ಉ.ಕ ಸುದ್ದಿಜಾಲ ಬೆಳಗಾವಿ :

ಪಿಒಪಿ ಗಣೇಶ ಮೂರ್ತಿಗಳನ್ನು ಕಟ್ಟುನಿಟ್ಟಾಗಿ ಬ್ಯಾನ್ ಮಾಡುತ್ತೇವೆ. ಅದೇ ರೀತಿ ನಮ್ಮ ಜಿಲ್ಲೆಯ ಮೂಲಕ ಬೇರೆ ರಾಜ್ಯಗಳಿಗೆ ಸಾಗಿಸುವುದನ್ನು ನಿಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸ್ಪಷ್ಟಪಡಿಸಿದರು.

ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಜೊತೆಗೆ ಬೆಳಗಾವಿಯಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಎರಡು ತಿಂಗಳ ಹಿಂದೆ ಪಿಒಪಿ ಮೂರ್ತಿಗಳ ವಿಚಾರಕ್ಕೆ ಸಭೆ ಮಾಡಿದ್ದೇವೆ. ನಮ್ಮ ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ಪಿಒಪಿ ಮೂರ್ತಿಗಳನ್ನು ಸಾಗಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.

ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಪೊಲೀಸ್ ಆಯುಕ್ತರ ಜೊತೆಗೆ ಮಾತನಾಡಿದ್ದೇನೆ. ಈ ಮೊದಲು ಪಿಒಪಿ ಗಣೇಶ ಮೂರ್ತಿಗಳು ಬಹಳಷ್ಟಿದ್ದವು. ಹಂತ ಹಂತವಾಗಿ ಕಡಿಮೆ ಆಗುತ್ತಿವೆ. ಮುಂದಿನ‌ ದಿನಗಳಲ್ಲಿ ಸಂಪೂರ್ಣವಾಗಿ ಬಂದ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಈ ಬಾರಿಯ ಗಣೇಶ ಚತುರ್ಥಿ ಮತ್ತು ಮೆರವಣಿಗೆ ಅದ್ಧೂರಿ ಆಚರಿಸುವ ನಿಟ್ಟಿನಲ್ಲಿ ಪೂರ್ವಭಾವಿ ಸಭೆ ಮಾಡಿದ್ದೇವೆ. ಹಿಂದಿನ ವರ್ಷ ಆಗಿದ್ದ ಕೆಲ ನ್ಯೂನತೆಗಳನ್ನು ಈ ಬಾರಿ ಸರಿಪಡಿಸುತ್ತೇವೆ. ಬೆಳಗಾವಿ ನಗರದಲ್ಲಿ ಸುಮಾರು 1 ಸಾವಿರ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗುತ್ತದೆ. ಅದಕ್ಕೆ ಇಲ್ಲಿನ ಕಪಿಲೇಶ್ವರ ಮತ್ತು ಜಕ್ಕೇರಿ ಹೊಂಡಗಳಲ್ಲಿ ಪ್ರತಿವರ್ಷದಂತೆ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.

ಈ ಬಾರಿ ಮಹಾಪ್ರಸಾದ ವ್ಯವಸ್ಥೆ : 
ಇನ್ನು ಮೆರವಣಿಗೆ ಮಾರ್ಗದಲ್ಲಿ ಯಾವುದೇ ರೀತಿ ಸಮಸ್ಯೆ ಆಗದಂತೆ ಕ್ರಮ ವಹಿಸುವಂತೆ ಪಾಲಿಕೆ, ಪೊಲೀಸ್, ಅಗ್ನಿಶಾಮಕ, ಹೆಸ್ಕಾಂ, ಅರಣ್ಯ ಇಲಾಖೆಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ. ಅದೇರೀತಿ ಬೆಳಗಾವಿ ಗಣೇಶೋತ್ಸವ ಸಂಭ್ರಮದಲ್ಲಿ ಹೊರ ರಾಜ್ಯ, ಜಿಲ್ಲೆಗಳಿಂದ ಪಾಲ್ಗೊಳ್ಳುವ ಲಕ್ಷಾಂತರ ಭಕ್ತರಿಗೆ ಪಾಲಿಕೆಯಿಂದ ಈ ಬಾರಿ ಮಹಾಪ್ರಸಾದ ಆಯೋಜಿಸಲಾಗುತ್ತಿದೆ. ರಾತ್ರಿ ವೇಳೆ ಊಟ, ನೀರಿನ ಸಮಸ್ಯೆ ಆಗಬಾರದು ಎಂಬ ಉದ್ದೇಶದಿಂದ ಈ ರೀತಿ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಮೊಹಮ್ಮದ್ ರೋಷನ್ ತಿಳಿಸಿದರು.

ಮರಾಠಿ ಬ್ಯಾನರ್ ವಿಚಾರಕ್ಕೆ ಡಿಸಿ ಹೇಳಿದ್ದೇನು? : 
ಗಣೇಶ ಮಂಡಳಿಗಳ ಬ್ಯಾನರ್ ಮರಾಠಿಮಯ ಕುರಿತ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿ, ಕನ್ನಡ ಸಂಘಟನೆಗಳ ಪದಾಧಿಕಾರಿಗಳು ನನ್ನ ಗಮನಕ್ಕೆ ತಂದಿದ್ದಾರೆ. ಬೇರೆ ಭಾಷೆ ಬಗ್ಗೆ ನಮಗೆ ದ್ವೇಷ ಇಲ್ಲ. ಆದರೆ, ಕನ್ನಡ ಭಾಷೆ ಬಳಸುವಂತೆ ಅವರು ತಿಳಿಸಿದ್ದಾರೆ. ಇದಕ್ಕೆ ನಮ್ಮ ಜಿಲ್ಲಾಡಳಿತದ ಸಹಮತ ಇದೆ. ಎರಡೂ ಭಾಷಿಕರ ಜೊತೆಗೆ ಸೌಹಾರ್ದಯುತವಾಗಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲಾಗುವುದು. ಕನ್ನಡ ಭಾಷೆ ಮತ್ತು ಕರ್ನಾಟಕ ರಾಜ್ಯದ ಘನತೆಗೆ ಧಕ್ಕೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಸ್ಪಷ್ಪಪಡಿಸಿದರು.

ಸಾರಾಯಿ ಕುಡಿದು ಬಂದರೆ ಹುಷಾರ್ : 
ಮೆರವಣಿಗೆಯಲ್ಲಿ ಯಾರಾದರೂ ಸಾರಾಯಿ ಕುಡಿದು ಬಂದರೆ ಅಂತವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಅವರನ್ನು ಪತ್ತೆ ಹಚ್ಚಲು ಆಲ್ಕೋಹಾಲ್ ಪತ್ತೆ ಹಚ್ಚುವ ಯಂತ್ರ, ನಾರ್ಕೋಟಿಕ್ಸ್ ಕಿಟ್ ಮೂಲಕ ಅನುಮಾನ ಬಂದವರ ಮೇಲೆ ಪ್ರಯೋಗಿಸುತ್ತೇವೆ. ಇನ್ನು ಚುಚ್ಚು ನಿಯಂತ್ರಣ ತಂಡದ ಮ‌ೂಲಕ ನಿಷೇಧಿತ ವಸ್ತುಗಳನ್ನು ಪತ್ತೆ ಹಚ್ಚಲಿದ್ದೇವೆ.

ಗಣೇಶನ ವಿಸರ್ಜನೆ ಸಂಧರ್ಭದಲ್ಲಿ ಮೂರ್ತಿ ಸಾಗಿಸುವ ಟ್ರಾಲಿ ಸೈಜ್ 18/8 ಅಡಿ ಇರಬೇಕು. ಗಣೇಶನ ವಿಸರ್ಜನೆ ದಿನ ಪಟಾಕಿ ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ಬೆಳಗಾವಿ ನಗರ ಪೊಲೀಸ್ ಆಯಕ್ತ ಭೂಷಣ ಬೊರಸೆ ತಿಳಿಸಿದರು.

ಡಿಜೆ ಸೌಂಡ್ ಹೆಚ್ಚಾದರೆ ಕ್ರಮ‌ ನಿಶ್ಚಿತ : 
ಡಿಜೆ ತುಂಬಾ ಅಪಾಯಕಾರಿ ಆಗಿದ್ದು, ಬೆಳಗಾವಿ ನಗರದದಲ್ಲಿ ಗಣೇಶ ಮೂರ್ತಿಗಳ ಮೆರವಣಿಗೆ ಮಾರ್ಗದಲ್ಲಿ 65 ಆಸ್ಪತ್ರೆಗಳು ಬರುತ್ತವೆ. ಸಾಕಷ್ಟು ರೋಗಿಗಳು, ಆಗತಾನೇ ಜನಿಸಿದ ಮಕ್ಕಳು ಇರುತ್ತವೆ. ಹಾಗಾಗಿ, ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ.

10 ದಿನ ರಾತ್ರಿ 10 ಗಂಟೆಯವರೆಗೆ ಮಾತ್ರ ಡಿಜೆ ಹಚ್ಚಲು ಅವಕಾಶ ಇರುತ್ತದೆ. ಆದರೆ, 11ನೇ ದಿನ ಮೆರವಣಿಗೆ ವೇಳೆ ಸೌಂಡ್ ವ್ಯಾಲ್ಯೂಮ್ ಕಂಟ್ರೋಲ್ ಮಾಡಲು ಸೂಚನೆ ನೀಡಿದ್ದೇವೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮದ ಪ್ರಕಾರ 85 ಡೆಸಿಬೆಲ್ ಗಿಂತ ಹೆಚ್ಚು ಸೌಂಡ್ ಇರಬಾರದು.

ಡಿಜೆ ಸೌಂಡ್ ಜೀವಕ್ಕೆ ಹಾನಿ ಆಗಬಾರದು : 
ಡಿಜೆ ಸೌಂಡ್ನಿಂದ ದೇಶಾದ್ಯಂತ 11 ಪ್ರಕರಣಗಳು ಬೆಳಕಿಗೆ ಬಂದಿವೆ. ಕೊಪ್ಪಳ ಮತ್ತು ಮಹಾರಾಷ್ಟ್ರದ ನಾಸಿಕ್ ಸೇರಿ ಇಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಧ್ಯಪ್ರದೇಶದಲ್ಲಿ ಡಿಜೆ ಸೌಂಡ್ನಿಂದ ಗೋಡೆ ಕುಸಿದು 8-15 ವಯಸ್ಸಿನ 9 ಮಕ್ಕಳು ಮೃತಪಟ್ಟಿದ್ದಾರೆ.

ನಮ್ಮಲ್ಲಿ ಈ ರೀತಿ ಜೀವಕ್ಕೆ ಹಾನಿ ಆಗಬಾರದು. ಡೆಸಿಬೆಲ್ ಮಾಪನ ಯಂತ್ರದಿಂದ ಸೌಂಡ್ ಪರೀಕ್ಷೆ ಮಾಡಲಾಗುತ್ತದೆ. 85ಕ್ಕಿಂತ ಅಧಿಕ ಡೆಸಿಬೆಲ್ ಸೌಂಡ್ ಕಂಡು ಬಂದರೆ ಆಯಾ ಗಣೇಶ ಮಂಡಳಿಗಳ ವಿರುದ್ಧ ಶಬ್ದ ಮಾಲಿನ್ಯ ಕಾನೂನಿನಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭೂಷಣ ಬೊರಸೆ ಎಂದು ಎಚ್ಚರಿಸಿದರು.

ಸೂಕ್ತ ಬಂದೋಬಸ್ತ್ : 
ಗಣಪತಿ ಹಬ್ಬದ ಸಂದರ್ಭದಲ್ಲಿ ಪೊಲೀಸರ ಜೊತೆ ಸ್ವಯಂಪ್ರೇರಿತರಾಗಿ ಕೆಲಸ ಮಾಡುವರಿಗೆ ವಾಹನದ ವ್ಯವಸ್ಥೆ‌ ಕಲ್ಪಿಸುತ್ತೇವೆ. ಗಣಪತಿ ಬರುವ ದಿನ ಸೂಕ್ತ ಬಂದೋಬಸ್ತ್ ಇರಲಿದೆ. ಬಂದೋಬಸ್ತ್ಗೆ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಲಾಗುವುದು. ಗಣಪತಿ ವಿಸರ್ಜನೆ ದಿನ ಬೇರೆ ಬೇರೆ ಕಡೆಯಿಂದ ಜನರು ಆಗಮಿಸುವ ಕಾರಣ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತೇವೆ. ಅಂದು ರಾತ್ರಿ ಹೊತ್ತು ಹೋಟೆಲ್ಗಳಿಗೆ ತೆರೆಯಲು ಹೆಚ್ಚಿನ ಸಮಯ ನೀಡಲಾಗುತ್ತದೆ ಎಂದರು.

ಪಾಲಿಕೆ ಆಯುಕ್ತರು ಹೇಳಿದ್ದೇನು? : 
ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ. ಮಾತನಾಡಿ, 27 ಲಕ್ಷ ವೆಚ್ಚದಲ್ಲಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ನಡೆಯುತ್ತಿದೆ. ರಾತ್ರಿ ಗುಂಡಿಗಳು ಮುಚ್ಚುತ್ತಿದ್ದೇವೆ. 50 ಪ್ರತಿಶತ ಗುಂಡಿಗಳನ್ನು ಮುಚ್ಚಿದ್ದು, ಒಂದು ವಾರದಲ್ಲಿ ಪೂರ್ತಿ ಆಗಲಿದೆ. ಕಪಿಲೇಶ್ವರ ಹೊಂಡದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಹೆಚ್ಚಿನ ಭಾರ ತಪ್ಪಿಸಲು ಜಕ್ಕೇರಿ ಹೊಂಡದಲ್ಲೂ ಹೆಚ್ಚು ಮೂರ್ತಿಗಳ ವಿಸರ್ಜಿಸಲು ಕ್ರಮ ವಹಿಸಲಾಗುವುದು.

ಈ ಸ್ಥಳದಲ್ಲಿ ಪಾಲಿಕೆಯಿಂದ ಡಿಜೆ ವ್ಯವಸ್ಥೆ ಮಾಡಲಿದ್ದು, ಗಣೇಶ ಸ್ತೋತ್ರ, ಮಂತ್ರಘೋಷಗಳು ಮೊಳಗಲಿವೆ. ಅದೇರೀತಿ ಪ್ರೇಕ್ಷಕರ ಗ್ಯಾಲರಿ, ಸಿಸಿಟಿವಿ, ಪೋಕಸ್ ಲೈಟ್ ವ್ಯವಸ್ಥೆ ಮಾಡುತ್ತೇವೆ‌. 19 ಮೊಬೈಲ್ ಟ್ಯಾಂಕರ್ಗಳ ವ್ಯವಸ್ಥೆ ಇರಲಿದ್ದು, 11 ದಿನಗಳ ಕಾಲವು ಸಾರ್ವಜನಿಕರು ಈ ಟ್ಯಾಂಕರ್ಳಲ್ಲಿ ಮೂರ್ತಿ ವಿಸರ್ಜನೆ ಮಾಡಬಹುದು ಎಂದರು.