ಉ.ಕ ಸುದ್ದಿಜಾಲ ಕಾಗವಾಡ :
ಜೋಡೆತ್ತಿನ ಕೃಷಿ ಸಂಸ್ಕೃತಿ ಪುನಶ್ಚೇತನಕ್ಕೆ ಕಾನೂನು ಜಾರಿಗೆ ತರಬೇಕು ಹಾಗೂ ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ₹11 ಸಾವಿರ ಪ್ರೋತ್ಸಾಹಧನ ನೀಡಬೇಕು ಎಂದು ಆಗ್ರಹಿಸಿ ಕಾಗವಾಡ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರಿಗೆಹಕ್ಕೊತ್ತಾಯ ಪತ್ರ ಸಲ್ಲಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಕಾಗವಾಡ ಪಟ್ಟಣದಲ್ಲಿ ನೂರಾರು ರೈತರು ಎತ್ತಿನ ಬಂಡಿಗಳ ಮೂಲಕ ಪ್ರತಿಭಟನೆ ಮಾಡಿದರು. ಎತ್ತಿನ ನೇಗಿಲಿನಿಂದ ಉಳುಮೆ ಮಾಡುವ ಮೂಲಕ ಮಣ್ಣಿನ ಫಲವತ್ತತೆ ಹಾಗೂ ಪಂಚಮಹಾಭೂತಗಳ ಸಂರಕ್ಷಣೆಗೆ ಕೊಡುಗೆ ನೀಡುತ್ತಿರುವ ಜೋಡೆತ್ತಿನ ಕೃಷಿಕರನ್ನು ‘ನೇಗಿಲಯೋಗಿಗಳು’ ಎಂದು ಪರಿಗಣಿಸಿ ಸರ್ಕಾರ ವಿಶೇಷ ಯೋಜನೆ ರೂಪಿಸಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ಆಧುನಿಕ ಕೃಷಿ ಪದ್ಧತಿಗಳ ನಡುವೆ ಜೋಡೆತ್ತಿನ ಕೃಷಿಕರ ಸಂಖ್ಯೆ ಕ್ಷೀಣಿಸುತ್ತಿದ್ದು, ಇದರಿಂದ ಸಾಂಪ್ರದಾಯಿಕ ಕೃಷಿ ಸಂಸ್ಕೃತಿ ಮತ್ತು ಪರಿಸರ ಸ್ನೇಹಿ ಕೃಷಿ ಪದ್ಧತಿ ನಶಿಸುವ ಆತಂಕವಿದೆ. ಹೀಗಾಗಿ ಜೋಡೆತ್ತಿನ ಕೃಷಿಯನ್ನು ಉಳಿಸಿ ಬೆಳೆಸಲು ರಾಜ್ಯ ಸರ್ಕಾರದ ಬಜೆಟ್ನಲ್ಲಿ 10 ಪ್ರತಿಶತ ಹಣವನ್ನು ಮೀಸಲಿಡುವ ಕಾನೂನು ಜಾರಿಗೆ ತರಬೇಕು ಎಂದು ಆಗ್ರಹಿಸಲಾಗಿದೆ.
ಜತೆಗೆ ಜೋಡೆತ್ತಿನ ಕೃಷಿಕರಿಗೆ ಮಾಸಿಕ ₹11,000 ಪ್ರೋತ್ಸಾಹಧನ, ಗುಣಮಟ್ಟದ ಬೀಜ, ಔಷಧಿ ಹಾಗೂ ಗೊಬ್ಬರಕ್ಕೆ ಸಹಾಯಧನ ನೀಡಬೇಕು. ಸಾವಯವ ಹಾಗೂ ಪರಿಸರ ಸ್ನೇಹಿ ಕೃಷಿಗೆ ಉತ್ತೇಜನ ನೀಡಿ ಗ್ರಾಮಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಬೇಕು ಎಂದು ಹಕ್ಕೊತ್ತಾಯ ಪತ್ರದಲ್ಲಿ ಮನವಿ ಮಾಡಲಾಗಿದೆ.
ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಆರಂಭಗೊಂಡ ‘ನಂದಿ ಕೂಗು’ ಅಭಿಯಾನದ ಮೂಲಕ ಕಳೆದ ಹಲವು ವರ್ಷಗಳಿಂದ ನಂದಿ ಕೃಷಿ ಸಂಸ್ಕೃತಿ ಉಳಿವಿಗಾಗಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಜೋಡೆತ್ತಿನ ಬಂಡಿಗಳ ಮೂಲಕ ರೈತರು ತಹಶೀಲ್ದಾರ್ ಕಚೇರಿಗೆ ಆಗಮಿಸಿ ಹಕ್ಕೊತ್ತಾಯ ಪತ್ರವನ್ನು ಸಲ್ಲಿಸುವ ಮೂಲಕ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.
ಮುಖ್ಯ ಬೇಡಿಕೆಗಳು :
ರಾಜ್ಯ ಬಜೆಟ್ನ ಶೇ.10ರಷ್ಟು ಹಣವನ್ನು ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನಕ್ಕೆ ಮೀಸಲು
ಜೋಡೆತ್ತಿನ ಕೃಷಿಕರಿಗೆ ಮಾಸಿಕ ₹11,000 ಪ್ರೋತ್ಸಾಹಧನ ಎತ್ತಿನ ಕೃಷಿಗೆ ವಿಶೇಷ ಸರ್ಕಾರಿ ಯೋಜನೆ
ಸಾವಯವ ಕೃಷಿ ಹಾಗೂ ಗುಣಮಟ್ಟದ ಆಹಾರ ಉತ್ಪಾದನೆಗೆ ಉತ್ತೇಜನ, ಜೋಡೆತ್ತಿನ ಕೃಷಿ ಸಂಸ್ಕೃತಿ ಸಂರಕ್ಷಣೆಗೆ ಕಾನೂನು ಜಾರಿ
