ಉ.ಕ ಸುದ್ದಿಜಾಲ ಬೆಳಗಾವಿ :

ಕರ್ನಾಟಕ ರಾಜ್ಯೋತ್ಸವದ ದಿನ (ನವೆಂಬರ್‌ 1) ಕರಾಳ ದಿನ ಆಚರಿಸಲು ಅನುಮತಿ ಕೋರಿ  ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಬೆಳಗಾವಿ ನಗರ ‍ಪೊಲೀಸ್‌ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆ ಅನುಮತಿ ನೀಡಿವುದಿಲ್ಲ ಎಂದು ಜಿಲ್ಲಾಧಿಕಾರಿ ಈಗಾಗಲೇ ಕಟ್ಟಪ್ಪಣೆ ಮಾಡಿದ್ದಾರೆ. ಆದರೂ ಎಂಇಎಸ್‌ ನಾಯಕರು ತಮ್ಮ ಉದ್ದಟತನ ಮುಂದುವರಿಸಿದ್ದಾರೆ.

ರಾಜ್ಯೋತ್ಸವ ಆಚರಣೆ ಸಂಬಂಧ ಈಚೆಗೆ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ, ಕನ್ನಡಪರ ಸಂಘಟನೆಗಳ ಮುಖಂಡರ ಸಲಹೆಯಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ‘ಕರಾಳ ದಿನ’ಕ್ಕೆ ನಿಷೇಧ ಹೇರುವುದಾಗಿ ತಿಳಿಸಿದ್ದರು.

ಪ್ರತಿ ವರ್ಷ ಅನುಮತಿ ಇಲ್ಲದೆಯೂ ಕರಾಳ ದಿನ ಆಚರಣೆ ಮಾಡುವ ರೂಢಿಯನ್ನು ಎಂಇಎಸ್‌ ಮುಂದುವರಿಸಿಕೊಂಡು ಬಂದಿದೆ.

ಎಂಇಎಸ್ ಕಾರ್ಯಾಧ್ಯಕ್ಷ, ಮಾಜಿ ಶಾಸಕ ಮನೋಹರ ಕಿಣೇಕರ, ಪ್ರಧಾನ ಕಾರ್ಯದರ್ಶಿ ಮಾಲೋಜಿ ಅಷ್ಟೇಕರ ಹಾಗೂ ಖಜಾಂಚಿ ಪ್ರಕಾಶ ಮಾರ್ಗಲೆ ಸೋಮವಾರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.

1956ರಲ್ಲಿ ರಾಜ್ಯಗಳ ಪುನರ್‌ ವಿಂಗಡಣೆ ಆದ ಬಳಿಕ ರಾಜ್ಯದ ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಬೇಕೆಂದು ಒತ್ತಾಯಿಸಲು ಎಂಇಎಸ್ ಹುಟ್ಟಿಕೊಂಡಿತು.

ಕರ್ನಾಟಕ ರಾಜ್ಯ ಉದಯವಾದ ದಿನದಂತೇ ಕರಾಳ ದಿನ ಆಚರಿಸುತ್ತ ಬರಲಾಗಿದೆ. ದಶಕಗಳ ಹಿಂದೆ ಬೃಹತ್‌ ಪ್ರಮಾಣದ ರ್‍ಯಾಲಿ ನಡೆಯುತ್ತಿತ್ತು. ಆದರೆ, ಈಗ ಒಂದು ಜಾಗಕ್ಕೆ ಮಾತ್ರ ಸೀಮಿತಗೊಂಡು ಆಚರಿಸುತ್ತ ಬಂದಿದ್ದಾರೆ.