ಉ.ಕ ಸುದ್ದಿಜಾಲ ಚಿಕ್ಕೋಡಿ :
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿಯಲ್ಲಿ ಶುಕ್ರವಾರ ಎಂಟು ನವಿಲುಗಳಿಗೆ ವಿಷ ಮಿಶ್ರಿತ ಕಾಳುಗಳನ್ನು ತಿನ್ನಿಸಿ ಕೊಂದ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಅಧಿಕಾಗಳು ಶನಿವಾರ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಿಗೆ ಹುಡುಕಾಟ ನಡೆದಿದೆ.
ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಝಳಕಿಯ ಮಂಜುನಾಥ ಪವಾರ ಬಂಧಿತ. ಇವರು ಮಾಂಜರಿಯ ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದರು. ವಿಷದ ಕಾಳು ತಿಂದ ನವಿಲುಗಳು ಕಬ್ಬಿನ ಗದ್ದೆಯಲ್ಲಿ ಅಲ್ಲಲ್ಲಿ ಸತ್ತುಬಿದ್ದಿದ್ದವು. ಇದನ್ನು ಕಂಡು ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು.
ವಿಷ ಪ್ರಾಷಣದಿಂದ ಮೂರು ಹೆಣ್ಣು ಮತ್ತು ಐದು ಗಂಡು ನವಿಲು ಮೃತಪಟ್ಟಿವೆ. ಮಾಂಸಕ್ಕಾಗಿ ನವಿಲು ಕೊಂದಿರುವ ಶಂಕೆ ಇದ್ದು, ತನಿಖೆ ನಡೆಸುತ್ತಿದ್ದೇವೆ. ಈ ಪ್ರಕರಣದಲ್ಲಿ ಪರಾರಿ
ಯಾದ ಇನ್ನಿಬ್ಬರ ಬಂಧನಕ್ಕಾಗಿ ಎರಡು ವಿಶೇಷ ತಂಡ ರಚಿಸಿದ್ದೇವೆ.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ನವಿಲುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ವರದಿ ಬಂದ ನಂತರಅವುಗಳ ಸಾವಿಗೆ ಸಂಬಂಧಿಸಿ ಇನ್ನಷ್ಟು ಮಾಹಿತಿ ತಿಳಿಯಲಿದೆ’ ಎಂದು ಎಂದು ರಾಯಬಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ ‘ಪ್ರಜಾವಾಣಿ’ಗೆ ತಿಳಿಸಿದರು.