ಉ.ಕ‌ ಸುದ್ದಿಜಾಲ ಹುಬ್ಬಳ್ಳಿ :

ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಕ್ರಾಸ್ ಬಳಿ ಇಂದು ಬೆಳಗಿನ ಜಾವ ಸರಿಸುಮಾರು 8:30 ನಿಮಿಷಕ್ಕೆ ಅದೊಂದು ಕುಟುಂಬ ಹೊರಟ್ಟಿದ್ದ ಕಾರು ಹಾಗೂ ಎದುರೂಗಡೆಯಿಂದ ಬರುತ್ತಿದ್ದ ಲಾರಿ ಮಧ್ಯ ಡಿಕ್ಕಿಯಾಗಿತ್ತು. ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಶ್ವೇತ(29),
ಅಂಜಲಿ(26), ಸಂದೀಪ್ (26) ವಿಠಲ್ (55), ಶಶಿಕಲಾ (40) ಮೃತ ದುರ್ದೈವಿಗಳು. ಇಂದು ಬೆಳಗ್ಗೆ ಸಾಗರದಿಂದ ಬಾಗಲಕೋಟೆಗೆ ತೆರಳುತ್ತಿದ್ದ ವೇಳೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂಗಳಹಳ್ಳಿ ಬಳಿ ಈ ಅಪಘಾತ ನಡೆದಿದೆ.

ಸದ್ಯ ಮೃತರ ಮೃತದೇಹಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಘಟನಾ ಸ್ಥಳಕ್ಕೆ ಧಾರವಾಡ ಎಸ್ಪಿ ಗೋಪಾಲಕೃಷ್ಣ ಬ್ಯಾಕೋಡ ಭೇಟಿ ನೀಡಿ ಪರಿಶೀಲನೆ ಸಹ ನಡೆಸಿದರು.

ಇನ್ನು ಮೃತರು ಸಾಗರ ಮೂಲದವರಾಗಿದ್ದು, ಬಾಗಲಕೋಟೆ ಜಿಲ್ಲೆಯ ಕುಳಗೇರಿ ಬಳಿ ರಾಘವೇಂದ್ರ ಎನ್ನುವ ಹೋಟೆಲ್ ವ್ಯಾಪಾರ ಮಾಡುತ್ತಿದ್ದರು. ನಿನ್ನೆ ಮೃತ ಶ್ವೇತ ನಿಶ್ಚಿತಾರ್ಥ ಇದ್ದ ಕಾರಣ ಸಾಗರಕ್ಕೆ ತೆರಳಿದ್ದರು.

ನಿಶ್ಚಿತಾರ್ಥ ಮುಗಿಸಿಕೊಂಡು ಇಂದು ಬೆಳಗಿನ ಜಾವ ನಾಲ್ಕು ಗಂಟೆಗೆ ಸಾರಗರ ಬಿಟ್ಟಿದ್ದರು. ಅಲ್ಲಿಂದ ಹುಬ್ಬಳ್ಳಿಯ ವರೂರ ಬಳಿ ಉಪಹಾರ ಮಾಡಿಕೊಂಡು ನೇರವಾಗಿ ಬಾಗಲಕೋಟೆಯತ್ತ ಪ್ರಯಾಣ ಬೆಳೆಸಿದ್ರು, ಅಲ್ಲಿಂದ ವೇಗವಾಗಿ ಬಂದ ಕಾರು ಸರಿಯಾಗಿ ಇಂಗಳಹಳ್ಳಿ ಕ್ರಾಸ್ ಬಳಿ ಲಾರಿಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಲ್ಲಿದ್ದ ಐವರು ಸ್ಥಳದಲ್ಲೆ ಮೃತ ಪಟ್ಟಿದ್ದಾರೆ.

ಇನ್ನು ಮೃತರಲ್ಲಿ ಅಂಜಲಿ ಎಂಬಾಕೆ ಗದಗ ಜಿಲ್ಲೆ ನರಗುಂದ ತಾಲೂಕಿನಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.

ಸದ್ಯ ಕಾರ್ ಮತ್ತು ಲಾರಿ ಸ್ಥಳಾಂತರ ಮಾಡಿರುವ ಪೊಲೀಸರು ವಾಹನ ಸಂಚಾರಕ್ಕೆ ‌ಅನುವು ಮಾಡಿ ಕೊಟ್ಟಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ಸಹ ದಾಖಲಿಸಿದ್ದಾರೆ. ಲಾರಿ ಚಾಲಕ ಮತ್ತು ಸಹಾಯಕನನ್ನ ವಶಕ್ಕೆ ಪಡೆದು ಮಾಹಿತಿ ಪಡೆಯಲಾಗುತ್ತಿದೆ. ಇತ್ತ ಘಟನೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಹ ಸಾಮಾಜಿಕ ಜಾಲತಾಣದ ಮೂಲಕ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.