ಉ.ಕ ಸುದ್ದಿಜಾಲ ಮುಂಬೈ :
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಬಿಜೆಪಿಯ ಪ್ರಣಾಳಿಕೆ ‘ಸಂಕಲ್ಪ ಪತ್ರ’ವನ್ನು ಇಂದು ಬಿಡುಗಡೆ ಮಾಡಿದ್ದಾರೆ.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ರಾಜ್ಯ ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬವಾನ್ಕುಲೆ, ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೆಲಾರ್ ಮತ್ತು ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಪಕ್ಷದ ಇತರ ನಾಯಕರು ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಬಿಜೆಪಿಯು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಅಜಿತ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಯೊಂದಿಗೆ ಮಹಾಯುತಿ ಹೆಸರಿನಲ್ಲಿ ಮೈತ್ರಿ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, 25 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವುದಾಗಿ, ಮಹಾರಾಷ್ಟ್ರದ ಸಂಪೂರ್ಣ ಅಭಿವೃದ್ಧಿಗೆ ಶ್ರಮಿಸುವುದಾಗಿ, ರೈತರಿಗೆ ಭಾವಾಂತರ ಯೋಜನೆ ಜಾರಿಗೊಳಿಸುವುದಾಗಿ ರೈತರ ಸಾಲ ಮನ್ನಾ ಮಾಡುವುದಾಗಿ, ಕೌಶಲ್ಯ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಮತ್ತು ಮಹಿಳೆಯರಿಗೆ ಮಾಸಿಕ 2,100 ರೂ. ಸಹಾಯಧನ ನೀಡುವುದಾಗಿ ವಾಗ್ದಾನ ಮಾಡಿದರು.
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಮೋದಿಜಿ ವಕ್ಫ್ ಮಂಡಳಿಯನ್ನು ಸುಧಾರಿಸಲು ಮಸೂದೆಯನ್ನು ತಂದಿದ್ದಾರೆ. ಇದರಿಂದ ಏನಾಗುತ್ತಿದೆ ನೋಡಿ.. ಕರ್ನಾಟಕದ ಪ್ರತಿಯೊಂದು ಹಳ್ಳಿಯಲ್ಲೂ ದೇವಾಲಯಗಳು, ಹೊಲಗಳು, ಭೂಮಿ, ಮನೆಗಳನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾಗುತ್ತಿದೆ. ಇದಕ್ಕಾಗಿಯೇ ನಾವು ವಕ್ಫ್ ಮಸೂದೆಯನ್ನು ತಂದಿದ್ದೇವೆ.
ಕಾಂಗ್ರೆಸ್ ಮತ್ತು ಅವರ ಮೈತ್ರಿ ಅಧಿಕಾರಕ್ಕೆ ಬಂದರೆ, ವಕ್ಫ್ ನಿಮ್ಮ ಆಸ್ತಿಗಳನ್ನು ತನ್ನದೇ ಎಂದು ಘೋಷಿಸುತ್ತದೆ ಎಂದು ನಾವು ಮಹಾರಾಷ್ಟ್ರಕ್ಕೆ ಎಚ್ಚರಿಕೆ ನೀಡಲು ಬಯಸುತ್ತೇವೆ ಎಂದರು.
ಮಹಾವಿಕಾಸ್ ಅಘಾಡಿ (ಎಂವಿಎ) ಇಂದು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಎಂವಿಎ ಮಹಿಳೆಯರಿಗೆ ದೊಡ್ಡ ಘೋಷಣೆ ಮಾಡಿದೆ. ಮಹಾಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 3000 ರೂಪಾಯಿ ನೀಡುವುದಾಗಿ ಭರವಸೆ ನೀಡಿದೆ.
ಮಹಿಳೆಯರು, ರೈತರು, ಯುವಕರು, ಆರೋಗ್ಯ, ಕೈಗಾರಿಕೆ, ಸಾಮಾಜಿಕ ನ್ಯಾಯ, ಉತ್ತಮ ಆಡಳಿತ ಮತ್ತು ನಗರಾಭಿವೃದ್ಧಿ ಸಮಸ್ಯೆಗಳ ಬಗ್ಗೆ ಕೆಲಸ ಮಾಡುವುದಾಗಿ ಮಹಾವಿಕಾಸ್ ಅಘಾಡಿ ಭರವಸೆ ನೀಡಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಂಶಗಳು :
ಕೃಷಿ ಸಾಲ ಮನ್ನಾ
ಲಾಡ್ಕಿ ಬಹಿನ್ ಯೋಜನೆಯ ಸಹಾಯಧನ ಮಿತಿ 2100 ರೂ.ಗೆ ಏರಿಕೆ
ಹತ್ತಿ ಮತ್ತು ಸೋಯಾಬೀನ್ ರೈತರ ಉಲ್ಲೇಖ
ವೃದ್ಧರ ಪಿಂಚಣಿ 1500 ರೂ.ಗಳಿಂದ 2100 ರೂ.ಗೆ ಏರಿಕೆ
25 ಲಕ್ಷ ಉದ್ಯೋಗ ಸೃಷ್ಟಿ
ಬೆಲೆಗಳನ್ನು ಸ್ಥಿರವಾಗಿಡಲು ಮಾರುಕಟ್ಟೆಯಲ್ಲಿ ಮಧ್ಯಪ್ರವೇಶ
ಸರ್ಕಾರ ರಚನೆಯಾದ 100 ದಿನಗಳಲ್ಲಿ, ತಂತ್ರಜ್ಞಾನವನ್ನು ಸುಧಾರಿಸಲು ದೂರದೃಷ್ಟಿಯ ನೀತಿಗೆ ಚಾಲನೆ
ಮಹಾರಾಷ್ಟ್ರವನ್ನು ಅತ್ಯಂತ ಆದ್ಯತೆಯ ಮೇಕ್ ಇನ್ ಇಂಡಿಯಾ ತಾಣವನ್ನಾಗಿ ಮಾಡುವುದು
ಫಿನ್ ಟೆಕ್, ಏರೋನಾಟಿಕ್ಸ್ ಮತ್ತು ಬಾಹ್ಯಾಕಾಶ ವಲಯಕ್ಕೆ ಒತ್ತು
ಲಖ್ಪತಿ ದೀದಿ – 2027 ರವರೆಗೆ ಮಹಾರಾಷ್ಟ್ರದಲ್ಲಿ 50 ಲಕ್ಷ ಲಖ್ಪತಿ ದೀದಿ ಸೃಷ್ಟಿ
ಮಹಾರಾಷ್ಟ್ರದಲ್ಲಿ ಎಐ ತರಬೇತಿ ಪ್ರಯೋಗಾಲಯಗಳ ಆರಂಭ
ರಾಜ್ಯದಲ್ಲಿ ಕೌಶಲ್ಯ ಗಣತಿ
ಯುವಕರಿಗೆ ಸ್ವಾಮಿ ವಿವೇಕಾನಂದ ಫಿಟ್ನೆಸ್ ಮತ್ತು ಆರೋಗ್ಯ ಕಾರ್ಡ್
ಮಹಾರಾಷ್ಟ್ರವನ್ನು ಮೊದಲ 1 ಟ್ರಿಲಿಯನ್ ಆರ್ಥಿಕತೆಯಾಗಿ ರೂಪಿಸುವುದು
ವಿಕಸಿತ್ ಭಾರತ್ ಮಾದರಿಯಲ್ಲಿ ವಿಕಸಿತ್ ಮಹಾರಾಷ್ಟ್ರ