ಉ.ಕ ಸುದ್ದಿಜಾಲ ಬೆಳಗಾವಿ :

ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರಕ್ಕೆ ಕರ್ನಾಟಕ ಬಂದ್ ಘೋಷಣೆ ಮಾಡಲಾಗಿದ್ದು ಬೆಳಗಾವಿ ಹಾಗೂ ಚಿಕಿತ್ಸೆಯ ಉಪವಿಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಾವೇರಿ ನೀರು ಹರಿಸುವ ಸಂಬಂಧ ವಿವಿಧ ಸಂಘಟನೆಗಳು ಸೆ. 29ರಂದು ಕರ್ನಾಟಕ ಬಂದ್ ಕರೆ ನೀಡಿವೆ. ಆದರೆ, ಬೆಳಗಾವಿ ಜಿಲ್ಲೆಯಲ್ಲಿ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ಗಳು ಯಥಾ ಪ್ರಕಾರ ಸಂಚಾರ ನಡೆಸಲಿವೆ ಎಂದು ಸಂಸ್ಥೆಯ ವಿಭಾಗೀಯ ಸಂಚಾರ ಅಧಿಕಾರಿ ಕೆ.ಕೆ.ಲಮಾನಿ ತಿಳಿಸಿದ್ದಾರೆ.

ಬಂದ್‌ ಬೆಂಬಲಿಸಿ ಯಾವುದೇ ಶಾಲೆ, ಕಾಲೇಜು ಕೂಡ ರಜೆ ಘೋಷಣೆ ಮಾಡಿಲ್ಲ. ಬಿಜೆಪಿ, ಜೆಡಿಎಸ್‌ ಹಾಗೂ ಕೆಲವು ಸಂಘಟನೆಗಳು ಮಾತ್ರ ಬಂದ್‌ನಲ್ಲಿ ಪಾಲ್ಗೊಳ್ಳಲಿವೆ.

ಕರ್ನಾಟಕ ಬಂದ್ ಕರೆ ಹಿನ್ನೆಲೆಯಲ್ಲಿ ಸೆ.29ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಿ, ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಗುರುವಾರ ಆದೇಶ ಹೊರಡಿಸಿದೆ.

ಪದವಿ, ಸ್ನಾತಕ ವಿಭಾಗದ 2, 4 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಅಕ್ಟೋಬರ್ 30ಕ್ಕೆ ಮುಂದೂಡಲಾಗಿದೆ ಎಂದು ಮೌಲ್ಯಮಾಪನ ಕುಲಸಚಿವ ಶಿವಾನಂದ ಗೋರನಾಳೆ ತಿಳಿಸಿದ್ದಾರೆ.

ಚಿಕ್ಕೋಡಿ ಉಪವಿಭಾಗದಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಬೆಂಬಲ ನೀಡಿದ್ದಾರೆ‌. ಕಾವೇರಿ ಕರ್ನಾಟಕದ ಹೃದಯ, ಹೀಗಾಗಿ ನಾಳೆ ಹೋರಾಟ ಮಾಡ್ತೀವಿ. ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಪ್ರವೀಣ್ ಶೆಟ್ಟಿ ಬಣ ಚಿಕ್ಕೋಡಿ ತಾಲೂಕು ಅಧ್ಯಕ್ಷ ಕೃಷ್ಣಾ ಕೆಂಚನ್ನವರ್ ಹೇಳಿಕೆ ನೀಡಿದ್ದು, ನಾಳೆಯ ಬಂದ್‌ಗೆ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ಸಂಪೂರ್ಣ ಬೆಂಬಲವಿದೆ‌.

ಈಗಾಗಲೇ ಬಸ್ ಸೇವೆ ಸ್ಥಗಿತ ಮಾಡುವಂತೆ KSRTC ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಅಂಗಡಿ ಮುಂಗಟ್ಟು ಬಂದ್ ಮಾಡಲು ವ್ಯಾಪಾರಸ್ಥರಿಗೂ ಸಹಕರಿಸಲು ಮನವಿ ಮಾಡಿದ್ದೇವೆ ನಾಳೆ ಬೆಳಗ್ಗೆ ಸರ್ಕಾರದ ಶವಯಾತ್ರೆ ಮಾಡಿ ಪ್ರತಿಭಟನೆಗೆ ನಿರ್ಧಾರ ಮಾಡಿದ್ದು ನಾಳೆ ಬೆಳಗ್ಗೆ ಚಿಕ್ಕೋಡಿ ಪ್ರವಾಸಿ ಮಂದಿರದಿಂದ ಬಸವೇಶ್ವರ ವೃತ್ತದವರೆಗೆ ಪ್ರತಿಭಟನಾ ರ‌್ಯಾಲಿಗೆ ತೀರ್ಮಾನ ಮಾಡಿದ್ದೇವೆ.

ಮತ್ತೊಂದೆಡೆ ಕಾವೇರಿ ಹೋರಾಟಕ್ಕೆ ಬೆಂಬಲವಿದೆ ಆದ್ರೆ ಬಂದ್‌ಗೆ ಬೆಂಬಲ ಇಲ್ಲ ಎಂದ ರೈತ ಮುಖಂಡರು, ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಕೋಡಿಹಳ್ಳಿ ಚಂದ್ರಶೇಖರ್ ಬಣದ ಚಿಕ್ಕೋಡಿ ತಾಲೂಕು ಅಧ್ಯಕ್ಷ ಮಂಜುನಾಥ ಪರಗೌಡ ಹೇಳಿಕೆ ನೀಡಿದ್ದು, ಕಾವೇರಿ ಕರ್ನಾಟಕದ ರೈತರ ಆಸ್ತಿ ಕನ್ನಡಿಗರ ಆಸ್ತಿ, ಅದನ್ನ ಕಾಪಾಡಿಕೊಳ್ಳಲು ಎಲ್ಲ ಸಂಘಟನೆಗಳು ಬೆಂಬಲ ನೀಡುತ್ತಿದ್ದಾರೆ, ಅದಕ್ಕೆ ನಮ್ಮ ಬೆಂಬಲವೂ ಇದೆ.

ಆದ್ರೆ ನಾವು ನಾಳೆಯ ಕರ್ನಾಟಕ ಬಂದ್‌ಗೆ ಬೆಂಬಲ ನೀಡಿಲ್ಲ. ಚಿಕ್ಕೋಡಿ ಉಪವಿಭಾಗದಲ್ಲಿ ಭೀಕರ ಬರಗಾಲ ಇದ್ದು ರೈತರೇ ಕೂಲಿ ಕೆಲಸಕ್ಕೆ ಹೋಗವ ಸ್ಥಿತಿ ಇದೆ. ರೈತರ ಪರಿಸ್ಥಿತಿ ಸಂಕಷ್ಟದಲ್ಲಿದ್ದು ಬಂದ್ ಮಾಡಿದ್ರೆ ತೊಂದರೆ ಆಗುತ್ತೆ.

ಕಾವೇರಿ ಹೋರಾಟಕ್ಕೆ ನಮ್ಮ ಬೆಂಬಲ ಕದೆ, ಆದ್ರೆ ಬಂದ್ ಗೆ ಬೆಂಬಲ ಇಲ್ಲ ಕಾವೇರಿ ಹೋರಾಟ ರೀತಿ ಕೃಷ್ಣಾ ನದಿ ಹೋರಾಟಕ್ಕೂ ಬೆಂಬಲ ನೀಡುವಂತೆ ರೈತ ಮುಖಂಡ ಮಂಜುನಾಥ ಪರಗೌಡ ಮನವಿ ಮಾಡಿದ್ದಾರೆ