ಉ.ಕ ಸುದ್ದಿಜಾಲ ಉತ್ತರ ಕನ್ನಡ :
ಪ್ರೇಮ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹುಡುಗಿ ಕಡೆಯವರು ಬೆದರಿಕೆ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆಂಬ ಆರೋಪ ಹಿನ್ನೆಲೆಯಲ್ಲಿ, ಯುವಕನೊರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಸಿದ್ದಾಪುರ ತಾಲೂಕಿನಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆ ಸೊರಬದ ಸಂತೋಷ ಗಣಪತಿ ನಾಯ್ಕ (26) ಆತ್ಮಹತ್ಯೆ ಮಾಡಿಕೊಂಡ ಯುವಕ. ಖಾಸಗಿ ಬ್ಯಾಂಕ್ ಉದ್ಯೋಗಿಯಾಗಿದ್ದ ಸಂತೋಷ ಸಿದ್ದಾಪುರ ತಾಲೂಕಿನ ಕೋಲಸಿರ್ಸಿಯ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಸಿದ್ದಾಪುರ ತಾಲೂಕಿನ ಚನಮಾಂವ ಊರಿನ ಚರಣ, ಮನೋಜ, ಲೋಕೇಶ ಹಾಗೂ ಇನ್ನೂ ಇತರ ನಾಲ್ವರು ಅಪರಿಚಿತ ಯುವಕರು ಚಿಕ್ಕತೌಡತ್ತಿಯಲ್ಲಿರುವ ಸಂತೋಷನ ಮನೆಗೆ ಬಂದು ಇನ್ನು ಮುಂದೆ ಯುವತಿಯನ್ನು ಪ್ರೀತಿಸದಂತೆ ಹೆದರಿಸಿದ್ದಾರೆ.
ಅಲ್ಲದೆ, ಪ್ರೀತಿ ಮುಂದುವರೆಸಿದರೆ, ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ಅವಳನ್ನು ಬಿಡಲು ಆಗದಿದ್ದರೆ ಎಲ್ಲಿಯಾದರೂ ಹೋಗಿ ಸಾಯಿ ಎಂದು ದುಷ್ಪ್ರೇರಣೆ ನೀಡಿದ್ದಾರೆ ಎಂದು ಮೃತನ ತಂದೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಯುವಕ ಈ ಬೆದರಿಕೆಯಿಂದ ಮಾನಸಿಕವಾಗಿ ನೊಂದು ಊಟ, ನಿದ್ರೆ ಬಿಟ್ಟು ಚಿಂತೆಯಲ್ಲಿದ್ದ. ಜೂನ್ 10ರಂದು ಜಮೀನಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವ ಸಿದ್ದಾಪುರ ತಾಲೂಕಿನ ಕಾಳೆನಳ್ಳಿ ಬಳಿಯ ದೂಪದಕಾನು ಅರಣ್ಯ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ತನ್ನ ಮಗನಿಗೆ ಅವಾಚ್ಯವಾಗಿ ನಿಂದಿಸಿದ್ದಲ್ಲದೆ, ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದರಿಂದಲೇ ಮಗನು ಮೃತಪಟ್ಟಿದ್ದಾನೆ ಎಂದು ಗಣಪತಿ ನಾರಾಯಣ ನಾಯ್ಕ ಸಿದ್ದಾಪುರ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದಾರೆ.
ಪ್ರೇಮ ಕಹಾನಿ – ಹುಡಗಿ ಕಡೆಯವರಿಂದ ಬೆದರಿಕೆ ಕಾಡಿನಲ್ಲಿ ಯವಕ ಆತ್ಮಹತ್ಯೆ
