ಉ.ಕ ಸುದ್ದಿಜಾಲ ಚಿಕ್ಕೋಡಿ :
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಕಾರ ಮಳೆ ಸುರಿಯುತ್ತಿದ್ದು, ಚಿಕ್ಕೋಡಿ ಉಪವಿಭಾಗದಲ್ಲಿ ಮಳೆ ಕ್ಷೀಣಿಸಿದರೂ ನದಿಗಳ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆಯಾಗಿದೆ.
ಇದರಿಂದ ವೇದಗಂಗಾ, ದೂಧಗಂಗಾ ಮತ್ತು ಕೃಷ್ಣಾ ನದಿ ನೀರಿನ ಮಟ್ಟದಲ್ಲಿ 5 ಅಡಿಯಷ್ಟು ನೀರು ಏರಿಕೆಯಾಗಿದೆ. ಹೀಗಾಗಿ ಸಂಚಾರಕ್ಕೆ ಮುಕ್ತವಾಗಿದ್ದ ಸೇತುವೆಗಳು ಮತ್ತೆ ಮುಳುಗಡೆಯಾಗಿವೆ.
ಮಹಾ ರಾಷ್ಟ್ರದಿಂದ ರಾಜಾಪುರ ಬ್ಯಾರೇಜ್ ಮಾರ್ಗವಾಗಿ ಕೃಷ್ಣಾ ನದಿಗೆ 92,000 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ ಚಿಕ್ಕೋಡಿ ಉಪವಿಭಾಗದಲ್ಲಿ ಮಳೆ ಕಡಿಮೆಯಾಗಿದ್ದರೂ ಸಹ ನದಿಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬರುತ್ತಿದೆ.
ವೇದಗಂಗಾ ನದಿಯ ಜತ್ರಾಟ- ಬಿವಶಿ, ಸಿದ್ನಾಳ-ಅಕ್ಕೋಳ ಮತ್ತು ದೂಧಗಂಗಾ ನದಿಯ ಬಾರವಾಡ- ಕುನ್ನೂರ, ಕಾರದಗಾ- ಭೋಜ, ಭೋಜ- ಶಿವಾಪುರವಾಡಿ, ಮಲಿಕವಾಡ- ದತ್ತವಾಡ ಹಾಗೂ ಕೃಷ್ಣಾ ನದಿಯ ಯಡೂರ- ಕಲ್ಲೋಳ, ಮಾಂಜರಿ- ಬಾವನಸೌಂದತ್ತಿ ಸೇರಿ 8 ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರು ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗಲು ಸುತ್ತುವರಿದು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.