ಉ.ಕ ಸುದ್ದಿಜಾಲ ಬೆಳಗಾವಿ :
ಕೇಂದ್ರದ ಬೆಲೆ ಏರಿಕೆ ನೀತಿ ವಿರೋಧಿಸಿ ಬೆಳಗಾವಿಯಲ್ಲಿ ಏ.28ರಂದು ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಧಾರವಾಡ ಎಎಸ್ಪಿ ನಾರಾಯಣ ಭರಮನಿ ಅವರ ಮೇಲೆ ಕೈ ಮಾಡಲು ಯತ್ನಿಸಿದ್ದರು.
ಇದಕ್ಕೆ ಎಲ್ಲೆಡೆ ವ್ಯಾಪಕ ಆಕ್ಷೇಪ ವ್ಯಕ್ತವಾಗಿತ್ತು. ಈಗ ಸಿದ್ದರಾಮಯ್ಯ ಅವರ ವಿರುದ್ಧ ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ದೂರು ಸಲ್ಲಿಸಿದ್ದಾರೆ.
ಇಂದು ಗುರುವಾರ ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ ಭೀಮಪ್ಪ ಗಡಾದ, ರಾಜ್ಯದ ಮುಖ್ಯಮಂತ್ರಿಯಾಗಿ ಜವಾಬ್ದಾರಿಯುತ ವ್ಯಕ್ತಿಯಾಗಿ ನಾಡಿನ ಸಮಸ್ತ ಚಿಂತನೆಗಳಿಗೆ ಧ್ವನಿಯಾಗುವ ಮೂಲಕ ಕಾರ್ಯಾಂಗದ ಅಧಿಕಾರಿಗಳೆಲ್ಲರನ್ನೂ ಉತ್ತೇಜಿಸಬೇಕು.
ಇದನ್ನು ಬಿಟ್ಟು, ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಅವರಿಗೆ ಕೀಳು ಪದಗಳನ್ನು ಬಳಕೆ ಮಾಡಿದ್ದಲ್ಲದೇ ಗದರಿಸಿ, ಹೆದರಿಸಿ ಪೊಲೀಸ್ ಸಮವಸ್ತ್ರದಲ್ಲಿದ್ದ ನಾರಾಯಣ ಭರಮನಿ ಅವರನ್ನು ಹೊಡೆಯಲು ಹೋಗಿದ್ದಾರೆ. ಇದು ಆ ಪೊಲೀಸ್ ಅಧಿಕಾರಿಯ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸವಾಗಿದೆ ಎಂದು ಆರೋಪಿಸಿದರು.
ಶಾಸಕಾಂಗದ ಮುಖ್ಯಸ್ಥರಾಗಿರುವ ಸಿದ್ದರಾಮಯ್ಯ ಅವರ ಈ ನಡೆಯು ಸಂಪೂರ್ಣವಾಗಿ ಸಂವಿಧಾನದ ಆಶಯಕ್ಕೆ ವಿರೋಧವಾಗಿದೆ. ಈ ವೇಳೆ ಕಾನೂನು ಸಚಿವರು ಸೇರಿದಂತೆ ಹಲವು ಸಚಿವರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರ ಸಮ್ಮುಖದಲ್ಲಿಯೇ ಮುಖ್ಯಮಂತ್ರಿಗಳು ನಾರಾಯಣ ಭರಮನಿ ಅವರನ್ನು ಹೊಡೆಯಲು ಕೈ ಎತ್ತಿ ತಮ್ಮ ಅಧಿಕಾರ ದರ್ಪ ತೋರಿಸಿದ್ದಾರೆ.
ಈ ಘಟನೆಯು ರಾಜ್ಯದ ಇತರ ಇಲಾಖೆಗಳ ಹಿರಿಯ ಮತ್ತು ಕಿರಿಯ ಅಧಿಕಾರಗಳೆಲ್ಲರೂ ಭಯ ಪಡುವಂತಾಗಿದೆ ಎಂದು ಭೀಮಪ್ಪ ಗಡಾದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಭೀಮಪ್ಪ ಗಡಾದ, “ಭಾರತೀಯ ನ್ಯಾಯ ಸಂಹಿತೆ-2023ರ ಕಲಂ 132ರ ಪ್ರಕಾರ ಸಾರ್ವಜನಿಕ ಸೇವಕನಾಗಿ ಕರ್ತವ್ಯವನ್ನು ನಿರ್ವಹಿಸುವಾಗ ಅದನ್ನು ತಡೆಯುವುದು ಕಾನೂನು ಉಲ್ಲಂಘನೆಯಾಗುತ್ತದೆ.
ಸರ್ಕಾರದ ಸೇವಕನಾಗಿರುವ ಯಾವುದೇ ವ್ಯಕ್ತಿಯ ಮೇಲೆ ಹಲ್ಲೆ ನಡೆಸುವ ಅಥವಾ ಬಲ ಪ್ರಯೋಗ ಮಾಡುವ ಯಾವುದೇ ವ್ಯಕ್ತಿಗೆ ಎರಡು ವರ್ಷ ಜೈಲು ಶಿಕ್ಷೆ ಅಥವಾ ದಂಡ ಇಲ್ಲವೇ ಎರಡನ್ನು ವಿಧಿಸಬಹುದಾಗಿದೆ ಎಂದು ತಿಳಿಸಿದರು.
ಘಟನೆಗೆ ಸಂಬಂಧಿಸಿದಂತೆ ಲಭ್ಯವಿರುವ ವಿಡಿಯೋ ದೃಶ್ಯಾವಳಿಗಳ ಸಿಡಿ ಮತ್ತು ಪತ್ರಿಕಾ ವರದಿಗಳನ್ನು ದೂರಿನೊಂದಿಗೆ ಲಗತ್ತಿಸಲಾಗಿದೆ. “ಭಾರತೀಯ ನ್ಯಾಯ ಸಂಹಿತೆ-2023″ರ ಕಲಂ 132ರ ಅಡಿ ಸಿದ್ದರಾಮಯ್ಯ ಅವರ ಮೇಲೆ ದೂರು ದಾಖಲಿಸುವಂತೆ ಕ್ಯಾಂಪ್ ಪೊಲೀಸ್ ಠಾಣೆಯ ಪಿಎಸ್ಐ ಅವರಿಗೆ ನೀಡಿರುವ ದೂರಿನಲ್ಲಿ ವಿನಂತಿಸಲಾಗಿದೆ.
ಅದೇ ರೀತಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೂ ದೂರು ಸಲ್ಲಿಸಿದ್ದೇನೆ. ಮಾನವ ಹಕ್ಕಿನ ಉಲ್ಲಂಘಣೆಯಾಗಿದ್ದರೆ ಅದರ ಬಗ್ಗೆಯೂ ಸಂಪೂರ್ಣ ತನಿಖೆ ನಡೆಸುವಂತೆ ಭೀಮಪ್ಪ ಗಡಾದ ಒತ್ತಾಯಿಸಿದರು.
ಸಿದ್ದರಾಮಯ್ಯ ಅವರ ವಿರುದ್ಧ ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ದೂರು ಯಾಕೆ ಗೊತ್ತಾ?
