ಉ.ಕ. ಸುದ್ದಿಜಾಲ | ಹುಕ್ಕೇರಿ :

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ಪಂಚಾಯಿತಿ ಆವರಣದಲ್ಲಿರುವ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ಸವಿತಾ ಹಲಕಿ ಅವರು ₹15 ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಹುಕ್ಕೇರಿ ತಾಲೂಕು ಅಕ್ಷರ ದಾಸೋಹ ಯೋಜನೆಯ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಬಿಸಿಯೂಟ ಯೋಜನೆಯ ಹಿಂದಿನ ಅವಧಿಯ ಕ್ಯಾಶ್ ಬುಕ್ ಸರಿಪಡಿಸಿಕೊಡುವುದಕ್ಕಾಗಿ ದೈಹಿಕ ಶಿಕ್ಷಣ ಶಿಕ್ಷಕ ಪಿ.ಎಂ. ಹೆಜ್ಜೆ ಅವರಿಂದ ಸವಿತಾ ಹಲಕಿ ಅವರು ₹15 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಶಿಪ್ಪೂರ ಹೈಸ್ಕೂಲ್‌ನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಪಿ.ಎಂ. ಹೆಜ್ಜೆ ಅವರು ಸದ್ಯ ಬೆಳಗಾವಿ ತಾಲೂಕಿನ ಮುತ್ನಾಳ ಹೈಸ್ಕೂಲ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಣ ನೀಡುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಸವಿತಾ ಹಲಕಿ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.

ಲೋಕಾಯುಕ್ತ ಇನ್ಸ್‌ಪೆಕ್ಟರ್ ವೆಂಕಟೇಶ್ ಯಡಹಳ್ಳಿ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳದಲ್ಲಿ ವಿಚಾರಣೆ ಮತ್ತು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಲಂಚದ ಆರೋಪದ ಕುರಿತು ಲೋಕಾಯುಕ್ತ ಅಧಿಕಾರಿಗಳ ತನಿಖೆ ಮುಂದುವರಿದಿದೆ.