ಉ.ಕ ಸುದ್ದಿಜಾಲ ಹುಕ್ಕೇರಿ :

ಇತ್ತೀಚಿನ ದಿನಗಳಲ್ಲಿ ಗಡಿಭಾಗದ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿದೆ. ಸರಕಾರಕ್ಕೆ ದಾಖಲಾತಿ ಕಡಿಮೆಯ ಟೆನ್ಶನ್ ನಡುವೆಯೇ ಸರಕಾರಿ ಕನ್ನಡ ಶಾಲೆಯತ್ತ ಮಕ್ಕಳನ್ನ ಸೆಳೆಯಲು ಶಾಲೆಯೊಂದರಲ್ಲಿ ಸರಕಾರದ ಅನುದಾನವಿಲ್ಲದೆ ಯುಕೆಜಿ – ಎಲ್ ಕೆಜಿ ಆರಂಭಿಸಿ ಸರಕಾರಿ ಶಾಲೆಯ ಶಿಕ್ಷಕ ಮಾದರಿಯಾಗಿದ್ದಾರೆ.

ಹೌದು ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರದ ಅನುದಾನವಿಲ್ಲದೇ ಶಾಲಾ ಸುಧಾರಣಾ ಸಮಿತಿ ಹಾಗೂ ಶಾಲೆಯ ಶಿಕ್ಷಕರ ಅರುಣ ಗಸ್ತಿ ಉಚಿತವಾಗಿ ಆಂಗ್ಲ ಮಾಧ್ಯಮದಲ್ಲಿ ಯುಕೆಜಿ – ಎಲ್ ಕೆಜಿ ತರಗತಿಗಳನ್ನು ಪ್ರಾರಂಭಿಸಿದ್ದಾರೆ.

ಖಾಸಗಿ ಶಿಕ್ಷಣ ಸಂಸ್ಥೆಗಳ ಮಾದರಿಯಲ್ಲಿಯೇ ಶಿಕ್ಷಣ ನೀಡಲು ರೂಪು ರೇಷೆ ಹಾಕಿಕೊಂಡಿದ್ದಾರೆ. ಈ ಶಾಲಾ ಮಕ್ಕಳಿಗೆ ಶಿಕ್ಷಕರು ತಮ್ಮ ವೇತನದಲ್ಲಿ ತಗಲುವ ನಿರ್ವಹಣೆ ವೆಚ್ಚ ಭರಿಸಲು ಮುಂದಾಗುವ ಜೊತೆಗೆ ಶಾಲೆಗೆ ಮಕ್ಕಳ ಕರೆತರಲು, ಬಟ್ಟೆ, ಪುಸ್ತಕ, ಶಾಲೆ ಶಿಕ್ಷಕರ ವೇತನದಿಂದ ಭರಿಸುತ್ತಿದ್ದಾರೆ.

ಗಡಿಭಾಗದಲ್ಲಿ ಕನ್ನಡ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಕುಸಿಯುತ್ತಿರುವದನ್ನು ಸಾಕಷ್ಟು ಅಭಿಯಾನ ನಡೆಸಿದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ.

ಇದೀಗ ತಾವು ಕಲಿಸುವ ಶಾಲೆಯ ಬೆಳವಣಿಗೆ ಬಯಸಿರುವ ಶಿಕ್ಷಕರು ಕ್ಷೇತ್ರ ಶಿಕ್ಷಣಾಧಿಕಾರಿ ಅನುಮತಿಯೊಂದಿಗೆ ಸ್ವಂತ ಖರ್ಚಿನಲ್ಲಿಯೇ ಎಲ್ ಕೆಜಿ -ಯುಕೆಜಿ ತರಗತಿ ಆರಂಭಿಸುತ್ತಿದ್ದು,ಇದಕ್ಕೆಡ ಸಾರ್ವಜನಿಕ ವಲಯದಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.

ಇತ್ತೀಚಿಗೆ ಅಂಗನವಾಡಿಯಲ್ಲಿ ಎಲಕೆಜಿ ಯುಕೆಜಿ ಪ್ರಾರಂಭಿಸಲು ಸರಕಾರ ಚಿಂತನೆ ನಡೆಸುತ್ತಿರುವ ನಡುವೆಯೇ ಸರಕಾರ ಶಾಲಾ ಶಿಕ್ಷಕರು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಮುಂದಾಗಿದ್ದಾರೆ. ಖಾಸಗಿ ಶಾಲೆಯ ಮಾದರಿಯಲ್ಲಿಯೇ ಶಿಕ್ಷಣ ಪದ್ದತಿ ಅನುಸರಿಸಿದ್ದು ಗ್ರಾಮೀಣ ಭಾಗದ ಪೋಷಕರ ಉತ್ಸಾಹಕ್ಕೆ ಕಾರಣವಾಗಿದೆ. ಎಲ್ ಕೆ ಜಿ ಯುಕೆಜಿ ಆರಂಭಿಸುತ್ತಿದ್ದಂತೆ ಇದೇ ವರ್ಷ ೪೦ ಮಕ್ಕಳ ದಾಖಲಾಗಿದ್ದು ಈ ಸಂಖ್ಯೆ ಮುಂದಿನ ಬಾರಿ ಹೆಚ್ಚಾಗುವ ವಿಶ್ವಾಸವಿದೆ.

ಒಟ್ಟಿನಲ್ಲಿ ಸರಕಾರ ಸಂಬಳ ಸಿಕ್ಕರೆ ಸಾಕು ನಾವು ನೆಮ್ಮದಿಯಿಂದ ಇರಬಹುದು ಎನ್ನುವ ಜನರಿಗೆ ಗೋಟೂರ ಸರಕಾರಿ ಶಾಲೆಯ ಶಿಕ್ಷಕರು ತಾವು ಕಲಿಸುತ್ತಿರುವ ಶಾಲೆಯ ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತಿದ್ದು ಇತರರಿಗೆ ಮಾದರಿಯಾಗಿದೆ.