ಉ.ಕ. ಸುದ್ದಿಜಾಲ | ಚಿಕ್ಕೋಡಿ :

ರೈತರ ಜಮೀನು ಸ್ವಾಧೀನಪಡಿಸಿಕೊಂಡು ನ್ಯಾಯಾಲಯ ಆದೇಶಿಸಿದ ಹೆಚ್ಚುವರಿ ಪರಿಹಾರ ನೀಡಲು ವಿಳಂಬ ಮಾಡಿದ ನೀರಾವರಿ ಇಲಾಖೆಗೆ ನ್ಯಾಯಾಲಯ ಬಿಸಿ ಮುಟ್ಟಿಸಿದೆ. ರೈತರಿಗೆ ಪರಿಹಾರ ಪಾವತಿಸದ ಹಿನ್ನೆಲೆಯಲ್ಲಿ ಚಿಕ್ಕೋಡಿಯ ನೀರಾವರಿ ಇಲಾಖೆ ಕಚೇರಿಯ ಕಂಪ್ಯೂಟರ್, ಕುರ್ಚಿ, ಟೇಬಲ್ ಸೇರಿದಂತೆ ವಿವಿಧ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ.

2002ರಲ್ಲಿ ಕಾಲುವೆ ನಿರ್ಮಾಣಕ್ಕಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಮತ್ತೆವಾಡಿ ಹಾಗೂ ಕುಗನೊಳ್ಳಿ ಗ್ರಾಮದ ರೈತರ ಜಮೀನುಗಳನ್ನು ನೀರಾವರಿ ಇಲಾಖೆ ಸ್ವಾಧೀನಪಡಿಸಿಕೊಂಡಿತ್ತು. ಆದರೆ ಜಮೀನಿಗೆ ನೀಡಿದ ಪರಿಹಾರ ಮೊತ್ತ ಕಡಿಮೆಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ರೈತರು ಹೆಚ್ಚಿನ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.

ರೈತರ ಅರ್ಜಿಯ ವಿಚಾರಣೆ ನಡೆಸಿದ ಬೆಳಗಾವಿಯ ಭೂಸ್ವಾಧೀನ ಪ್ರಾಧಿಕಾರದ ನ್ಯಾಯಮಂಡಳಿ 2023ರಲ್ಲಿ ಹೆಚ್ಚುವರಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಒಂದು ಪ್ರಕರಣದಲ್ಲಿ ಒಟ್ಟು 15 ಲಕ್ಷ ರೂಪಾಯಿ ಹೆಚ್ಚುವರಿ ಪರಿಹಾರ ಪಾವತಿಸಲು ಆದೇಶಿಸಲಾಗಿತ್ತು ಎನ್ನಲಾಗಿದೆ.

ಆದರೆ 2023ರಿಂದಲೂ ರೈತರಿಗೆ ಪರಿಹಾರ ನೀಡುವಲ್ಲಿ ಇಲಾಖೆ ವಿಫಲವಾಗಿದೆ. ಇದರಿಂದಾಗಿ ನ್ಯಾಯಾಲಯದ ಆದೇಶದಂತೆ ಚಿಕ್ಕೋಡಿಯ ನೀರಾವರಿ ಇಲಾಖೆ ಕಚೇರಿಗೆ ಜಪ್ತಿ ಕ್ರಮ ಕೈಗೊಳ್ಳಲಾಗಿದೆ. ಕಚೇರಿಯಲ್ಲಿದ್ದ ಕಂಪ್ಯೂಟರ್, ಕುರ್ಚಿ, ಟೇಬಲ್ ಸೇರಿದಂತೆ ವಿವಿಧ ಪೀಠೋಪಕರಣಗಳನ್ನು ಜಪ್ತಿ ಮಾಡಲಾಗಿದೆ.

ಈ ಕುರಿತು ವಕೀಲ ನಾಗೇಶ ಕಿವಡ ಅವರು ಮಾಹಿತಿ ನೀಡಿದ್ದು, ಪರಿಹಾರ ವಿಳಂಬದಿಂದ ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ವಿವರಿಸಿದ್ದಾರೆ. ರೈತ ಅನಿಲ ಸುತ್ತಾರ ಕೂಡ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ರೈತರ ಜಮೀನು ಸ್ವಾಧೀನಪಡಿಸಿಕೊಂಡ ಬಳಿಕ ನ್ಯಾಯಾಲಯ ಆದೇಶಿಸಿದ ಪರಿಹಾರವನ್ನು ಸಕಾಲದಲ್ಲಿ ಪಾವತಿಸದ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆಯ ಕಚೇರಿ ಸಾಮಗ್ರಿಗಳೇ ಜಪ್ತಿಯಾಗಿರುವುದು ಗಮನ ಸೆಳೆದಿದೆ.

ಒಟ್ಟಿನಲ್ಲಿ ರೈತರ ಭೂಮಿಗೆ ನ್ಯಾಯಯುತ ಪರಿಹಾರ ನೀಡುವಂತೆ ನ್ಯಾಯಾಲಯ ನೀಡಿದ ಆದೇಶದ ಅನುಷ್ಠಾನಕ್ಕೆ ಜಪ್ತಿ ಕ್ರಮ ಕೈಗೊಳ್ಳಲಾಗಿದ್ದು, ರೈತರಿಗೆ ಪರಿಹಾರ ಯಾವಾಗ ದೊರೆಯಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.