ಉ.ಕ‌ ಸುದ್ದಿಜಾಲ ಚಿಕ್ಕೋಡಿ :

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ಧೀಡಿರ್ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅಧಿಕಾರಿಗಳು ಲಂಚ ಸ್ವೀಕರಿಸುತ್ತಿರುವ ವೇಳೆ ಹಿಡಿಯಲ್ಪಟ್ಟಿದ್ದು, ಮಹತ್ವದ ಬೆಳವಣಿಗೆಯಾಗಿವೆ.

ಮಾಹಿತಿಯ ಪ್ರಕಾರ, ಪೆಟ್ರೋಲ್ ಬಂಕ್‌ಗೆ ಎನ್‌ಒಸಿ (NOC) ನೀಡುವ ಕುರಿತಾಗಿ ₹12,000 ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪ ಎದುರಾಗಿದೆ. ಲೋಕಾಯುಕ್ತ ಅಧಿಕಾರಿಗಳಿಗೆ ದೊರೆತ ಖಚಿತ ಮಾಹಿತಿಯ ಮೇಲೆ ಅಧಿಕಾರಿಗಳು ಕಚೇರಿಯಲ್ಲಿ ದಾಳಿ ನಡೆಸಿದ್ದು, ಹಣ ಸ್ವೀಕರಿಸುವ ಸಂದರ್ಭದಲ್ಲೇ ಅಧಿಕಾರಿಗಳನ್ನು ಬಲೆಗೆ ಬೀರಿದ್ದಾರೆ.

ದಾಳಿಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಶೋಭಾ ಪೊಳ್ ಹಾಗೂ ಕಂಪ್ಯೂಟರ್ ಆಪರೇಟರ್ ಪ್ರವೀಣ ದೊಡಮನಿ ಎಂಬುವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಇಬ್ಬರೂ ಸೇರಿ ಸಾಗರ ದೊಡಮನಿ ಎಂಬುವರಿಂದ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.

ಸಾಗರ ದೊಡಮನಿಯು ಈ ಸಂಬಂಧ ಲೋಕಾಯುಕ್ತ ಕಚೇರಿಗೆ ದೂರು ನೀಡಿದ್ದು, ಅದರ ಮೇರೆಗೆ ತಂಡವು ಕಾರ್ಯಾಚರಣೆ ನಡೆಸಿದೆ. ದಾಳೆಗೆ ಲೋಕಾಯುಕ್ತ ಡಿವೈಎಸ್ಪಿ ಬಿ.ಎಸ್. ಪಾಟೀಲ ಮತ್ತು ಇನ್ಸ್‌ಪೆಕ್ಟರ್ ಎಸ್.ಎಚ್. ಹೋಸಮನಿ ನೇತೃತ್ವ ವಹಿಸಿದ್ದರು.