ಉ.ಕ ಸುದ್ದಿಜಾಲ ಚಿಕ್ಕೋಡಿ :

ಚಿಕ್ಕೋಡಿಯಲ್ಲಿ ಕಾರ್ಯನಿರ್ವಹಿಸಿದ್ದ ವಿದೇಶಾಂಗ ಸಚಿವ ಡಾ ಜೈಶಂಕರ ಅವರು ಹಲವಾರು ವರ್ಷಗಳ ನಂತರ ಮತ್ತೆ‌ ಚಿಕ್ಕೋಡಿಗೆ ಭೇಟಿ ನೀಡಲಿದ್ದಾರೆ.

ಚಿಕ್ಕೋಡಿ ಕೆಎಲ್ಇ ಸಂಸ್ಥೆಯ ಖಾಸಗಿ ಕಾರ್ಯಕ್ರಮದ ನಿಮಿತ್ತ ಕೇಂದ್ರ ಸರಕಾರದ ವಿದೇಶಾಂಗ ಸಚಿವರಾದ ಡಾ. ಎಸ್ ಜೈಶಂಕರ ಹಾಗೂ ಶ್ರೀ ಪ್ರಹ್ಲಾದ ಜೋಶಿ ಅವರು ಇಂದು ಬೆಳಿಗ್ಗೆ 10.30 ಕ್ಕೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಗೆ ಆಗಮಿಸುತ್ತಿದ್ದಾರೆ.‌

ಡಾ ಜೈಶಂಕರ ರವರು 1977-78 ರಲ್ಲಿ ಚಿಕ್ಕೋಡಿ ಉಪವಿಭಾಗದ ಪ್ರೊಬಷನರಿ ಉಪವಿಭಾಗಾಧಿಕಾರಿ ಯಾಗಿ ಸೇವೆ ಸಲ್ಲಿಸಿದ ನಿಮಿತ್ತ ಚಿಕ್ಕೋಡಿ ಪುರಸಭೆಯ ಅವರಣದಲ್ಲಿನ ಹಳೆಯ ಎಸಿ ಕಚೇರಿ ಕಟ್ಟಡಕ್ಕೂ ಭೇಟಿ ನೀಡಲಿದ್ದು ಅವರಿಗೆ ಪುರಸಭೆಯ ವತಿಯಿಂದ ಪುರಸಭೆಯ ಎಲ್ಲಾ ಸದಸ್ಯರುಗಳ ಸಮ್ಮುಖದಲ್ಲಿ ಪೌರ ಸನ್ಮಾನ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಕೆಎಲ್‌ಇ ಸಂಸ್ಥೆಯು ಮತ್ತೊಂದು ಮೈಲುಗಲ್ಲಿಗೆ ಸಾಕ್ಷಿಯಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ನೇತೃತ್ವದಲ್ಲಿ ಹಾಗೂ ಆಡಳಿತ ಮಂಡಳಿಯವರ ಇಚ್ಛಾಶಕ್ತಿಯಂತೆ ಆಂಗ್ಲ ಮಾಧ್ಯಮದ ಕೆಎಲ್‌ಇ ಶಾಲೆಗೆ ಇಂದು ಮುಂಜಾನೆ (ಬುಧವಾರ) 10.30 ಕ್ಕೆ ಉದ್ಘಾಟನೆಗೊಳ್ಳುತ್ತಿದೆ ಎಂದು ಚಿಕ್ಕೋಡಿ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಪ್ರಸಾದ ರಾಂಪೂರೆ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಉದ್ಘಾಟನೆಗೊಳ್ಳಲಿರುವ ಆಂಗ್ಲ ಮಾಧ್ಯಮ ಶಾಲೆ ಉದ್ಘಾಟನೆಗೆ ಕೇಂದ್ರ ವಿದೇಶಾಂಗ ಸಚಿವ ಪದ್ಮಶ್ರೀ ಡಾ.ಎಸ್‌.ಜೈಶಂಕರ ಅವರು ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಆಗಮಿಸಲಿದ್ದಾರೆ.

ಗೌರವ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರು ಮತ್ತು ಕರ್ನಾಟಕ ಸರ್ಕಾರದ ದೆಹಲಿ ಎರಡನೇ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಚಿಕ್ಕೋಡಿ-ಸದಲಗಾ ಮತಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ.

ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ, ಚಿಕ್ಕೋಡಿ ಪುರಸಭೆಯ ಮಾಜಿ ಅಧ್ಯಕ್ಷರಾದ ಪ್ರವೀಣ ಕಾಂಬಳೆ ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕೆಎಲ್‌ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಎಸ್. ಕೌಜಲಗಿ ವಹಿಸಲಿದ್ದಾರೆ.