ಉ.ಕ ಸುದ್ದಿಜಾಲ ನಿಪ್ಪಾಣಿ :

ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಗೊಲ್ಡನ್ ಸ್ಟಾರ್ ವಸತಿ ಗೃಹದ ಎರಡನೆಯ ಮಹಡಿಯಿಂದ ಬಿದ್ದು ಸಾವನಪ್ಪಿದ್ದ ಲಾಡ್ಜ್ ಮ್ಯಾನೇಜರ್ ಸಾವಿನ ಪ್ರಕರಣವನ್ನು ನಿಪ್ಪಾಣಿ ಪೊಲೀಸರು 24 ಗಂಟೆಯೊಳಗೆ  ಭೇದಿಸಿ ಯಶಸ್ವಿಯಾಗಿದ್ದಾರೆ.

ಕಿರಣ್ ಗಣಪತಿ ಮಿರ್ಡೇಕರ್ ಕಾಂಬಳೆ (46, ಭೀಮನಗರ 3ನೇ ಗಲ್ಲಿ) ಎಂಬಾತ ಲಾಡ್ಜ್ ನ ಎರಡನೇ  ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ ನಿಪ್ಪಾಣಿಯ ಹೋಟೆಲ್ ಗೋಲ್ಡನ್ ಸ್ಟಾರ್‌ನಲ್ಲಿ ನಡೆದಿತ್ತು. ಇದನ್ನು ಬೆನ್ನಟ್ಟಿದ ಪೊಲೀಸರು ಸಾವಿಗೆ ಕಾರಣರಾದವರನ್ನು ಹೆಡೆಮುರಿ ಕಟ್ಟಿದ್ದಾರೆ.

ನಿಪ್ಪಾಣಿಯ ಗೊಲ್ಡನ್ ಸ್ಟಾರ್  ಲಾಡ್ಜ್‌ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಬೆಳಗಾವಿಯ ಕೇಲ ನಕಲಿ ಪತ್ರಕರ್ತರು ಲಾಡ್ಜ್ ಮ್ಯಾನೇಜರ್ ಕಿರಣ್ ಗಣಪತಿ ಭಿರ್ಡೇಕರ್-ಕಾಂಬಳೆ ಎಂಬುವರಿಗೆ ಬ್ಲಾಕ್‌ಮೇಲ್ ಮಾಡಿ ಮೊಬೈಲ್ ನಲ್ಲಿ ಚಿತ್ರಿಕರಿಸುತ್ತ ಬೆನ್ನಟ್ಟಿದಾಗ ಅವರು ಗಾಬರಿಯಿಂದ ಓಡಲು ಹೋಗಿ ಎರಡನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಗಿ ಸ್ಪಷ್ಟವಾಗಿದೆ.

ಅಲ್ಲದೇ ನಕಲಿ ಪತ್ರಕರ್ತರಿಂದಾಗಿ ಕಿರಣ ಸಾವು ಸಂಭವಿಸಿದ್ದು ಎಂದು ಪ್ರಾಥಮಿಕ ತನಿಖೆಯಿಂದ ಸ್ಪಷ್ಟವಾದ ಮೇಲೆ ಮತ್ತಷ್ಟು ತನಿಖೆ ನಡೆಸಿದಾಗ ಪ್ರಕರಣ ಸತ್ಯಾಸತ್ಯತೆ ಬಹಿರಂಗವಾಗಿದೆ. ಇದರ ಬೆನ್ನೆಲ್ಲೇ ಈ ಪ್ರಕರಣದಲ್ಲಿ ಇಬ್ಬರನ್ನು ನಿಪ್ಪಾಣಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದು, ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಬೆಳಗಾವಿ ತಾಲೂಕಿನ ಗೊಡ್ಯಾಳ ಗ್ರಾಮದ ಬಾಳಪ್ಪ ಗೂಡಗೆನಟ್ಟಿ ಹಾಗೂ ನಿಲೇಶ ಕಿತ್ತೂರು ವೈಭವನಗರ, ಬೆಳಗಾವಿ ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನೊರ್ವ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ.

ಸಂಜಯ್ ಭೈರಪ್ಪ ಮಾಳಿ ಎಂಬುವರು 2020 ರಿಂದ ಹೋಟೆಲ್ ಗೋಲ್ಡನ್ ಸ್ಟಾರ್ ಎಂಬ ಲಾಡ್ಜ್ ಗುತ್ತಿಗೆಗೆ ಪಡೆದು ನಡೆಸುತ್ತಿದ್ದಾರೆ. ಇದರಲ್ಲಿ ಮೃತ ಕಿರಣ ಕಾಂಬಳೆ ಕಳೆದ ಎರಡು ವರ್ಷಗಳಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು.  ಶುಕ್ರವಾರ ಸಂಜೆ ಆರೋಪಿ ಬಾಳಪ್ಪ ಗೂಡಗೆನಟ್ಟಿ, ನೀಲೇಶ್ ಕಿತ್ತೂರ ಹಾಗೂ ಮತ್ತೋರ್ವ ಸಹಚರ ನಾವು ಪತ್ರಕರ್ತರು ನಿಮ್ಮ ಲಾಡ್ಜ್ ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಮೊಬೈಲ್ ನಲ್ಲಿ ಚಿತ್ರಿಕರಣ ಮಾಡಿದ್ದಾರೆ.

ಸುದ್ದಿ ಮಾಡದಿರಲು ನಾವು ಕೇಳಿದಷ್ಟು ಹಣ ಕೊಡುವಂತೆ ಬ್ಲ್ಯಾಕ್ ಮೇಲ್ ಮಾಡಿ ಮತ್ತೆ ಮೊಬೈಲ್ ನಿಂದ ಚಿತ್ರಿಕರಿಸಲು ಪ್ರಾರಂಭಿಸಿದ್ದಾರೆ. ಇದರಿಂದ ಹೆದರಿದ ಲಾಡ್ಜ್‌ ಮ್ಯಾನೇಜರ್ ಕಿರಣ ಓಡಲು ಆರಂಭಿಸಿದಾಗ ಎರಡನೇ ಮಹಡಿಯಿಂದ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ.

ಒಟ್ಟಿನಲ್ಲಿ ಬೆಳಗಾವಿಯಲ್ಲಿ ನಕಲಿ ಪತ್ರಕರ್ತರಿಂದಾಗಿ ಶೋಷಣೆ ಒಳಗಾಗಿದ್ದಾರೆಂದು ತಿಳಿದು ಬಂದಿತ್ತು. ಆದರೆ ಈಗ ಇವರಿಂದಾಗಿ ಅಮಾಯಕರು ಪ್ರಾಣ ಕಳೆದುಕೊಳ್ಳುವಷ್ಟರ ಮಟ್ಟಿಗೆ ಹೋಗಿದೆ.

ಕರಗನಾಟಕದ ಎರಡನೇ ರಾಜಧಾನಿಯಲ್ಲಿ ಇದೊಂದು ದುರಂತವೇ ಸರಿ. ಇನ್ನಾದರೂ ಜಿಲ್ಲಾಡಳಿತ ಹಾಗೂ ಪೊಲೀಸ ಇಲಾಖೆ ನಕಲಿಗಳ ವಿರುದ್ಧ ಕರಮ ಕೈಗೊಳ್ಳುವರೆ ಎಂದು ಕಾದು ನೋಡಬೇಕಿದೆ.