ಉ.ಕ ಸುದ್ದಿಜಾಲ ಅಥಣಿ :
ತಡರಾತ್ರಿ ಅಥಣಿ ಹೊರವಲಯದಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಣಜವಾಡ್ ಕಾಲೇಜು ಹತ್ತಿರ ವಿಜಯಪುರ-ಸಂಕೇಶ್ವರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಗಣೇಶವಾಡಿ ಗ್ರಾಮದ ಮಹೇಶ್ ಸುಭಾಷ್ ಗಾತಾಡೆ (30) ಮತ್ತು ಶಿರೋಳ ತಾಲೂಕಿನ ಪುಡವಾಡ ಗ್ರಾಮದ ಶಿವಂ ಯುವರಾಜ್ ಚೌಹಾನ್ (24) ಹಾಗೂ ಮಹಾರಾಷ್ಟ್ರ ಸಾಂಗ್ಲಿ ಜಿಲ್ಲೆಯ ಮಿರಜ್ ತಾಲೂಕಿನ ಕವಲಾಪುರ ಗ್ರಾಮದ ಸಚಿನ್ ವಿಲಾಸ್ ಮಾಳಿ (42) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅಥಣಿ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಲಾರಿ, ಪಿಕಪ್ ವಾಹನ, ಇನೋವಾ ಹಾಗೂ ಸ್ಕಾರ್ಪಿಯೋ ನಡುವೆ ಸರಣಿ ಅಪಘಾತವಾಗಿದೆ. ಸ್ಥಳಕ್ಕೆ ಅಥಣಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಗಾಯಾಳುಗಳನ್ನು ರಕ್ಷಿಸಲು ಬಂದವರೇ ಅಪಘಾತದಲ್ಲಿ ಸಾವು :
ಮೊದಲು,ಕಾಗವಾಡ ಕಡೆಯಿಂದ ಅಥಣಿ ಕಡೆಗೆ ಕೆಂಪು ಇಟ್ಟಿಗೆ ತುಂಬಿಕೊಂಡು ಬರುತ್ತಿದ್ದ ಲಾರಿ ಹಾಗೂ ಅಥಣಿಯಿಂದ ಕಾಗವಾಡಕ್ಕೆ ತೆರಳುತ್ತಿದ್ದ ಪಿಕಪ್ ವಾಹನದ ನಡುವೆ ಅಪಘಾತವಾಗಿದೆ.
ಗಾಯಗೊಂಡ ಪಿಕಪ್ ವಾಹನದ ಚಾಲಕ ಮತ್ತು ಕ್ಲೀನರ್ ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ಇದನ್ನು ಗಮನಿಸಿದ ಸ್ಕಾರ್ಪಿಯೋ ಚಾಲಕ ತನ್ನ ವಾಹನ ಸೈಡಿಗೆ ಹಾಕಿ, ಅವರನ್ನು ರಕ್ಷಿಸಲು ಮುಂದಾಗಿದ್ದಾರೆ.
ಈ ವೇಳೆ ಅಥಣಿ ಕಡೆಯಿಂದ ಬಂದ ಇನೋವಾ ಕಾರು ನೇರವಾಗಿ ರಕ್ಷಿಸಲು ಮುಂದಾದವನಿಗೆ ಡಿಕ್ಕಿ ಹೊಡೆದಿದೆ.
ಸರಣಿ ಅಪಘಾತ ಸ್ಥಳದಲ್ಲಿಯೇ ಮೂರು ಸಾವು : ಕಾಪಾಡಲು ಬಂದ ವ್ಯಕ್ತಿಯು ಸಾವು
