ಉ.ಕ ಸುದ್ದಿಜಾಲ ಅಥಣಿ :
ಫೈನಾನ್ಸ್ ಕಂಪನಿಯಲ್ಲಿ ಠೇವಣಿ ಇಟ್ಟಿದ್ದ ಹಣವನ್ನು ಮರಳಿ ನೀಡುವಂತೆ ನಿರಂತರ ಕಿರುಕುಳ ನೀಡುತ್ತಿದ್ದ ಆರೋಪದ ಹಿನ್ನೆಲೆ ಅಥಣಿ ತಾಲೂಕಿನ ಅವರಖೋಡ ಗ್ರಾಮದ ನಿವಾಸಿ ಸಹದೇವ ಬಾಬು ನಿಕ್ಕಂ (45) ಡೆತ್‌ನೋಟ್ ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಸೋಮವಾರ ರಾತ್ರಿ ನಡೆದಿದೆ.
ಮಾಹಿತಿ ಪ್ರಕಾರ, ಸಹದೇವ ನಿಕ್ಕಂ ಅವರು ಸುಮಾರು 10 ವರ್ಷಗಳ ಹಿಂದೆ ಮೈಸೂರು ಫೈನಾನ್ಸ್ ಏಜೆನ್ಸಿ ಕಂಪನಿಯಲ್ಲಿ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಮಹಾವೀರ ಬಳೋಜ ಅವರು 10 ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದರು ಎನ್ನಲಾಗಿದೆ. ಫೈನಾನ್ಸ್ ಸಂಸ್ಥೆ ಬಂದ್ ಆದ ಬಳಿಕವೂ ಠೇವಣಿ ಮರುಪಾವತಿಗಾಗಿ ಸಹದೇವ ಅವರ ಮೇಲೆ ನಿರಂತರ ಒತ್ತಡ ಹಾಗೂ ಕಿರುಕುಳ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ.
“ಫೈನಾನ್ಸ್ ಬಂದ್ ಆಗಿದ್ದರೂ ನನ್ನಿಂದಲೇ ಹಣ ವಾಪಸ್ ಕೊಡಿಸುವಂತೆ ದಿನವೂ ಒತ್ತಡ ಹಾಕುತ್ತಿದ್ದಾರೆ. ಮಹಾವೀರ ಬಳೋಜ ಸೇರಿದಂತೆ ಸನ್ಮತಿ ಬಳೋಜ, ತಂಗೆವ್ವ ಬಳೋಜ ಹಾಗೂ ಆನಂದ ಅಕ್ಕೋಳ ನೀಡುತ್ತಿರುವ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಸಹದೇವ ಅವರು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಮೃತರ ಪತ್ನಿ ದೌಪದಿ ನಿಕ್ಕಂ ಅವರು ಅಥಣಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ ಹಾಗೂ ತನಿಖಾ ಸಹಾಯಕರು ಭೀಮಸೇನ ಮನ್ನಾಪುರ, ಶ್ರೀನಾಥ ಅವಟಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.
ಡೆತ್‌ನೋಟ್ ಬರೆದು ಏಜೆಂಟ್ ಆತ್ಮಹತ್ಯೆ;ಠೇವಣಿ ಹಣ ಮರುಪಾವತಿ ಒತ್ತಡಕ್ಕೆ ಮನನೊಂದು ಜೀವತ್ಯಾಗ
