿರಿಯರು ಹಾಕಿಕೊಟ್ಟ ಸಂಸ್ಕಾರ ನನ್ನ ನಾಲಿಗೆಯನ್ನು ಕಟ್ಟಿಹಾಕಿದೆ” ಎಂದು ಯುವ ನಾಯಕ ಚಿದಾನಂದ ಸವದಿ ಅವರು ಮಾಜಿ ಸಚಿವರೊಬ್ಬರ ವಿರುದ್ಧ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಶ್ರೀ ಅಕ್ಕಮಹಾದೇವಿ ಜಾತ್ರಾ ಮಹೋತ್ಸವದ ವೇದಿಕೆಯಲ್ಲಿ ನೆರೆದಿದ್ದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಅವರು ಮಾತನಾಡಿದರು.


ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಹಾಗೂ ಮಾಜಿ ಸಚಿವ ಗೋಕಾಕ‌ ಶಾಸಕ ರಮೇಶ ಜಾರಕಿಹೋಳಿ ಹೇಳಿಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, “ಕೆಲವು ರಾಜಕಾರಣಿಗಳು ಅಥಣಿಗೆ ಬಂದು ಮನಸ್ಸಿಗೆ ನೋವುಂಟು ಮಾಡುವಂತಹ ಭಾಷೆಯನ್ನು ಬಳಸಿ ಮಾತನಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ. ನಾನು ಕೂಡ ಒಬ್ಬ ಪದವೀಧರನಾಗಿದ್ದು, ನನ್ನ ಬಳಿಯೂ ಸಾಕಷ್ಟು ಶಬ್ದ ಸಂಗ್ರಹವಿದೆ. ನನ್ನ ಕೈಯಲ್ಲೂ ಮೈಕ್ ಇದೆ ಮತ್ತು ಇಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನರೂ ಸೇರಿದ್ದೀರಿ” ಎಂದು ಹೇಳಿದರು.

“ಅವರು ಬಳಸುವ ಅದೇ ಭಾಷೆಯಲ್ಲಿ ನನಗೂ ಮಾತನಾಡಲು ಸಾಧ್ಯವಿದೆ. ಆದರೆ, ಈ ಪವಿತ್ರ ವೇದಿಕೆಯ ಮೇಲೆ ಕುಳಿತಿರುವ ಪೂಜ್ಯ ಸ್ವಾಮೀಜಿಗಳು ನಮಗೆ ಕಲಿಸಿಕೊಟ್ಟಿರುವ ಸಂಸ್ಕಾರ ಮತ್ತು ಮೌಲ್ಯಗಳು ನನ್ನನ್ನು ತಡೆಯುತ್ತಿವೆ. ಆ ಕಾರಣಕ್ಕಾಗಿ ನಾನು ಸಂಯಮ ಕಾಯ್ದುಕೊಂಡಿದ್ದೇನೆ” ಎಂದು ಚಿದಾನಂದ ಸವದಿ ಅವರು ಮಾರ್ಮಿಕವಾಗಿ ತಿರುಗೇಟು ನೀಡಿದರು.