ಉ.ಕ ಸುದ್ದಿಜಾಲ ರಾಯಬಾಗ :
ಕೃಷ್ಣಾ ನದಿಯಲ್ಲಿ ಆಟವಾಡುತ್ತಿದ್ದ ವೇಳೆ ಏಳು ವರ್ಷದ ಬಾಲಕನೊಬ್ಬ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಶಿರಗೂರ ಸಮೀಪ ಸಂಭವಿಸಿದೆ. ಪ್ರಣವ ಸುನೀಲ ಕಾಂಬಳೆ (7) ವರ್ಷದ ಮೃತ ದುರ್ದೈವಿ ಬಾಲಕ ಎಂದು ಗುರುತಿಸಲಾಗಿದೆ.
ಪ್ರಣವ ಮೂಲತಃ ಉಗಾರ ಖುರ್ದ ನಿವಾಸಿಯಾಗಿದ್ದು, ಪ್ರಸ್ತುತ ತಾಯಿಯ ಜೊತೆ ಶಿರಗೂರದಲ್ಲಿ ವಾಸವಾಗಿದ್ದ ಎನ್ನಲಾಗಿದೆ. ಮೇ 31ರ ಭಾನುವಾರ ಬೆಳಿಗ್ಗೆ ಬಾಲಕನ ತಾಯಿ ಪೂಜಾ ಬಟ್ಟೆ ತೊಳೆಯಲೆಂದು ಕೃಷ್ಣಾ ನದಿಗೆ ತೆರಳಿದ್ದ ವೇಳೆ, ತಾಯಿಯೊಂದಿಗೆ ಹೋಗಿದ್ದ ಪ್ರಣವ ನದಿಯ ನೀರಿನಲ್ಲಿ ಆಟವಾಡುತ್ತಿದ್ದನು.
ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾನೆ. ಮಗನನ್ನು ಉಳಿಸಲು ತಾಯಿಯೂ ಕೂಡ ನೀರಿಗೆ ಹಾರಿದ್ದಾಳೆ. ವಿಷಯ ತಿಳಿದ ಕೂಡಲೇ ಕುಟುಂಬಸ್ಥರು, ಗ್ರಾಮಸ್ಥರು ಬಂದು ಪೂಜಾಳನ್ನು ಮೇಲಕ್ಕತ್ತುವ ವೇಳೆಯಲ್ಲಿ ಪ್ರಜ್ಞಾಹಿನಾವಸ್ಥೆಯಲ್ಲಿದ್ದಳು.
ಸದ್ಯ ಕುಡಚಿ ಪಟ್ಟಣದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತಿದ್ದಾಳೆ. ಮಧ್ಯಾಹ್ನ ಸುಮಾರು 12 ಗಂಟೆ ವೇಳೆಗೆ ಬಾಲಕನ ಶವ ನದಿಯಲ್ಲಿ ಪತ್ತೆಯಾಗಿದೆ. ನೀರಿನಲ್ಲಿ ಮುಳುಗಿದ್ದರಿಂದಲೇ ಬಾಲಕ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
