ಉ.ಕ ಸುದ್ದಿಜಾಲ ವಿಜಯಪೂರ :

ಮಕ್ಕಳ ಹಡೆದಿದ್ದೇವೆ.. ಈಗ ಮಕ್ಕಳೇ ಇಲ್ಲ ನೋಡ್ರಿ.. ನಾಲ್ಕು ದಿನ ಆಯ್ತು ಹೊರಗೆ ಬಿದ್ದೇವ್ರಿ.. ನಾವು ರೋಡ್ ಮ್ಯಾಲೇ ಕೂತೆವ್ರಿ. ಎಲ್ ಹೋಗನ್ರಿ. ಏನ್ ಮಾಡೋನ್ರಿ. ನಮ್ದು ಸಾಯೋ ಕಾಲ. ಮನೆಗೆ ಬಿದ್ದು ಸಾಯ್ತೇವ್ರಿ.

ಪಕ್ಕದ ಮನೆಯವ್ರು ದಿನಾ ರೊಟ್ಟಿ ಕೊಡ್ತಾರಿ.. ಮಗ ಚೆನ್ನಾಗಿರ್ಲಿ ಅಂತಾ ಸಾಲ ಮಾಡಿ ಕೊಟ್ಟಿದ್ಕ ನಮ್ಗೆ ಈ ಸ್ಥಿತಿ ತಂದಾನ್ರಿ ’ ಎನ್ನುತ್ತ ವಿಜಯಪುರದಲ್ಲಿ ಬೀದಿ ಬೀದಿ ಅಲೆಯುತ್ತ ವೃದ್ಧ ದಂಪತಿ ಕಣ್ಣೀರು ಹಾಕ್ತಿದೆ..

ಕಣ್ಣೀರಿಗೆ ಕಾರಣ ಆಯ್ತು ಮಗ ಚೆನ್ನಾಗಿರ್ಲಿ ಅಂತಾ ಮಾಡಿದ ಸಾಲ

ಹೌದು, ವಿಜಯಪುರ ಆಲಕುಂಟೆ ನಗರದಲ್ಲಿ ಈ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿದೆ. ವೀರಭದ್ರ, ಬಾಗಮ್ಮ ಹಡಪದ ದಂಪತಿ ಮಗನಿಗೋಸ್ಕರ ಐದು ವರ್ಷದ ಹಿಂದೆ ಐದು ಲಕ್ಷ ಸಾಲ ಮಾಡಿ ಇದೀಗ ಬೀದಿ ಪಾಲಾಗಿದ್ದಾರೆ. ಹಿರಿಯ ಮಗ ಬಸವರಾಜ್ ಹಡಪದ ಉದ್ಯೋಗಕ್ಕಾಗಿ ದಂಪತಿ ಸಾಲ ಮಾಡಿ ಕೊಟ್ಟಿದ್ದರು.

ಸಾಲ ತೀರಿಸಬೇಕಿದ್ದ ಮಗ ಬಸವರಾಜ್, ತಲೆ ಕೆಡಿಸಿಕೊಳ್ತಿಲ್ಲ. ಬೇರೆ ಮನೆ ಮಾಡಿಕೊಂಡು ಹೆಂಡತಿ, ಮಕ್ಕಳ ಜೊತೆ ಆರಾಮಾಗಿದ್ದಾನೆ.

ಹೆತ್ತವರ ಸಂಕಟ ಏನು..?

5 ವರ್ಷಗಳ ಹಿಂದೆ ಮಾಡಿದ್ದ ಸಾಲಕ್ಕೆ ಪ್ರತಿ ತಿಂಗಳು 14 ಸಾವಿರ ರೂಪಾಯಿ ಕಟ್ಟಬೇಕಿತ್ತು. ‘ಜನ ಸ್ಮಾಲ್ ಫೈನಾನ್ಸ್‌’ಗೆ ಹಣ ನೀಡಬೇಕಿತ್ತು. ಆದರೆ ಹಿರಿಯ ಮಗ ಸರಿಯಾಗಿ ಸಾಲ ತುಂಬಲಿಲ್ಲ. ಫೈನಾನ್ಸ್ ಸಿಬ್ಬಂದಿ ವೃದ್ಧ ದಂಪತಿ ಬಳಿ ಹಣ ಪಾವತಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಕಳೆದ ಒಂದು ವರ್ಷದವರೆಗೆ ಸಾಲ ತುಂಬುತ್ತ ಬಂದಿದ್ದರು. ವರ್ಷದ ಈಚೆಗೆ ದುಡಿಯಲು ಸಾಧ್ಯವಾಗದ ಕಾರಣ ಬಾಕಿ ಹಣ ತುಂಬೋದನ್ನು ನಿಲ್ಲಿಸಿಬಿಟ್ಟಿದ್ದರು.

ಇದರಿಂದ ಫೈನಾನ್ಸ್ ಸಂಸ್ಥೆ ಕೋರ್ಟ್ ಮೊರೆ ಹೋಗಿ ಮನೆ ಸೀಜ್ ಮಾಡಿದ್ದಾರೆ. ಮನೆಯ ಮುಂದೆ ನೋಟಿಸ್ ಅಂಟಿಸಿ ಹೋಗಿದ್ದಾರೆ. ಪರಿಣಾಮ ವೃದ್ಧ ದಂಪತಿ ಕಳೆದ ನಾಲ್ಕು ದಿನಗಳಿಂದ ಬೀದಿ ಮೇಲೆ ವಾಸವಿದ್ದಾರೆ. ಮನೆಗೆ ಬೀಗ ಜಡಿದಿರುವ ಫೈನಾನ್ಸ್, ಒಳಗೆ ಹೋದರೆ ದಂಡ ವಿಧಿಸೋದಾಗಿ ಹೇಳಿದೆ.

ಈ ದಂಪತಿಗೆ ಇಬ್ಬರು ಗಂಡು ಮಕ್ಕಳು. ದೊಡ್ಡ ಮಗ ಹೆತ್ತವರಿಂದ ಸಾಲ ಮಾಡಿಸಿ ಬೇರೆ ಮನೆ ಮಾಡಿಕೊಂಡ ಆರಾಮಾಗಿದ್ದಾನೆ. ಇನ್ನೊಬ್ಬ ಕಿರಿಯ ಮಗ ಕುಡುಕ. ಮನೆ ಸೀಜ್ ಮಾಡಿದ ವಿಚಾರ ತಿಳಿಸಿದಾಗ, ಸಾಲ ತುಂಬಲು ನನ್ನ ಬಳಿ ಆಗಲ್ಲ. ಬೇಕಿದ್ದರೆ ಊಟ ತಂದು ಕೊಡ್ತೀನಿ ಎಂದಿದ್ದಾನಂತೆ.

ದಂಪತಿಯ ಅಳಲು ಏನು..?

ಮಗ ಚೆನ್ನಾಗಿರ್ಲಿ, ಒಳ್ಳೆ ಉದ್ಯೋಗ ಇರ್ಲಿ, ಚೆನ್ನಾಗ ಮಾಡ್ಕೊಂಡು ತಿನ್ಲಿ ಅಂತಾ ಐದು ವರ್ಷದ ಹಿಂದೆ ಐದು ಲಕ್ಷ ಸಾಲ ಮಾಡಿಕೊಟ್ಟೆ. ಒಂದು ವರ್ಷ ಆಯ್ತು. ಹಣ ಕಟ್ಟೋಕೆ ಆಗ್ಲಿಲ್ಲ. ಈ ಈ ಮುದುಕ ಒಂದು ಲಕ್ಷ ಕೊಟ್ಟಾನ್ರಿ, ನಾನು ದುಡಿದು ದುಡಿದು ಕೊಟ್ಟೇನ್ರಿ.

ಅವನು ಕಟ್ಯಾನೋ? ಬಿಟ್ಯಾನೋ ದೇವ್ರಿಗೆ ಗೊತ್ರಿ. ಮಗ ಚೆನ್ನಾಗಿರ್ಲಿ ಅಂತಾ ನಾವು ಸಾಲ ತೀರ್ಸಿವಿ. ಈಗ ನಮ್ಮ ಕೈ ನಿಂತಿದೆ. ಕೆಲಸ ಮಾಡಲು ಶಕ್ತಿ ಇಲ್ಲ. ಅವ್ನು ಹತ್ರು ಹೇಳಿದ್ರೆ ಕಟ್ಟಲ್ಲ ಅಂತಾನೆ.

ನಾಲ್ಕು ದಿನ ಆಯ್ತು ಹೊರಗೆ ಬಿದ್ದಿವ್ರಿ ನೋಡಿ. ಒಳಗೆ ಹೋದ್ರ ದಂಡ ಹಾಕ್ತೀವಿ ಅಂದಾರ. ನಾವು ರೋಡ್ ಮ್ಯಾಲೇ ಕೂತೆವ್ರಿ. ಎಲ್ ಹೋಗನ್ರಿ. ಏನ್ ಮಾಡೋನ್ರಿ. ಬ್ಯಾಂಕ್ ಅವ್ರು ಬಂದಾಗ ಇಲ್ಲಿಗೆ ಬರ್ಬೇಕಲ್ರಿ. ಬಂದೇ ಇಲ್ಲ ನೋಡ್ರಿ. ಮಕ್ಕಳ ಹಡೆದೆವ್ರಿ. ಈಗ ಮಕ್ಕಳೇ ಇಲ್ರಿ. ಈಂಥ ಮಕ್ಕಳು ನಮ್ಗೆ ಬೇಡ್ರಿ.

ನಮ್ದು ಸಾಯೋ ಕಾಲ. ಮನೆಗೆ ಬಿದ್ದು ಸಾಯ್ತೇವ್ರಿ. ಮಕ್ಕಳೇ ಹಿಂಗೆ ಮಾಡಿದ್ರೆ ನಮ್ನ ಹೆಂಗೆ ನೋಡ್ತಾರೆ. ಬಾಜಿ ಮನೆಯವ್ರು ದಿನಾ ಒಂದೊಂದು ರೊಟ್ಟಿ ಕೊಡ್ತಾರಿ.. ಎನ್ನುತ್ತ ಬಾಗಮ್ಮ ಕಣ್ಣೀರು ಇಟ್ಟಿದ್ದಾರೆ.