ಅಥಣಿ :


ಒಂದು ಕಾಲದ ಸಾಮಾಜಿಕ ಪಿಡುಗಾಗಿದ್ದ ದೇವದಾಸಿ ಪದ್ಧತಿಯಿಂದಾಗಿ ಗೌರವದ ಬದುಕಿನಿಂದಲೇ ದೂರಾಗುತ್ತಿದ್ದ ಮಕ್ಕಳಿಗಾಗಿ ವಸತಿ ಶಾಲೆ ಆರಂಭಿಸಿ, ಅವರನ್ನು ಮುಖ್ಯವಾಹಿನಿಗೆ ತರಲು 40 ವರ್ಷಗಳಿಂದ ಶ್ರಮಿಸುತ್ತಿರುವ ಅಥಣಿ ತಾಲೂಕಿನ ಬಿ.ಎಲ್. ಪಾಟೀಲ್ ಅವರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.

ಸಮಾಜ ಸೇವೆ ವಿಭಾಗದಲ್ಲಿ ಬಿ ಎಲ್ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಿ ಎಲ್ ಪಾಟೀಲ್ ಅವರ ಪೂರ್ಣ ಹೆಸರು ಬಸವಪ್ರಭು ಲಖಗೌಡ ಪಾಟೀಲ್ ಡಿಸೆಂಬರ್ 22, 1946ರಂದು ಜನಿಸಿದ ಬಿ.ಎಲ್. ಪಾಟೀಲ್ ಅವರು ವೃತ್ತಿಯಲ್ಲಿ ಕ್ರಿಮಿನಲ್ ಲಾಯರ್ ಆಗಿದ್ದಾರೆ.

Adv B L patil

ರಾಜ್ಯದಲ್ಲಿಯೇ ಮೊದಲ ಬಾರಿಗೆ ದೇವದಾಸಿ ಮಕ್ಕಳಿಗಾಗಿ ವಸತಿ ಶಾಲೆ ಆರಂಭಿಸಿದರು. ಈ ಶಾಲೆ ಅಥಣಿಯ ಮಲಾಬಾದ್ ಗ್ರಾಮದಲ್ಲಿದೆ. ಅದರಲ್ಲಿ ದೇವದಾಸಿಯರ ಮಕ್ಕಳ ಜತೆಗೆ ದಿಲಿತರು, ಬಡವರು, ಅಲೆಮಾರಿಗಳ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಈ ಶಾಲೆಯಲ್ಲಿ ಯಾರೂ ಮಕ್ಕಳ ಹಿನ್ನಲೆಯನ್ನು ಕೇಳುವಂತಿಲ್ಲ. ಶಾಲೆಯಲ್ಲಿ 1-12ನೇ ತರಗತಿ ವರೆಗೆ ಶಿಕ್ಷಣ ನೀಡಲಾಗುತ್ತಿದೆ. ಹೀಗೆ 41 ವರ್ಷಗಳು ದೇವದಾಸಿಯರು, ದಲಿತರು, ಬಡವರ ಮಕ್ಕಳಿಗಾಗಿ ಕೆಲಸ ಮಾಡಿದ್ದಾರೆ. ಸುಮಾರು 1500 ಮಕ್ಕಳು ಶಿಕ್ಷಣ ಪಡೆದು ರಾಜ್ಯದ ಅನೇಕ ಇಲಾಖೆಗಳಲ್ಲಿ ವಿವಿಧ ಹುದ್ದೆಯಲ್ಲಿದ್ದಾರೆ.
ಉಪವಿಭಾಗಾಧಿಕಾರಿ, ಪೊಲೀಸ್ ಇನ್‌ಸ್ಪೆಕ್ಟರ್, ಕಾನ್‌ಸ್ಟೆಬಲ್, ಕ್ಲರ್ಕ್, ಉಪವಿಭಾಗಾಧಿಕಾರಿ ಹೀಗೆ ಅನೇಕ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರೇ ಈಗ ದೇವದಾಸಿ ಪದ್ಧತಿಯ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ.

ಬಿ ಎಲ್ ಪಾಟೀಲ್ ಅವರು ಸಮಾಜಶಾಸ್ತ್ರ ಉಪನ್ಯಾಸಕರೊಬ್ಬರಿಂದ ಪ್ರಭಾವಿತರಾಗಿ ಸಮಾಜ ಸೇವೆ ಆರಂಭಿಸುತ್ತಾರೆ. ದೇವದಾಸಿಯರ ಮಕ್ಕಳ ಶಿಕ್ಷಣಕ್ಕಾಗಿ 1980 ರಲ್ಲಿ ಅಥಣಿಯಲ್ಲಿ ವಿಮೋಚನ ದೇವದಾಸಿ ಪುನರ್ವಸತಿ ಸಂಘ ಸ್ಥಾಪಿಸಿದರು. ಬಳಿಕ ಮಕ್ಕಳಿಗೆ ತಾವು ದೇವದಾಸಿಯರ ಮಕ್ಕಳು ಎನ್ನುವ ಅಳಕು ಕಾಡಬಾರದು ಎಂದು ಸಂಘದ ಹೆಸರನ್ನು ವಿಮೋಚನಾ ಸಂಘ ಎಂದು ಬದಲಾಯಿಸಿದರು. ವಿಮೋಚನಾ ಸಂಘ ಈ ಮಕ್ಕಳಿಗೆ ಸ್ಪೂರ್ತಿ ತುಂಬಿತು. ಅವರು ಅದನ್ನು ವಿಸ್ತರಿಸಿದರು ಎಂದು ಬಿ ಎಲ್ ಪಾಟೀಲ್ ತಮ್ಮ ಸಾಧನೆಯ ಗೌರವವನ್ನು ತಮ್ಮ ಸಂಘದ ಮಕ್ಕಳು, ಶಾಲೆಯ ಶಿಕ್ಷಕರಿಗೆ ಸಲ್ಲಿಸುತ್ತಾರೆ. ಬಿ.ಎಲ್. ಪಾಟೀಲ್ ಅವರಿಗೆ ರಾಜ್ಯ ಸರಕಾರ ಇತ್ತೀಚೆಗಷ್ಟೇ ದಿ.ದೇವರಾಜ ಅರಸು ಪ್ರಶಸ್ತಿ ಕೊಟ್ಟು ಗೌರವಿಸಿದೆ.